ಸಾರಾಂಶ
1.5 ವರ್ಷದಲ್ಲಿ ಏಕದಿನದ ಅತಿ ಗರಿಷ್ಠ ಕುಸಿತ ಉಂಟಾಗಿದ್ದು, ಒಂದೇ ದಿನ ಹೂಡಿಕೆದಾರರ 4.6 ಲಕ್ಷ ಕೋಟಿ ರು. ಸಂಪತ್ತು ಮಾಯವಾದ ಘಟನೆ ಭಾರತೀಯ ಷೇರುಪೇಟೆ ಸೆನ್ಸೆಕ್ಸ್‌ನಲ್ಲಿ ನಡೆದಿದೆ.
ಮುಂಬೈ: ಇತ್ತೀಚೆಗೆ 73 ಸಾವಿರ ಅಂಕ ದಾಟಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಬುಧವಾರ ಒಂದೇ ದಿನ 1628 ಅಂಕಗಳ ಭಾರೀ ಇಳಿಕೆ ಕಂಡಿದೆ. ಇದೇ ವೇಳೆ ನಿಫ್ಟಿ ಕೂಡಾ 456 ಅಂಕ ಕುಸಿದಿದೆ. ಷೇರುಪೇಟೆ ಏಕದಿನದಲ್ಲಿ ಇಷ್ಟು ಪ್ರಮಾಣ ಕುಸಿದಿದ್ದು 18 ತಿಂಗಳಲ್ಲಿ ಇದೇ ಮೊದಲು.ಇದರ ಪರಿಣಾಮ ಹೂಡಿಕೆದಾರರ 4.59 ಲಕ್ಷ ಕೋಟಿ ರು. ಸಂಪತ್ತು ಒಂದೇ ದಿನದಲ್ಲಿ ಮಾಯವಾಗಿ ಹೋಗಿದೆ.ಸೆನ್ಸೆಕ್ಸ್ ಬುಧವಾರ 1628 ಅಂಕಗಳ ಇಳಿಕೆ ಕಂಡು 71500 ಅಂಕಗಳಲ್ಲಿ ಮುಕ್ತಾಯವಾದರೆ, ನಿಫ್ಟಿ 460 ಅಂಕಗಳ ಕುಸಿತ ಕಂಡಿದ್ದು, 21571 ಅಂಕಗಳಲ್ಲಿ ಕೊನೆಗೊಂಡಿತು.ಇಳಿಕೆಗೆ ಪ್ರಮುಖ ಕಾರಣ?:ಸೂಚ್ಯಂಕದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೊಂದಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಮಂಗಳವಾರ ತನ್ನ ತ್ರೈಮಾಸಿಕ ವರದಿ ಪ್ರಕಟಿಸಿತ್ತು. ವರದಿಯಲ್ಲಿ ಕಂಪನಿ 16372 ಕೋಟಿ ರು. ಭರ್ಜರಿ ಲಾಭ ದಾಖಲಿಸಿದ್ದರೂ ನೆಟ್ ಇಂಟ್ರಸ್ಟ್ ಮಾರ್ಜಿನ್ ಪ್ರಮಾಣ ಕಡಿತ ಮಾಡಿದ್ದು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದೆ.