ಕಾಶ್ಮೀರ : ಅಮೆರಿಕ ಗನ್‌ ಬಳಸಿ, ವಿದೇಶಿ ಉಗ್ರರಿಂದ ಬಸ್‌ ಮೇಲೆ ದಾಳಿ

| Published : Jun 11 2024, 01:32 AM IST / Updated: Jun 11 2024, 10:18 AM IST

ಕಾಶ್ಮೀರ : ಅಮೆರಿಕ ಗನ್‌ ಬಳಸಿ, ವಿದೇಶಿ ಉಗ್ರರಿಂದ ಬಸ್‌ ಮೇಲೆ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಶ್ಮೀರ ಬಸ್‌ ದಾಳಿಯಲ್ಲಿ ವಿದೇಶಿ ಕೈವಾಡವಿರುವುದು ದೃಢಪಟ್ಟಿದ್ದು, ಟಿಆರ್‌ಎಫ್‌ ಹೊಣೆ ಹೊತ್ತುಕೊಂಡಿದೆ.

ಜಮ್ಮು: ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್‌ ಮೇಲೆ ಭಾನುವಾರ ನಡೆದ ಉಗ್ರ ದಾಳಿಯಲ್ಲಿ ವಿದೇಶಿ ಉಗ್ರ ಸಂಘಟನೆಗಳ ಕೈವಾಡ ವ್ಯಕ್ತವಾಗಿದೆ. 

9 ಜನರನ್ನು ಬಲಿ ಪಡೆದ ದಾಳಿಯಲ್ಲಿ ಮೂವರು ವಿದೇಶಿ ಉಗ್ರರು ಭಾಗಿಯಾಗಿರುವ ಮತ್ತು ದಾಳಿಗೆ ಅಮೆರಿಕ ನಿರ್ಮಿತ ಎಂ-4 ರೈಫಲ್‌ ಬಳಸಿರುವುದು ಪ್ರಾಥಮಿಕ ತನಿಖೆ ವೇಳೆ ಖಚಿತಪಟ್ಟಿದೆ.

ಈ ನಡುವೆ ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್‌ ಫ್ರಂಟ್‌ (ಟಿಆರ್‌ಎಫ್‌) ಎಂಬ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಯಾತ್ರಾರ್ಥಿಗಳಿದ್ದ ಬಸ್‌ ಮೇಲೆ ರೀಸಿಯಲ್ಲಿ ದಾಳಿ ಮಾಡಿದ್ದು ನಾವೇ. ಇದು ಕೇವಲ ಆರಂಭವಷ್ಟೇ. ಇನ್ನು ಮುಂದೆಯೂ ಸಹ ಸ್ಥಳೀಯರು ಮತ್ತು ಪ್ರವಾಸಿಗರ ಮೇಲೆ ಮತ್ತಷ್ಟು ಭಯಾನಕ ದಾಳಿಗಳು ನಡೆಯಲಿವೆ ಎಂದು ಎಚ್ಚರಿಸಿದೆ.

ಹುಡುಕಾಟ:

ಬಸ್‌ ಮೇಲೆ ದಾಳಿ ಬಳಿಕ ಉಗ್ರರು ಸಮೀಪದ ಕಾಡಿನೊಳಗೆ ಅವಿತಿರುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಭಾರೀ ಹುಡುಕಾಟ ನಡೆಸಿವೆ.

ಈ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ತನಿಖಾ ದಳ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ವಿಧಿವಿಜ್ಞಾನ ತಜ್ಞರೊಂದಿಗೆ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದೆ.

ಗುರುತು ಪತ್ತೆ:

ದಾಳಿಯಲ್ಲಿ ಮೃತರಾದ 9 ಮಂದಿಯಲ್ಲಿ ರಾಜಸ್ಥಾನದ ನಾಲ್ವರು ಹಾಗೂ ಉತ್ತರ ಪ್ರದೇಶದ ಮೂವರು ಸಾವನ್ನಪ್ಪಿರುವುದು ಖಚಿತವಾಗಿದೆ. ಇದರ ಜೊತೆಗೆ ಬಸ್‌ ಚಾಲಕ ಹಾಗೂ ನಿರ್ವಾಹಕ ಕೂಡ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 41 ಮಂದಿಯನ್ನು ಜಮ್ಮುವಿನಲ್ಲಿರುವ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರಿಗೆ ಪರಿಹಾರ: ಜಮ್ಮು ಕಾಶ್ಮೀರದ ಉಪರಾಜ್ಯಪಾಲ ಮನೋಜ್‌ ಸಿನ್ಹಾ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರು. ಪರಿಹಾರ ಪ್ರಕಟಿಸಿದ್ದಾರೆ.