ಜೈಷ್‌ ಮುಖ್ಯಸ್ಥ ಅಜರ್ ಕುಟುಂಬದ 10 ಜನ ಫಿನಿಶ್‌

| N/A | Published : May 08 2025, 12:33 AM IST / Updated: May 08 2025, 04:46 AM IST

Jaish e Mohammad Masood Azhar

ಸಾರಾಂಶ

1999ರಲ್ಲಿ ತನ್ನ ಕಾರ್ಯಕರ್ತರ ಮೂಲಕ ಏರ್‌ಇಂಡಿಯಾ ವಿಮಾನ ಅಪಹರಣ ಮಾಡಿಸಿ, ಬಳಿಕ ವಿಮಾನದಲ್ಲಿನ ಪ್ರಯಾಣಿಕರ ಬಿಡುಗಡೆಗೆ ಬದಲಾಗಿ ಭಾರತದ ಜೈಲಿಂದ ಬಿಡುಗಡೆಯಾಗಿದ್ದ ಜೈಷ್‌ ಎ ಮೊಹಮ್ಮದ್‌ ನಾಯಕ ಅಜರ್‌ ಮಸೂದ್‌ಗೆ ಭಾರತೀಯ ಸೇನೆ ಭರ್ಜರಿ ಪೆಟ್ಟು ನೀಡಿದೆ.

ಲಾಹೋರ್‌: 1999ರಲ್ಲಿ ತನ್ನ ಕಾರ್ಯಕರ್ತರ ಮೂಲಕ ಏರ್‌ಇಂಡಿಯಾ ವಿಮಾನ ಅಪಹರಣ ಮಾಡಿಸಿ, ಬಳಿಕ ವಿಮಾನದಲ್ಲಿನ ಪ್ರಯಾಣಿಕರ ಬಿಡುಗಡೆಗೆ ಬದಲಾಗಿ ಭಾರತದ ಜೈಲಿಂದ ಬಿಡುಗಡೆಯಾಗಿದ್ದ ಜೈಷ್‌ ಎ ಮೊಹಮ್ಮದ್‌ ನಾಯಕ ಅಜರ್‌ ಮಸೂದ್‌ಗೆ ಭಾರತೀಯ ಸೇನೆ ಭರ್ಜರಿ ಪೆಟ್ಟು ನೀಡಿದೆ.

ಪಾಕ್‌ ಆಕ್ರಮಿತ ಕಾಶ್ಮೀರದ ಬಹಾವಲ್ಪುರದಲ್ಲಿನ ಮರ್ಕಜ್‌ ಸುಭಾನ್‌ ಉಗ್ರರ ಕ್ಯಾಂಪ್‌ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಅಜರ್‌ ಮಸೂದ್‌ನ ಕುಟುಂಬದ 10 ಸದಸ್ಯರು ಮತ್ತು ಇತರೆ ನಾಲ್ವರು ಆಪ್ತರು ಸಾವನ್ನಪ್ಪಿದ್ದಾರೆ. ಇದು ಉಗ್ರನಿಗೆ ಬಿದ್ದ ಭಾರೀ ಪೆಟ್ಟು ಎಂದು ಬಣ್ಣಿಸಲಾಗಿದೆ. ಮರ್ಕಜ್‌ ಸುಭಾನ್‌, ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಕೇಂದ್ರ ಕಚೇರಿಯಾಗಿದ್ದು, ಇಲ್ಲೇ ಉಗ್ರರ ನೇಮಕ, ತರಬೇತಿ ನೀಡಲಾಗುತ್ತಿತ್ತು.

ಮಸೂದ್‌ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ‘ನನ್ನ ಕುಟುಂಬದ 10 ಸದಸ್ಯರು ಇಂದು ರಾತ್ರಿ ಈ ಸಂತೋಷಕ್ಕೆ ಪಾತ್ರರಾಗಿದ್ದಾರೆ. ಅವರಲ್ಲಿ 5 ಅಮಾಯಕ ಮಕ್ಕಳು, ನನ್ನ ಸೋದರಿ, ಅವರ ಗೌರವಾನಿತ್ವ ಪತಿ, ನನ್ನ ಸಂಬಂಧಿ ಫಾಝಿಲ್‌, ಆತನ ಪತ್ನಿ, ನನ್ನ ಆಪ್ತ ಫಾಜಿಲ್ಲಾ, ನನ್ನ ಸೋದರ ಹುಝೈಫಾ ಹಾಗೂ ಅವರ ತಾಯಿ ಹಾಗೂ ಇನ್ನಿಬ್ಬರು ಆತ್ಮೀಯರು ಸೇರಿದ್ದಾರೆ.  ಇಂದು ಮೃತಪಟ್ಟವರೆಲ್ಲಾ ಅಲ್ಲಾನ ಅತಿಥಿಗಳಾಗಿದ್ದಾರೆ. ಘಟನೆ ಬಗ್ಗೆ ನನಗೆ ವಿಷಾದವೂ ಇಲ್ಲ, ನಾನು ಹತಾಶನೂ ಆಗಿಲ್ಲ. ಅದರ ಬದಲಿಗೆ, ಆ 14 ಜನರ ಪ್ರಯಾಣದಲ್ಲಿ ನಾನು ಕೂಡಾ ಒಬ್ಬನಾಗಿರಬಾರದಿತ್ತೇ ಎಂದು ಪದೇ ಪದೇ ನನ್ನ ಹೃದಯ ಹೇಳುತ್ತಿದೆ. ಅವರ ವಿದಾಯದ ಸಮಯ ಬಂದಿದೆ, ಆದರೆ ದೇವರು ಅವರನ್ನು ಕೊಲ್ಲಲಿಲ್ಲ’ ಎಂದು ಹೇಳಿದ್ದಾನೆ.

ಇದಲ್ಲದೆ. ಈ ಕ್ರೂರ ಕೃತ್ಯವು ಎಲ್ಲಾ ಗಡಿಗಳನ್ನೂ ಮೀರಿದ್ದು, ಇನ್ನು ಕ್ಷಮೆಯ ಮಾತೇ ಇಲ್ಲ ಎಂದು ಎಚ್ಚರಿಸಿದ್ದಾನೆ.

ಜೈಷ್‌ ಸ್ಥಾಪಿಸಿ ಭಾರತಕ್ಕೆ ಕಾಡಿದ್ದ ಮೌಲಾನಾ

ಬಹಾವಲ್‌ಪುರ: ಪಾಕ್‌ ಮೇಲಿನ ಭಾರತದ ವಾಯುದಾಳಿಯಲ್ಲಿ ಭಾರತಕ್ಕೆ ಬೇಕಿದ್ದ ಉಗ್ರ ಮೌಲಾನಾ ಮಸೂದ್‌ ಅಜರ್‌ನ ಕುಟುಂಬ ಬಲಿಯಾಗಿದೆ. ಈತ ಜೈಷ್‌ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದು, 2000ನೇ ಇಸವಿಯಲ್ಲಿ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದ.

1999ರಲ್ಲಿ ನಡೆದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನವನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ಹೈಜಾಕ್‌ ಮಾಡಿದ ಘಟನೆ ಬಳಿಕ ಉಗ್ರರ ಒತ್ತಾಯದ ಮೇರೆಗೆ ಅಜರ್‌ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕ ಪಾಕಿಸ್ತಾನ ಸರ್ಕಾರದ ಗುಪ್ತಚರ ಸಂಸ್ಥೆ ಐಎಸ್‌ಐ, ಹಿಂದಿನ ತಾಲಿಬಾನ್‌ ಸರ್ಕಾರ ಮತ್ತು ಒಸಾಮಾ ಬಿನ್‌ ಲಾಡೆನ್‌, ಸುನ್ನಿ ಪ್ರತ್ಯೇಕತಾವಾದಿ ಸಂಘಟನೆಗಳ ನೆರವಿನೊಂದಿಗೆ ಮಸೂದ್‌ 2000ನೇ ಇಸವಿಯಲ್ಲಿ ಜೈಷ್ ಎ ಮೊಹಮ್ಮದ್‌ ಉಗ್ರ ಸಂಘಟನೆ ಸ್ಥಾಪಿಸಿದ್ದ.

 ಅದೇ ವರ್ಷ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೇಲಿನ ದಾಳಿ, 2001ರ ಸಂಸತ್‌ ದಾಳಿ, 2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ದಾಳಿ, 2019ರ ಪುಲ್ವಾಮಾ ದಾಳಿಗೆ ಕಾರಣನಾಗಿದ್ದ. ಜಾಗತಿಕ ಉಗ್ರ ಎಂದು ಘೋಷಿಸಲ್ಪಟ್ಟಿರುವ ಅಜರ್‌, 2019ರ ಬಳಿಕ ಎಲ್ಲೂ ಬಹಿರಂಗವಾಗಿ ಕಾಣಿಸಿ ಕೊಂಡಿಲ್ಲ. ಬಹಾವಲ್‌ಪುರದ ಮರ್ಕಜ್‌ ಸುಭಾನಲ್ಲಾಹ್‌ ಕೇಂದ್ರದಲ್ಲಿ ಜೈಷ್‌, ತನ್ನ ಸಂಘಟನೆಗೆ ಯುವಕರನ್ನು ನೇಮಕ ಮಾಡುವ ಮತ್ತು ಅವರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ. 40 ಜನರ ಬಲಿ ಪಡೆದ ಪುಲ್ವಾಮಾ ದಾಳಿಯ ಸಂಚು ರೂಪು ಇಲ್ಲೇ ರೂಪುಗೊಂಡಿತ್ತು. ಗಡಿಯಿಂದ 100 ಕಿ.ಮೀ ಒಳಗಿದೆ.