ಕೇರಳ ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯ

| N/A | Published : Oct 27 2025, 12:45 AM IST

Kerala CM Pinarayi Vijayan

ಸಾರಾಂಶ

ದೇಶದ ಮೊದಲ ಸಾಕ್ಷರ ರಾಜ್ಯ ಎಂಬ ಹಿರಿಮೆ ಹೊಂದಿದ್ದ ಕೇರಳ, ಇದೀಗ ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಯತ್ತ ಹೆಜ್ಜೆ ಇಟ್ಟಿದೆ. ಈ ಕುರಿತು, ರಾಜ್ಯ ಸಂಸ್ಥಾಪನಾ ದಿನವಾದ ನ.1ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.

ತಿರುವನಂತಪುರಂ: ದೇಶದ ಮೊದಲ ಸಾಕ್ಷರ ರಾಜ್ಯ ಎಂಬ ಹಿರಿಮೆ ಹೊಂದಿದ್ದ ಕೇರಳ, ಇದೀಗ ದೇಶದ ಮೊದಲ ಕಡುಬಡತನ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಯತ್ತ ಹೆಜ್ಜೆ ಇಟ್ಟಿದೆ. ಈ ಕುರಿತು, ರಾಜ್ಯ ಸಂಸ್ಥಾಪನಾ ದಿನವಾದ ನ.1ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.

ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ನ.1ರಂದು ಕೇರಳವನ್ನು ಕಡುಬಡತನ ಮುಕ್ತ ಭಾರತದ ಮೊದಲ ರಾಜ್ಯವೆಂದು ಘೋಷಿಸಲಾಗುವುದು. 2021ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂಥದ್ದೊಂದು ಸಾಧನೆ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಅದರಂತೆ ನಾವೀಗ ಸಾಧನೆ ಮಾಡಿದ್ದೇವೆ’ ಎಂದು ಹೇಳಿದ್ದಾರೆ.

ಕಡುಬಡತನ ಎಂದರೇನು?:

ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರದ ಅಂಕಿ ಅಂಶಗಳ ಅನ್ವಯ ದೈನಂದಿನ 190 ರು.ಗಿಂತ ಕಡಿಮೆ ಆದಾಯದ ಕುಟುಂಬಗಳನ್ನು ಕಡುಬಡತನದ ಕುಟುಂಬ ಎಂದು ಪರಿಗಣಿಸಲಾಗುತ್ತದೆ.

ಕಡುಬಡವರು ಪತ್ತೆ:

2021ರಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿದ್ದ ವರದಿ ಅನ್ವಯ ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಶೇ.0.7ರಷ್ಟು ಜನರು ಕಡುಬಡತನದಲ್ಲಿ ಇದ್ದರು. ಈ ಹಿನ್ನೆಲೆಯಲ್ಲಿ ಅಂಥ 64,006 ಕುಟುಂಬಗಳನ್ನು ಗುರುತಿಸಿ ಅವರ ಕಷ್ಟ ನಿವಾರಿಸಲು ಸರ್ಕಾರ 1,000 ಕೋಟಿ ರು.ಗಳ ಯೋಜನೆ ಹಮ್ಮಿಕೊಂಡಿತ್ತು.

ಏನೇನು ಕೊರತೆ?:

ಸರ್ಕಾರ ಗುರುತಿಸಿದ 64006 ಕುಟುಂಬಗಳು, ಆಹಾರ, ಆರೋಗ್ಯ, ಜೀವನೋಪಾಯ, ವಸತಿ, ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ಸಮಸ್ಯೆ ಹೊಂದಿದ್ದು ಪ್ರಾಥಮಿಕ ಅಧ್ಯಯನದಲ್ಲಿ ಕಂಡುಬಂದಿತ್ತು.

ಪರಿಹಾರಕ್ಕೆ ಕ್ರಮ:

ಹೀಗೆ ಕಡುಬಡವರೆಂದು ಪತ್ತೆಯಾದ ಕುಟುಂಬಗಳನ್ನು ಪತ್ತೆ ಮಾಡಿ ಒಟ್ಟು 20,648 ಕುಟುಂಬಗಳಿಗೆ ನಿತ್ಯ ಆಹಾರ, 2,210 ಕುಟುಂಬಗಳಿಗೆ ಬಿಸಿಯೂಟ, 85,721 ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿತ್ತು. ಜೊತೆಗೆ 5,400ಕ್ಕೂ ಅಧಿಕ ಮನೆಗಳ ನಿರ್ಮಾಣ, 5,522 ಮನೆಗಳ ದುರಸ್ತಿ, 2,713 ನಿರಾಶ್ರಿತ ಕುಟುಂಬಗಳಿಗೆ ಮನೆ ನಿರ್ಮಿಸಲು ಜಾಗ ಮಾಡಿಕೊಡಲಾಗಿತ್ತು. 21,263 ಜನರಿಗೆ ಮೊದಲ ಬಾರಿ ಪಡಿತರ ಕಾರ್ಡ್‌, ಆಧಾರ್‌ ಕಾರ್ಡ್‌ ಹಾಗೂ ಪಿಂಚಣಿ ಮಾಡಿಸಿಕೊಡಲಾಯಿತು. 4,394 ಕುಟುಂಬಗಳಿಗೆ ಜೀವನೋಪಾಯ ಯೋಜನೆ ಒದಗಿಸಲಾಗಿದೆ’ ಈ ಮೂಲಕ ಈ ಎಲ್ಲಾ ಕುಟುಂಬಗಳನ್ನು ಕಡುಬಡತನಿಂದ ಹೊರತರಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ತಲಾದಾಯ: 2024-25ರಲ್ಲಿ ಭಾರತದಲ್ಲಿ ಒಬ್ಬ ವ್ಯಕ್ತಿಯ ವಾರ್ಷಿಕ ಸರಾಸರಿ ಆದಾಯ 2,05,324 ರು. ಕೇರಳೀಯರ ವಾರ್ಷಿಕ ಸರಾಸರಿ ಆದಾಯ 3,72,783 ರು. ನಷ್ಟಿತ್ತು. ಅಂದರೆ ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚು.

Read more Articles on