ಲೋಕಸಭಾ ಸದಸ್ಯತ್ವಕ್ಕೆ ಟಿಎಂಸಿ ಸಂಸದೆ ಮಿಮಿ ರಾಜೀನಾಮೆ

| Published : Feb 16 2024, 01:47 AM IST

ಸಾರಾಂಶ

ನನಗೆ ರಾಜಕೀಯ ಒಗ್ಗಲ್ಲ. ಸ್ಥಳೀಯ ನಾಯಕರ ಜತೆ ಭಿನ್ನಮತ ಕಾರಣ ಸಂಸದ ಸ್ಥಾನಕ್ಕೆ ಗುಡ್‌ಬೈ ಹೇಳುತ್ತಿರುವುದಾಗಿ ಮಮತಾಗೆ ಬರೆದಿರುವ ಪತ್ರದಲ್ಲಿ ಮಿಮಿ ತಿಳಿಸಿದ್ದಾರೆ.

ಕೋಲ್ಕತಾ: ಪ.ಬಂಗಾಳದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ಗೆ ಆಘಾತವಾಗಿದೆ. ಪ.ಬಂಗಾಳದ ಜಾದವ್‌ಪುರ ಟಿಎಂಸಿ ಸಂಸದೆ, ನಟಿ ಮಿಮಿ ಚಕ್ರವರ್ತಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರು ರಾಜೀನಾಮೆಯನ್ನು ಲೋಕಸಭೆ ಸ್ಪೀಕರ್‌ಗೆ ಕಳಿಸಿಲ್ಲ. ಬದಲಾಗಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಸಲ್ಲಿಸಿದ್ದಾರೆ.

‘ಸ್ಥಳೀಯ ತೃಣಮೂಲ ನಾಯಕತ್ವದೊಂದಿಗೆ ನನಗೆ ಭಿನ್ನಾಭಿಪ್ರಾಯಗಳಿವೆ. ನನಗೆ ರಾಜಕೀಯದ ಕ್ರೂರತೆ ಅರ್ಥವಾಗುತ್ತಿಲ್ಲ. ರಾಜಕೀಯ ನನಗೆ ಒಗ್ಗಲ್ಲ. ನಾನು ಜಾದವ್‌ಪುರಕ್ಕಾಗಿ ಕನಸು ಕಂಡೆ, ಆದರೆ ನಾನು ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೇನೆ. ನನ್ನ ನಟನಾ ಹಿನ್ನೆಲೆ ಹಾಗೂ ನಾನು ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಮಮತಾಗೆ ರಾಜೀನಾಮೆ ನೀಡಿದ್ದೇನೆ. ಮಮತಾ ಒಪ್ಪಿದರೆ ಸ್ಪೀಕರ್‌ಗೆ ಹಸ್ತಾಂತರಿಸುವೆ’ ಎಂದಿದ್ದಾರೆ.

ಇದಕ್ಕೂ ಮುನ್ನ ಮೊನ್ನೆ ಅವರು ಎರಡು ಸಂಸದೀಯ ಸ್ಥಾಯಿ ಸಮಿತಿಗಳಿಗೆ ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆಯನ್ನು ಟಿಎಂಸಿ ಲೋಕಸಭೆಯ ನಾಯಕ ಸುದೀಪ್ ಬಂಡೋಪಾಧ್ಯಾಯ ಅವರಿಗೆ ಕಳುಹಿಸಿದ್ದರು. ಅಲ್ಲದೆ, ಎರಡು ಆಸ್ಪತ್ರೆಗಳ ‘ರೋಗಿ ಕಲ್ಯಾಣ ಸಮಿತಿ’ಗಳ ಅಧ್ಯಕ್ಷೆ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಜಾದವ್‌ಪುರದಿಂದ ಗೆಲುವುದು ಸಾಧಿಸಿದ್ದರು.