ಸಾರಾಂಶ
ತಿರುವನಂತಪುರಂ: ‘ಎಲ್2: ಎಂಪುರಾನ್’ ಚಿತ್ರಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ತೀವ್ರ ವಿರೋಧ ವ್ಯಕ್ತವಾದ ನಡುವೆಯೇ ನಟ ಮೋಹನ್‌ಲಾಲ್ ಈ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರದಲ್ಲಿನ ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕಲಾಗುವುದು ಎಂದು ಭರವಸೆ ನೀಡಿದ್ದಾರೆ.
‘ಒಬ್ಬ ಕಲಾವಿದನಾಗಿ, ನನ್ನ ಯಾವುದೇ ಚಿತ್ರಗಳು ಯಾವುದೇ ರಾಜಕೀಯ ಚಳವಳಿ, ಸಿದ್ಧಾಂತ ಅಥವಾ ಧಾರ್ಮಿಕ ಸಮುದಾಯದ ವಿರುದ್ಧ ದ್ವೇಷವನ್ನು ಉತ್ತೇಜಿಸುವುದಿಲ್ಲ ಎಂದು ಖಾತ್ರಿಪಡಿಸುವುದು ನನ್ನ ಕರ್ತವ್ಯ. ಚಿತ್ರದಿಂದಾಗಿ ನನ್ನನ್ನು ಪ್ರೀತಿಸುವವರಿಗೆ ಉಂಟಾದ ಯಾವುದೇ ಭಾವನಾತ್ಮಕ ನೋವಿಗೆ ನಾನು ಮತ್ತು ಎಂಪುರಾನ್ ತಂಡ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಚಿತ್ರದಲ್ಲಿರುವ ಅಂತಹ ಅಂಶಗಳನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ’ ಎಂದು ಫೇಸ್ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವಿರೋಧವೇಕೆ?:
ಚಿತ್ರದ ಕೆಲವು ಸನ್ನಿವೇಶಗಳು ಗೋಧ್ರಾ ಹತ್ಯಾಕಾಂಡಕ್ಕೆ ಆರ್‌ಎಸ್‌ಎಸ್ ಕಾರಣ ಎಂದು ಆರೋಪಿಸುವಂತಿವೆ. ಹಿಂದುತ್ವವನ್ನು ವಿರೋಧಿಸುವ ಸಂಭಾಷಣೆ, ದೃಶ್ಯಗಳಿವೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಆಕ್ಷೇಪ ವ್ಯಕ್ತಪಡಿಸಿದ್ದವು. ಕೇಂದ್ರ ಸರ್ಕಾರದ ಮಧ್ಯಪ್ರವೇಶದ ನಂತರ, ಕೇಂದ್ರ ಚಲನಚಿತ್ರ ಪ್ರಾಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿತ್ರಕ್ಕೆ 17 ಬದಲಾವಣೆಗಳನ್ನು ಮಾಡಲು ಆದೇಶಿಸಿತ್ತು.
ಕೇರಳ ಸಿಎಂ ಬೆಂಬಲ:
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಕೋಮುವಾದದ ವಿರುದ್ಧ ಸಿನಿಮಾ ನಿರ್ಮಾಪಕರು ಅಳವಡಿಸಿಕೊಂಡಿರುವ ನಿಲುವಿನ ಬಗ್ಗೆ ಆರ್‌ಎಸ್‌ಎಸ್ ಭಯದ ವಾತಾವರಣ ಸೃಷ್ಟಿಸುತ್ತಿದೆ. ಈ ಚಿತ್ರವು ದೇಶ ಕಂಡ ಅತ್ಯಂತ ಕ್ರೂರ ನರಮೇಧಗಳಲ್ಲಿ ಒಂದಾದ ಗೋಧ್ರಾ ಹತ್ಯಾಕಾಂಡವನ್ನು ಉಲ್ಲೇಖಿಸುತ್ತದೆ. ಇದು ಆರ್‌ಎಸ್‌ಎಸ್ ಮತ್ತು ಅದರ ಸೂತ್ರಧಾರರನ್ನು ಕೆರಳಿಸಿದೆ’ ಎಂದು ಆರೋಪಿಸಿದ್ದಾರೆ.