ಮಹಾರಾಷ್ಟ್ರ ಸರ್ಕಾರಿ ಸಾರಿಗೆ ನಿಗಮಕ್ಕೆ ಗ್ಯಾರಂಟಿ ಸ್ಕೀಂ ಈಗ ಭಾರ : ದಿನಕ್ಕೆ 3 ಕೋಟಿ ರು. ನಷ್ಟ

| N/A | Published : Feb 23 2025, 12:33 AM IST / Updated: Feb 23 2025, 04:56 AM IST

ಸಾರಾಂಶ

ಮಹಾರಾಷ್ಟ್ರದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಶೇ.50 ರಿಯಾಯ್ತಿ ದರದಲ್ಲಿ ಟಿಕೆಟ್‌ ನೀಡುವ ಗ್ಯಾರಂಟಿ ಯೋಜನೆಯಿಂದಾಗಿ ಸಾರಿಗೆ ನಿಗಮಕ್ಕೆ ದಿನಕ್ಕೆ 3 ಕೋಟಿ ರು. ನಷ್ಟವಾಗುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಪ್ರತಾಪ್‌ ಸರನಾಯಕ್‌ ಹೇಳಿದ್ದಾರೆ.

 ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಶೇ.50 ರಿಯಾಯ್ತಿ ದರದಲ್ಲಿ ಟಿಕೆಟ್‌ ನೀಡುವ ಗ್ಯಾರಂಟಿ ಯೋಜನೆಯಿಂದಾಗಿ ಸಾರಿಗೆ ನಿಗಮಕ್ಕೆ ದಿನಕ್ಕೆ 3 ಕೋಟಿ ರು. ನಷ್ಟವಾಗುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಪ್ರತಾಪ್‌ ಸರನಾಯಕ್‌ ಹೇಳಿದ್ದಾರೆ.

ಧಾರಾಶಿವ್‌ನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿವರು, ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಶೇ.50ರಷ್ಟು ರಿಯಾಯ್ತಿ ದರ ನೀಡಲಾಗಿದೆ. ಜೊತೆಗೆ ಹಿರಿಯ ನಾಗರಿಕರು ಸಹ ರಿಯಾಯ್ತಿ ದರದಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ನಿಗಮಕ್ಕೆ ನಿತ್ಯ 3 ಕೋಟಿ ರು. ನಷ್ಟವಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ, ಸಾರಿಗೆ ಸಂಸ್ಥೆ ನಡೆಸುವುದು ತುಂಬಾ ಕಷ್ಟ. ಆಗ ರಿಯಾಯ್ತಿ ಯೋಜನೆ ನಿಲ್ಲಿಸುವ ಪ್ರಸ್ತಾಪ ಮಾಡಬೇಕಾಗುತ್ತದೆ ಎಂದರು.

ಸ್ಕೀಂ ನಿಲ್ಲಿಸಲ್ಲ- ಸಿಎಂ, ಡಿಸಿಎಂ:

ಈ ನಡುವೆ, ಸರನಾಯಕ್‌ ಹೇಳಿಕೆ ಸಂಚಲನಕ್ಕೆ ಕಾರಣ ಆಗುತ್ತಿದ್ದಂತೆಯೇ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಸ್ಕೀಂ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.