ಸಾರಾಂಶ
ಬೆಳಗಾವಿ : ‘ಮರಾಠಿ ಬರಲ್ಲ, ಕನ್ನಡದಲ್ಲಿ ಮಾತಾಡಿ’ ಎಂದು ಹೇಳಿದ ಕಾರಣಕ್ಕೆ ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಬೆಳಗಾವಿ ನಗರ ಸಾರಿಗೆ ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಮರಾಠಿ ಪುಂಡರು ಮಾಡಿದ ಹಲ್ಲೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪುಂಡಾಟಿಕೆ ನಡೆಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಪ್ರತೀಕಾರವಾಗಿ, ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿ ನಿರ್ವಾಹಕನ ವಿರುದ್ಧ ಮರಾಠಿಗರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಇದು ಕನ್ನಡ ಹೋರಾಟಗಾರರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ. ಬೆಳಗಾವಿಯಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ರಸ್ತೆ ತಡೆ ನಡೆಸಿ ಮರಾಠಿ ಪುಂಡಾಟಿಕೆಯನ್ನು ಹೋರಾಟಗಾರರು ಖಂಡಿಸಿದ್ದಾರೆ. ಏತನ್ಮಧ್ಯೆ, ಕನ್ನಡ ಮಾತನಾಡಲು ಹೇಳಿದರು ಎಂಬ ಕಾರಣಕ್ಕೆ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಮರಾಠಿಗರ ವರ್ತನೆಯನ್ನು ಖಂಡಿಸಿ ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಬಸ್ ಹಾಗೂ ಅದರ ನಿರ್ವಾಹಕನಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಅತ್ತ ಮಹಾರಾಷ್ಟ್ರದಲ್ಲೂ ಕರ್ನಾಟಕ ಬಸ್‌ಗಳ ಮುಂದೆ ಪ್ರತಿಭಟನೆ ನಡೆದಿದ್ದು, ವೋಲ್ವೋ ಬಸ್‌ವೊಂದಕ್ಕೆ ಮಸಿ ಹಚ್ಚಲಾಗಿದೆ.
ಈ ನಡುವೆ, ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಬಸ್ ನಿರ್ವಾಹಕನಿಗೆ ಮಸಿ ಬಳಿದ ಘಟನೆಯ ಬಗ್ಗೆ ಕರ್ನಾಟಕ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವವರೆಗೂ ಆ ರಾಜ್ಯಕ್ಕೆ ಬಸ್‌ಗಳನ್ನು ಕಳುಹಿಸುವುದಿಲ್ಲ ಎಂದು ಅಲ್ಲಿನ ಸರ್ಕಾರ ಘೋಷಿಸಿ, ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ.
ಪೊಲೀಸ್ ಠಾಣೆಯಲ್ಲಿ ನೂಕಾಟ:
ಪೋಕ್ಸೋ ಪ್ರಕರಣ ಹಿಂಪಡೆಯಬೇಕೆಂಬುದೂ ಸೇರಿ ಮರಾಠಿ ಪುಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ, ತಳ್ಳಾಟ, ನೂಕಾಟ ನಡೆದಿದೆ. ನಂತರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮೊದಲು ಕರವೇ ಕಾರ್ಯಕರ್ತರು ಬೆಳಗಾವಿ ನಗರದ ಅಶೋಕ ವೃತ್ತದಲ್ಲಿಯೂ ಭಾರೀ ಪ್ರತಿಭಟನೆ ನಡೆಸಿದರು.
ಕರವೇ (ಶಿವರಾಮೇಗೌಡ ಬಣ) ಹಾಗೂ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಬಾಳೇಕುಂದ್ರಿ ಕ್ರಾಸ್ ಬಳಿ ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. ಇದರಿಂದಾಗಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಅಥಣಿ ಪಟ್ಟಣದಲ್ಲೂ ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಮಹಾರಾಷ್ಟ್ರ ಸಾರಿಗೆ ಬಸ್ ತಡೆದು ಪ್ರತಿಭಟಿಸಿದರು.
ಶುಕ್ರವಾರ ರಾತ್ರಿಯೇ ಕರ್ನಾಟಕ ನವನಿರ್ಮಾಣ ವೇದಿಕೆ ಪದಾಧಿಕಾರಿಗಳು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಐಮಂಗಲ ಗುಯಿಲಾಳ್ ಟೋಲ್ ಬಳಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಬಸ್ಸು ಹಾಗೂ ಚಾಲಕ ಹರಿ ಜಾಧವ್‌ಗೆ ಮಸಿ ಬಳಿದು ಆಕ್ರೋಶ ಹೊರ ಹಾಕಿದ್ದಾರೆ. ಬಸ್ ನಿರ್ವಾಹಕ ನೀಡಿದ ದೂರಿನ ಮೇರೆಗೆ ಪೊಲೀಸರು ಮುಖಂಡರಾದ ಲಕ್ಷ್ಮೀಕಾಂತ್ ಮತ್ತು ತಿಪ್ಪೇಸ್ವಾಮಿ ಅವರನ್ನು ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದಲ್ಲಿ ಶನಿವಾರ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟಿಸಿ ಬೆಳಗಾವಿಗೆ ತೆರಳುವ ಬಸ್ಸಿಗೆ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಪೋಕ್ಸೋ ಪ್ರಕರಣ ದಾಖಲು:
ನಿರ್ವಾಹಕನ ಮೇಲೆ ಮರಾಠಿ ಯುವಕರು ನಡೆಸಿದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದ್ದು, ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ವಿರುದ್ಧವೇ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ನಿರ್ವಾಹಕ ಬಸ್‌ನಲ್ಲಿಯೇ ಅತ್ಯಾಚಾರಕ್ಕೆ ಯತ್ನಿಸಿದರು ಎಂದು ಬಾಲಕಿಯೊಬ್ಬರು ದೂರು ನೀಡಿದ್ದಾಳೆ.
ನಾಲ್ವರು ಆರೋಪಿಗಳ ಬಂಧನ:
ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಕಾನೂನು ಸಂಘರ್ಷಕ್ಕೀಡಾದ ಬಾಲಕ ಸೇರಿ ಸಣ್ಣ ಬಾಳೇಕುಂದ್ರಿ ಗ್ರಾಮದ ಮಾರುತಿ ತುರಮರಿ, ರಾಹುಲ್ ನಾಯ್ಡು ಮತ್ತು ಬಾಳು ಗೋಜಗೇಕರ ಎಂಬುವರನ್ನು ಬಂಧಿಸಿದ್ದಾರೆ. ಶುಕ್ರವಾರ ರಾತ್ರಿಯೇ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕೊಲ್ಲಾಪುರದಲ್ಲಿ ಮತ್ತೆ ಪುಂಡಾಟ
ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಪ್ರತಿಯಾಗಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಭಾಷಾಂಧ ಶಿವಸೇನೆ (ಠಾಕರೆ ಬಣ) ಪುಂಡರು ಶನಿವಾರವೂ ಪುಂಡಾಟಿಕೆ ಮೆರೆದಿದ್ದಾರೆ. ಕೊಲ್ಲಾಪುರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಮೇಲೆ ಕಪ್ಪು ಮಸಿ ಬಳಿದಿದ್ದಾರೆ. ಭಗವಾ ಧ್ವಜ ಕಟ್ಟಿದ್ದಾರೆ. ಬಸ್ ಸಂಚಾರಕ್ಕೆ ಅಡ್ಡಿಪಡಿಸಿ, ಉದ್ಧಟತನ ಪ್ರದರ್ಶಿಸಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಪುಣೆ-ಬೆಳಗಾವಿ ವೋಲ್ವೋ ಬಸ್ಸಿಗೆ ಕಪ್ಪು ಮಸಿ ಬಳಿದಿದ್ದಾರೆ. ಇದರಿಂದಾಗಿ ಕರ್ನಾಟಕ- ಮಹಾರಾಷ್ಟ್ರ ಉಭಯ ರಾಜ್ಯಗಳ ಗಡಿಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಕೆಲಕಾಲ ಬಸ್ ಸಂಚಾರಕ್ಕೂ ಅಡೆತಡೆ ಉಂಟಾಗಿತ್ತು.ಮಹಾರಾಷ್ಟ್ರದಿಂದ ಬರುವ ಬಸ್ ಸಂಖ್ಯೆ ಇಳಿಕೆ
ಗಡಿಯಲ್ಲಿ ಉಂಟಾಗಿದ್ದ ತ್ವೇಷಮಯ ವಾತಾವರಣ ಕೆಲವು ಗಂಟೆಗಳ ನಂತರ ತಿಳಿಯಾಗಿ ಬಸ್ ಸಂಚಾರ ಪುನಾರಂಭಗೊಂಭಗೊಂಡಿದೆ. ಆದರೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಬಸ್‌ಗಳ ಸಂಖ್ಯೆ ಶನಿವಾರ ಸಂಜೆ ಕಡಿಮೆಯಾಗಿದೆ. ಗಡಿಭಾಗದವರೆಗೆ ಮಾತ್ರ ಬಸ್‌ಗಳು ಸಂಚರಿಸುತ್ತಿವೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ಹಿರಿಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ತಿಳಿಸಿದ್ದಾರೆ.
ಕೊಲ್ಹಾಪುರ ಮಾರ್ಗವಾಗಿ ಪ್ರತಿದಿನ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯಿಂದ 30 ಬಸ್ ಬರುತ್ತಿದ್ದವು. ಶನಿವಾರ 20 ಬಸ್ ಮಾತ್ರ ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಮುಂಬೈ, ಪುಣೆ, ಕೊಲ್ಹಾಪುರ, ಮೀರಜ್ ಮಾರ್ಗವಾಗಿ ಬೆಳಗಾವಿಯಿಂದ ನಿತ್ಯ 90 ಬಸ್‌ಗಳು ಓಡುತ್ತವೆ. ಶನಿವಾರ ಕೂಡ ಎಲ್ಲ ಬಸ್‌ಗಳನ್ನೂ ಬಿಡಲಾಗಿದೆ. ಗಡಿಯಲ್ಲಿ ಎರಡೂ ಕಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಬಸ್ ಸುರಕ್ಷತೆಗೆ ತೀವ್ರ ನಿಗಾ ವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.