ಮುಂಬೈ-ಬೆಂಗಳೂರಿಗೆ 14 ಪಥದ ಹೊಸ ಎಕ್ಸ್‌ಪ್ರೆಸ್‌ ವೇ-6 ತಿಂಗಳಲ್ಲಿ ಕಾಮಗಾರಿ ಆರಂಭ: ಸಚಿವ ನಿತಿನ್‌ ಗಡ್ಕರಿ

| Published : Sep 17 2024, 12:53 AM IST / Updated: Sep 17 2024, 04:50 AM IST

ಸಾರಾಂಶ

ಮುಂಬೈ-ಬೆಂಗಳೂರು ನಡುವೆ ಹೊಸ 14 ಪಥದ ಎಕ್ಸ್‌ಪ್ರೆಸ್‌ ವೇ ನಿರ್ಮಾಣವಾಗಲಿದ್ದು, 6 ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಹೊಸ ಹೆದ್ದಾರಿಯು ಮುಂಬೈನ ಅಟಲ್ ಸೇತುವೆಯಿಂದ ಆರಂಭವಾಗಿ ಪುಣೆ ರಿಂಗ್ ರಸ್ತೆ ಮೂಲಕ ಸಾಗಲಿದೆ.

ಪುಣೆ: ಹಾಲಿ ಇರುವ ಮುಂಬೈ-ಬೆಂಗಳೂರು ಹೆದ್ದಾರಿ ಈಗಾಗಲೇ ದಟ್ಟಣೆಯಿಂದ ಕೂಡಿದೆ. ಹೀಗಾಗಿ ಉಭಯ ನಗರಗಳ ನಡುವೆ ಹೊಸ 14 ಪಥದ ಎಕ್ಸ್‌ಪ್ರೆಸ್‌ ವೇ ನಿರ್ಮಿಸಲಾಗುವುದು. ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದ್ದು, 6 ತಿಂಗಳಲ್ಲಿ ಕಾಮಗಾರಿ ಆರಂಭ ಆಗುವ ನಿರೀಕ್ಷೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಇಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಈ ಹೊಸ ರಸ್ತೆಯು ಮುಂಬೈನ ಅಟಲ್‌ ಸೇತುವೆಯಿಂದ ಶುರುವಾಗಲಿದ್ದು, ಪುಣೆ ರಿಂಗ್‌ ರಸ್ತೆ ಮೂಲಕ ಸಾಗುತ್ತದೆ. ಜೊತೆಗೆ ಛತ್ರಪತಿ ಸಂಭಾಜಿ ನಗರವನ್ನು ಹಾದು ಹೋಗುತ್ತದೆ. ಇದು ಹಾಲಿ ರಸ್ತೆಗೆ ಬದಲಿಯಾಗಲಿದೆ. ಈ ರಸ್ತೆ ನಿರ್ಮಾಣದಿಂದ ಹಾಲಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇನ ಶೇ.50ರಷ್ಟು ವಾಹನಗಳು ಹೊಸ ಹೆದ್ದಾರಿಗೆ ವರ್ಗಾವಣೆಯಾಗಲಿವೆ’ ಎಂದರು.

‘ಇದರ ಟೆಂಡರ್‌ ಆಹ್ವಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಮುಂದಿನ 6 ತಿಂಗಳಿನಲ್ಲಿ ಕೆಲಸ ಶುರುವಾಗಲಿದೆ’ ಎಂದು ಸಚಿವರು ಹೇಳಿದರು.

‘ಈ ಹಿಂದೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ನಿರ್ಮಿಸಿದಾಗ ಇನ್ನು 50 ವರ್ಷಕ್ಕೆ ಚಿಂತೆ ಇಲ್ಲ ಎಂದುಕೊಂಡಿದ್ದೆ. ಆದರೆ ಲೋನಾವಳದಲ್ಲಿ ನನ್ನ ಸೊಸೆ ಹಾಗೂ ಪುತ್ರ ಟ್ರಾಫಿಕ್‌ ಜಾಂನಲ್ಲಿ 1 ತಾಸು ಸಿಲುಕಿದರು. ಹೀಗಾಗಿ ಈ ಹೈವೇ ಸಾಲುವುದಿಲ್ಲ ಎಂದು ಅರಿವಾಗಿ 14 ಪಥದ ಎಕ್ಸ್‌ಪ್ರೆಸ್‌ ವೇಗೆ ನಿರ್ಧರಿಸಿದೆ’ ಎಂದರು.

ಇದಾವ ಮಾರ್ಗ?

ಗಡ್ಕರಿ ಹೇಳಿದ 14 ಲೇನ್‌ ಎಕ್ಸ್‌ಪ್ರೆಸ್‌ ವೇ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ಪ್ರಸ್ತುತ ಬೆಂಗಳೂರಿನಿಂದ ಮುಂಬೈಗೆ ಸಂಪರ್ಕಿಸಲು 2 ಮಾರ್ಗಗಳಿವೆ. ಒಂದು ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿ-ಪುಣೆ-ಮುಂಬೈ ಮಾರ್ಗ. ಇದು 986 ಕಿ.ಮೀ. ಉದ್ದದ ಎನ್‌ಎಚ್‌ 48. ಇನ್ನೊಂದು ಮಾರ್ಗ ಬೆಂಗಳೂರು-ತುಮಕೂರು-ಚಿತ್ರದುರ್ಗ-ವಿಜಯನಗರ-ಬಾಗಲಕೋಟೆ ಮೂಲಕ ಹಾಯ್ದು ಮಹಾರಾಷ್ಟ್ರಕ್ಕೆ ಸೇರುತ್ತದೆ. ಇದು 900 ಕಿ.ಮೀ. ಇದೆ.

ಪ್ರಯಾಣ ಸಮಯ ಅರ್ಧ ಕಡಿತ

ಪ್ರಸಕ್ತ ಮುಂಬೈನಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸಲು ಸುಮಾರು 18–19 ಗಂಟೆ ಬೇಕಾಗುತ್ತದೆ. ಪುಣೆಯಿಂದ ಇದು ಸುಮಾರು 15-16 ಗಂಟೆ ತೆಗೆದುಕೊಳ್ಳುತ್ತದೆ. ಹೊಸ ಪ್ರಸ್ತಾವಿತ ಹೆದ್ದಾರಿ ಪೂರ್ಣಗೊಂಡ ನಂತರ ಬೆಂಗಳೂರು-ಪುಣೆ ಕೇವಲ 7-8 ಗಂಟೆ, ಮುಂಬೈಗೆ 9ರಿಂದ 10 ತಾಸು ತೆಗೆದುಕೊಳ್ಳಬಹುದು ಎನ್ನಲಾಗಿದೆ.