ಸಾರಾಂಶ
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದೂವರೆ ತಿಂಗಳಿರುವಾಗ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಮತ್ತೊಂದು ಯತ್ನ ನಡೆದಿದೆ.
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದೂವರೆ ತಿಂಗಳಿರುವಾಗ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (78) ಅವರ ಹತ್ಯೆಗೆ ಮತ್ತೊಂದು ಯತ್ನ ನಡೆದಿದೆ. ತಮ್ಮದೇ ಮಾಲೀಕತ್ವದ ಗಾಲ್ಫ್ ಕ್ಲಬ್‌ನಲ್ಲಿ ಭಾನುವಾರ ಟ್ರಂಪ್ ಅವರು ಗಾಲ್ಫ್ ಆಡುತ್ತಿದ್ದಾಗ ಸುಮಾರು 500 ಮೀಟರ್ ಅಂತರದಿಂದ ಅವರನ್ನು ಕೊಲ್ಲುವ ಪ್ರಯತ್ನ ನಡೆದಿದೆ. ಆದರೆ ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಘೋರ ದುರಂತವೊಂದು ತಪ್ಪಿದೆ.
2 ತಿಂಗಳ ಹಿಂದೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರು ಚುನಾವಣಾ ಪ್ರಚಾರ ಮಾಡುವಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಒಂದು ಗುಂಡು ಅವರ ಕಿವಿಯನ್ನು ಸೀಳಿತ್ತು. ಅಷ್ಟರಲ್ಲಿ ಬಂದೂಕುಧಾರಿಯನ್ನು ಭದ್ರತಾ ಸಿಬ್ಬಂದಿ ಕೊಂದು ಹಾಕಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಹತ್ಯೆ ಯತ್ನ ನಡೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಏನಾಯಿತು?:
ಭಾನುವಾರ ಮಧ್ಯಾಹ್ನ 1.30 (ಅಮೆರಿಕ ಕಾಲಮಾನ)ಕ್ಕೆ ಫ್ಲೋರಿಡಾದಲ್ಲಿರುವ ವೆಸ್ಟ್ ಪಾಮ್‌ನ ಟ್ರಂಪ್ ಇಂಟರ್‌ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಟ್ರಂಪ್ ಅವರು ಗಾಲ್ಫ್ ಆಡುತ್ತಿದ್ದರು. ಆ ವೇಳೆ ಟ್ರಂಪ್ ಅವರ ಗಾಲ್ಫ್ ಕ್ಲಬ್‌ನ ಪೊದೆಯೊಂದರಲ್ಲಿ ಎಕೆ-47 ಬಂದೂಕು ಹಿಡಿದ ವ್ಯಕ್ತಿಯೊಬ್ಬ ಟ್ರಂಪ್ ಅವರತ್ತ ಗುರಿ ಇಡುತ್ತಿದ್ದ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಆತನ ಮೇಲೆ ಗುಂಡಿನ ದಾಳಿ ನಡೆಸಿದರು. ಸ್ಥಳದಲ್ಲೇ ಬಂದೂಕು ಬಿಟ್ಟು ಆತ ಪರಾರಿಯಾದ. ಟ್ರಂಪ್ ಅವರನ್ನು ಸುತ್ತುವರೆದ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ನಡುವೆ, ಬಂದೂಕುಧಾರಿಯನ್ನು ಬಂಧಿಸಲಾಗಿದೆ. ದಾಳಿಕೋರನನ್ನು ರ್‍ಯಾನ್ ವೆಸ್ಲೆ ರೌಥ್ (58) ಎಂದು ಗುರುತಿಸಲಾಗಿದೆ.==
ಶೂಟರ್ ಯಾರು? ಟ್ರಂಪ್ ಅವರ ಮೇಲೆ ಗುಂಡಿನ ದಾಳಿಗೆ ಸಜ್ಜಾಗಿದ್ದ ವ್ಯಕ್ತಿಯನ್ನು ರ್‍ಯಾನ್ ವೆಸ್ಲೆ ರೌಥ್ ಎಂದು ಗುರುತಿಸಲಾಗಿದೆ. ಈತನಿಗೆ 58 ವರ್ಷ. ಉತ್ತರ ಕೆರೋಲಿನಾ ಮೂಲದವನು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಡೊನಾಲ್ಡ್ ಟ್ರಂಪ್ ಅವರ ಕಡು ವಿರೋಧಿ. ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ಈತ ದೇಣಿಗೆ ಕೊಟ್ಟಿದ್ದಾನೆ.
ಹವಾಯಿಯಲ್ಲಿ ಅಗ್ಗದ ಮನೆ ನಿರ್ಮಿಸುವ ಉದ್ಯಮ ನಡೆಸುತ್ತಿದ್ದಾನೆ. ತಾಲಿಬಾನ್ ಅತಿಕ್ರಮಣದ ಬಳಿಕ ಅಫ್ಘಾನಿಸ್ತಾನ ತೊರೆದಿರುವ ಮಾಜಿ ಯೋಧರ ಪಡೆ ಕಟ್ಟಿ ಉಕ್ರೇನ್ ಪರ ಹೋರಾಡುವ ಮಾತುಗಳನ್ನು 2023ರಲ್ಲಿ ಸಂದರ್ಶನದಲ್ಲಿ ಆಡಿದ್ದ. ಪಾಕಿಸ್ತಾನ ಭ್ರಷ್ಟ ದೇಶವಾಗಿರುವ ಕಾರಣ ಅಲ್ಲಿ ಪಾಸ್‌ಪೋರ್ಟ್ ಖರೀದಿಸಿ ಈ ಯೋಧರನ್ನು ಪಾಕಿಸ್ತಾನ ಹಾಗೂ ಇರಾನ್ ಮೂಲಕ ಉಕ್ರೇನ್‌ಗೆ ಕಳುಹಿಸಬಹುದು ಎಂದೂ ಹೇಳಿದ್ದ. ತನ್ನ ಈ ಆಲೋಚನೆಗೆ ಡಜನ್‌ಗಟ್ಟಲೆ ಮಂದಿ ಆಸಕ್ತಿ ತೋರಿದ್ದಾರೆ ಎಂದೂ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್’ಗೆ ಸಂದರ್ಶನ ನೀಡಿದ್ದ.
ಟ್ರಂಪ್ ಸುರಕ್ಷಿತ ಎಂದು ತಿಳಿದು ಸಂತಸ: ಕಮಲಾ ಹ್ಯಾರಿಸ್
ವಾಷಿಂಗ್ಟನ್: ‘ಅಮೆರಿಕದಲ್ಲಿ ಹಿಂಸೆಗೆ ಆಸ್ಪದವಿಲ್ಲ. ಟ್ರಂಪ್ ಭದ್ರತೆಗೆ ಏನು ಕ್ರಮ ಬೀಕೋ ಅನನ್ನು ಕೈಗೊಳ್ಳುವಂತೆ ಭದ್ರತಾ ಸಂಸ್ಥೆಯಾದ ಸೀಕ್ರೆಟ್ ಸರ್ವೀಸ್‌ಗೆ ಸೂಚಿಸಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ 2ನೇ ಹತ್ಯೆ ಯತ್ನ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.ಇನ್ನು ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾತನಾಡಿ, ‘ಟ್ರಂಪ್ ಸುರಕ್ಷಿತ ಆಗಿದ್ದಅರೆ ಎಂದು ತಿಳಿದು ನನಗೆ ಸಂತಸವಾಗಿದೆ. ಅಮೆರಿಕದಲ್ಲಿ ಹಿಂಸೆಗೆ ಆಸ್ಪದವಿಲ್ಲ’ ಎಂದಿದ್ದಾರೆ.