ಕೋಲ್ಕತಾ ವೈದ್ಯಕೀಯ ಪ್ರತಿಭಟನೆ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ಫಲಪ್ರದ?

| Published : Sep 17 2024, 12:52 AM IST / Updated: Sep 17 2024, 04:51 AM IST

ಸಾರಾಂಶ

ಕೋಲ್ಕತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಭೆ ಭಾಗಶಃ ಫಲಪ್ರದವಾಗಿದೆ.  

ಕೋಲ್ಕತಾ: ಇಲ್ಲಿನ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರು ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಸೋಮವಾರ ರಾತ್ರಿ ಕೊನೆಗೂ ಸಂಧಾನ ಸಭೆ ನಡೆದಿದ್ದು, ಬಹುತೇಕ ಫಲಪ್ರದವಾಗಿದೆ ಎಂದು ಮೂಲಗಳು ಹೇಳಿವೆ.

ಮಮತಾರ ಕಾಳಿಘಾಟ್ ಪ್ರದೇಶದ ನಿವಾಸದಲ್ಲಿ ಸೋಮವಾರ 1.45 ತಾಸು ಸಂಧಾನ ಸಭೆ ನಡೆದು, ಕೆಲವು ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಯಿತು. ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಹಾಗೂ ತಮಗೆ ಕೆಲಸದ ವೇಳೆ ಭದ್ರತೆ ನೀಡಬೇಕು ಎಂಬ ಕಿರಿಯ ವೈದ್ಯರ ಪ್ರಮುಖ ಬೇಡಿಕೆಯನ್ನು ಪ. ಬಂಗಾಳ ಸರ್ಕಾರ ಒಪ್ಪಿಕೊಂಡಿದೆ ಎಂದು ಗೊತ್ತಾಗಿದೆ.

ಮುಷ್ಕರ ಹಿಂಪಡೆದು ಕೆಲಸಕ್ಕೆ ಮರಳುವಂತೆ ಮಮತಾ ಬ್ಯಾನರ್ಜಿ ಮತ್ತೆ ವೈದ್ಯರಿಗೆ ಮನವಿ ಮಾಡಿದರು ಹಾಗೂ ವೈದ್ಯರ ಮುಷ್ಕರದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಕೋರ್ಟ್‌ ಅನಿಸಿಕೆಯನ್ನು ಉಲ್ಲೇಖಿಸಿದರು ಎಂದು ಮೂಲಗಳು ಹೇಳಿವೆ. ಆದರೆ ವೈದ್ಯೆಯ ಕೊಲೆಯಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ, ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ವಿರುದ್ಧ ಶಿಸ್ತು ಕ್ರಮ, ಪೊಲೀಸ್‌ ಆಯುಕ್ತ ವಿನೀತ್ ಗೋಯಲ್ ಮತ್ತು ಆರೋಗ್ಯ ಕಾರ್ಯದರ್ಶಿ ನಾರಾಯಣ್ ಸ್ವರೂಪ್ ನಿಗಮ್ ರಾಜೀನಾಮೆ- ಈ ಪ್ರಮುಖ ಬೇಡಿಕೆಗಳನ್ನು ವೈದ್ಯರು ಮುಂದಿಟ್ಟರೂ ಅದಕ್ಕೆ ಸರ್ಕಾರ ಏನು ಹೇಳಿದೆ ಎಂದು ಗೊತ್ತಾಗಿಲ್ಲ.

ಪಟ್ಟು ಸಡಿಲಿಸಿದ ವೈದ್ಯರು:

ಈ ನಡುವೆ, ಸೋಮವಾರ ಬೆಳಗ್ಗೆ ಮಮತಾ, ‘ಮಾತುಕತೆಗೆ ಬನ್ನಿ. ಇದು ನನ್ನ 5ನೇ ಹಾಗೂ ಕೊನೇ ಆಹ್ವಾನ’ ಎಂದರು. ಆಗ ವೈದ್ಯರು ಸಂಧಾನಸಭೆ ನೇರಪ್ರಸಾರ ಪಟ್ಟು ಕೈಬಿಟ್ಟರು ಹಾಗೂ ಸಭೆಯ ಅಂಶಗಳನ್ನು ಉಕ್ತಲೇಖನ ಮೂಲಕ ಬರೆದುಕೊಂಡು ಉಭಯ ಪಂಗಡಗಳು ಸಹಿ ಹಾಕಬೇಕು ಎಂದು ಬೇಡಿಕೆ ಇಟ್ಟರು. ಇದಕ್ಕೆ ಮಮತಾ ಒಪ್ಪಿದರು.