ಝಾರ್‌ಗ್ರಾಂ (ಪ.ಬಂಗಾಳ) : ಚುನಾವಣಾ ಪ್ರಚಾರಕ್ಕೆಂದು ಹೋದಾಗ ಜನಸಾಮಾನ್ಯರು, ರೈತರು ಹಾಗೂ ಮಕ್ಕಳೊಂದಿಗೆ ಬೆರೆಯುವ ತಮ್ಮ ಖಯಾಲಿಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ. ಭಾನುವಾರ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಮೋದಿ ಈ ವೇಳೆ ಅನಿರೀಕ್ಷಿತವಾಗಿ, ರಸ್ತೆ ಬದಿಯಲ್ಲಿದ್ದ ಕುರುಕಲು ತಿಂಡಿಯ ಅಂಗಡಿಗೆ ತೆರಳಿ ಮಂಡಕ್ಕಿ ಖರೀದಿಸಿದರು ಹಾಗೂ ಅದನ್ನು ಮಕ್ಕಳಿಗೆ ಹಂಚುವ ಮೂಲಕ ಗಮನ ಸೆಳೆದರು.

4 ರ್‍ಯಾಲಿಗಳಲ್ಲಿ ಭಾಗವಹಿಸಿದ ಮೋದಿ

ಶನಿವಾರ ಒಂದಾದ ಮೇಲೊಂದರಂತೆ 4 ರ್‍ಯಾಲಿಗಳಲ್ಲಿ ಭಾಗವಹಿಸಿದ ಮೋದಿ, ಝಾರ್‌ಗ್ರಾಂ ಎಂಬಲ್ಲಿರುವ ಪುಟ್ಟ ಅಂಗಡಿಯೊಂದಕ್ಕೆ ತೆರಳಿ, ಒಳ್ಳೆ ಗುಣಮಟ್ಟದ ಝಾಲ್ಮುರಿ (ಚುರುಮುರಿ) ತಯಾರಿಸುವಂತೆ ಕೇಳಿದರು. ಅದಕ್ಕೆ ಪ್ರತಿಯಾಗಿ ಸ್ವಂತ ಜೇಬಿನಿಂದ 10 ರು.ನ ಗರಿಗರಿ ನೋಟನ್ನು ತೆಗೆದು, ಅಂಗಡಿಯಾತ ನಿರಾಕರಿಸಿದರೂ ಕೇಳದೆ ಆತನ ಕೈಗಿಟ್ಟರು.

ಇದೇ ವೇಳೆ ಆರೋಗ್ಯ ದೃಷ್ಟಿಯಿಂದ ಮಂಡಕ್ಕಿಗೆ ಉಪ್ಪು ಹಾಕದಂತೆ ಮನವಿ ಮಾಡಿದ ಪ್ರಧಾನಿ ಮೋದಿ, ಬಳಿಕ ಅದನ್ನು ಸುತ್ತಲಿದ್ದ ಮಕ್ಕಳಿಗೆ ಹಂಚಿದರು. ಇದರ ಫೋಟೋ ಮತ್ತು ವಿಡಿಯೋಗಳನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಕೆಲ ದಿನಗಳ ಹಿಂದಷ್ಟೇ ಅಸ್ಸಾಂಗೆ ತೆರಳಿದ್ದ ವೇಳೆ ಅಲ್ಲಿನ ಚಹಾ ತೋಟವೊಂದಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಅಲ್ಲಿನ ಕೆಲಸಗಾರರೊಂದಿಗೆ ಮಾತನಾಡುತ್ತಾ ಚಹಾ ಎಲೆಗಳನ್ನು ಕಟಾವು ಮಾಡಿದ್ದರು. ಇದಕ್ಕೂ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.

ಜನಸಾಮಾನ್ಯರ ಜತೆ ಮೋದಿ ನಡೆಗಳು 

ವಿವಿಧ ಕಡೆ ಚುನಾವಣಾ ಪ್ರಚಾರಕ್ಕೆ ಹೋದಾಗ ಜನರೊಂದಿಗೆ ಬೆರೆಯುವ ಮೋದಿ

- ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಜತೆ ಅನೇಕ ಸಲ ಏರ್‌ಪೋರ್ಟಲ್ಲಿ ಮಾತುಕತೆ

- ಇತ್ತೀಚೆಗೆ ಅಸ್ಸಾಂಗೆ ಹೋದಾಗ ಚಹಾ ತೋಟದಲ್ಲಿ ಟೀ ಎಲೆಗಳ ಬಿಡಿಸಿದ್ದ ಪ್ರಧಾನಿ

- ತಮಿಳುನಾಡಿಗೆ ಮೊನ್ನೆ ಹೋದಾಗ ಪುಟ್ಟ ಮಕ್ಕಳ ಜತೆ ಗಾಯತ್ರಿ ಮಂತ್ರ ಹೇಳಿದ್ದರು