ಅಚ್ಚರಿಯ ಆಯ್ಕೆಗೆ ಹೆಸರಾಗಿರುವ ಬಿಜೆಪಿ ಈ ಬಾರಿಯೂ ತನ್ನ ರಾಷ್ಟ್ರೀಯ ಅಧ್ಯಕ್ಷರ ಪಟ್ಟಕ್ಕೆ ಯಾರೂ ನಿರೀಕ್ಷಿಸದ ಬಿಹಾರದ ಯುವ ನಾಯಕ ನಿತಿನ್ ನಬೀನ್ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಸಂಘಟನಾ ಚತುರ, ಸಮೂಹ ನಾಯಕನಿಗೆ ಪಕ್ಷದ ಚುಕ್ಕಾಣಿ ನೀಡಿದೆ.
ನವದೆಹಲಿ: ಅಚ್ಚರಿಯ ಆಯ್ಕೆಗೆ ಹೆಸರಾಗಿರುವ ಬಿಜೆಪಿ ಈ ಬಾರಿಯೂ ತನ್ನ ರಾಷ್ಟ್ರೀಯ ಅಧ್ಯಕ್ಷರ ಪಟ್ಟಕ್ಕೆ ಯಾರೂ ನಿರೀಕ್ಷಿಸದ ಬಿಹಾರದ ಯುವ ನಾಯಕ ನಿತಿನ್ ನಬೀನ್ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಸಂಘಟನಾ ಚತುರ, ಸಮೂಹ ನಾಯಕನಿಗೆ ಪಕ್ಷದ ಚುಕ್ಕಾಣಿ ನೀಡಿದೆ.
ನಿತಿನ್‌ಗೆ ಇದು ಏಕಾಏಕಿ ಒಲಿದು ಬಂದ ಅದೃಷ್ಟವಲ್ಲ
ಹಾಗೆಂದು ನಿತಿನ್‌ಗೆ ಇದು ಏಕಾಏಕಿ ಒಲಿದು ಬಂದ ಅದೃಷ್ಟವಲ್ಲ. ನಿತಿನ್‌ರ ರಾಜಕೀಯ ಪ್ರಯಾಣ ಶುರುವಾಗುವುದು ಸರಿಯಾಗಿ 20 ವರ್ಷಗಳ ಹಿಂದೆ. ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿ ಮೂಲಕ ಬಿಜೆಪಿ ಸಂಪರ್ಕಕ್ಕೆ ಬಂದ ನಿತಿನ್, 2000ದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಪಕ್ಷದ ಕೆಲಸಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡ ಪರಿಣಾಮ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದರು ಹಾಗೂ ಬಳಿಕ ಬಿಹಾರ ಬಿಜೆಪಿಯ ಯುವನಾಯಕನಾಗಿ ಗುರುತಿಸಿಕೊಂಡರು. ನಿತಿನ್‌ರ ತಂದೆ ಕಾಯಸ್ಥ ಸಮುದಾಯಕ್ಕೆ ಸೇರಿದ ಹಿರಿಯ ಬಿಜೆಪಿ ನಾಯಕ ದಿ. ನಬಿನ್ ಕಿಶೋರ್ ಸಿನ್ಹಾ ಅವರಾಗಿದ್ದ ಕಾರಣ, ರಾಜಕಾರಣ ಅವರಿಗೆ ಹೊಸದಾಗಿರಲಿಲ್ಲ.
ಬಂಕಿಪುರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ
2006ರಲ್ಲಿ 26ರ ತರುಣನಾಗಿದ್ದ ನಿತಿನ್, ತಮ್ಮ ತಂದೆಯವರ ಸ್ಥಾನವಾದ ಪಟನಾದ ಬಂಕಿಪುರದಿಂದ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು ಹಾಗೂ ವಿಜಯಶಾಲಿಯೂ ಆದರು. ಬಳಿಕ ಅದೇ ಕ್ಷೇತ್ರದಿಂದ 5 ಬಾರಿ (ಸತತ 4 ಸಲ) ಶಾಸಕರಾಗಿದ್ದರು. ನಂತರ ಲೋಕೋಪಯೋಗಿ ಸಚಿವರೂ ಆಗಿದ್ದರು.
ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಇವರು, ನಗರ ಮತ್ತು ಮೂಲಸೌಕರ್ಯ-ಕೇಂದ್ರಿತ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. 2023ರಲ್ಲಿ ನಡೆದ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ವೇಳೆ ನಿತಿನ್‌ರನ್ನು ಪಕ್ಷದ ಸಹ-ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಅಲ್ಲಿ ಕಾಂಗ್ರೆಸ್ ವಿರುದ್ಧ ಪಕ್ಷ ಭರ್ಜರಿ ಜಯ ಗಳಿಸಲು ಸಹಕಾರಿಯಾಗಿದ್ದ ಇವರು, ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯ ಅಧಿಕಾರ ಮುಂದುವರೆಯುವಲ್ಲಿ ಸಹಕಾರಿಯಾದರು.
ಈ ಮೂಲಕ ಪಕ್ಷ ಸಂಘಟನೆ ಮತ್ತು ಬಲವರ್ಧನೆಯಲ್ಲಿ ನಿತಿನ್ ಸೈ ಎನಿಸಿಕೊಂಡಿದ್ದಾರೆ.
