ಅಕ್ರಮ ಮಣ್ಣು ಲೂಟಿ ಮಾಡುವುದನ್ನು ಪ್ರಶ್ನಿಸಿದ ಶಾಸಕ ಬಿ.ಪಿ.ಹರೀಶ್ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಕೇಂದ್ರ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನೇತೃತ್ವದಲ್ಲಿ ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿದ್ದು, ಎನ್‌ಡಿಎ ಮಿತ್ರ ಪಕ್ಷ ಜೆಡಿಎಸ್ ಸಹ ಹೋರಾಟಕ್ಕೆ ಸಾಥ್ ನೀಡಿತು.
- ಹರಿಹರ ಶಾಸಕ ಹರೀಶ್ ವಿರುದ್ಧ ಅಟ್ರಾಸಿಟಿ ಕೇಸ್ ಖಂಡಿಸಿ ಸಿದ್ದೇಶ್ವರ ಸಾರಥ್ಯದಲ್ಲಿ ಹೋರಾಟ । ರವೀಂದ್ರನಾಥ, ರೇಣು ಗೈರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಅಕ್ರಮ ಮಣ್ಣು ಲೂಟಿ ಮಾಡುವುದನ್ನು ಪ್ರಶ್ನಿಸಿದ ಶಾಸಕ ಬಿ.ಪಿ.ಹರೀಶ್ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಕೇಂದ್ರ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನೇತೃತ್ವದಲ್ಲಿ ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿದ್ದು, ಎನ್‌ಡಿಎ ಮಿತ್ರ ಪಕ್ಷ ಜೆಡಿಎಸ್ ಸಹ ಹೋರಾಟಕ್ಕೆ ಸಾಥ್ ನೀಡಿತು.ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಕೆಲ ಹೊತ್ತು ಧರಣಿ ನಡೆಸಿದ ಬಿಜೆಪಿಗೆ ಜೆಡಿಎಸ್ ಪದಾಧಿಕಾರಿಗಳು, ಮುಖಂಡರು ಸಹ ಸಾಥ್ ನೀಡಿದರು. ಅಂಬೇಡ್ಕರ್ ವೃತ್ತದಿಂದ ಹದಡಿ ರಸ್ತೆ ಮಾರ್ಗವಾಗಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಜಿಲ್ಲಾ ಸಚಿವರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಸ್‌ಪಿಗಳ ಜತೆ ಮಾತಿನ ಚಕಮಕಿ:ಗ್ರಾಮಾಂತರ ಠಾಣೆ ಒಳಗೆ ತೆರಳಿದ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಶ್ರೀನಿವಾಸ ಟಿ.ದಾಸಕರಿಯಪ್ಪ, ಶಿವು ಇತರರು ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ನಗರ ಡಿವೈಎಸ್ಪಿ ಶರಣ ಬಸವೇಶ್ವರ ಬಳಿ ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ಧ ಜಾತಿ ನಿಂದನೆ ದೂರು ದಾಖಲು ಸಂಬಂಧ ತರಾಟೆಗೆ ತೆಗೆದುಕೊಂಡರು. ದೂರು ನೀಡಿದ ತಕ್ಷಣ ದಾಖಲು ಮಾಡಿದ್ದೀರಿ. ಅದೇ ಕಾಡಜ್ಜಿ ಸರ್ಕಾರಿ ಜಾಗದ ಮಣ್ಣು ಲೂಟಿ ಮಾಡಿದವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದಾಗ ಮುಖಂಡರು, ಡಿವೈಎಸ್ಪಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಾಡಜ್ಜಿಯಲ್ಲಿ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ತಡೆದ ಶಾಸಕ ಬಿ.ಪಿ.ಹರೀಶ್ ಮಾಡಿದ ತಪ್ಪೇನು? ಹರೀಶ ಸ್ಥಳಕ್ಕೆ ಹೋದಾಗ ದೂರು ನೀಡಿರುವ ವ್ಯಕ್ತಿಯಾಗಲೀ, ಟ್ರ್ಯಾಕ್ಟರ್ ಆಗಲಿ ಇರಲಿಲ್ಲ. ಮಣ್ಣು ಹೊಡೆದವರ ವಿರುದ್ಧ ಕೇಸ್ ಮಾಡಬೇಕಾದ ನೀವುಗಳು ಅಕ್ರಮ ತಡೆದವರ ಮೇಲೆಯೇ ಹಿಂದೆ, ಮುಂದೆ ಆಲೋಚಿಸದೇ ಕೇಸ್ ಮಾಡಿದ್ದೀರಿ ಎಂದು ಛಾಟಿ ಬೀಸಿದರು.ಕೇಸ್ ವಾಪಸ್ ಪಡೆಯಬೇಕು:
ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಮಾತನಾಡಿ, ಕಾಡಜ್ಜಿ ಮಣ್ಣು ಲೂಟಿ ವಿರುದ್ಧ ಧ್ವನಿ ಎತ್ತಿದ ಶಾಸಕ ಬಿ.ಪಿ.ಹರೀಶ ಅವರ ಮೇಲಿನ ಜಾತಿ ನಿಂದನೆ ಕೇಸ್ ಹಿಂಪಡೆಯಬೇಕು. ಮಣ್ಣು ಲೂಟಿ ಮಾಡಿದವರ ವಿರುದ್ಧ ಕೇಸ್ ಮಾಡಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ, ಅಕ್ರಮವನ್ನು ಪ್ರಶ್ನಿಸಿದ ಶಾಸಕರ ಮೇಲೆ ಕೇಸ್ ಮಾಡಿದ್ದೀರಿ. ಸುಳ್ಳು ಜಾತಿನಿಂದನೆ ಕೇಸ್ ಹಿಂಪಡೆಯದಿದ್ದರೆ ದಾವಣಗೆರೆ ಬಂದ್ ಸೇರಿದಂತೆ ವಿವಿಧ ಹಂತದ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.ನನ್ನ ವಿರುದ್ಧವೇ ಅಟ್ರಾಸಿಟಿ ಕೇಸ್ ಏಕೆ?:
ಶಾಸಕ ಬಿ.ಪಿ.ಹರೀಶ ಮಾತನಾಡಿ, ಮಣ್ಣು ಲೂಟಿ ಮಾಡಿದವರನ್ನು ಮೊದಲು ಬಂಧಿಸಿ. ಜಿಲ್ಲಾ ಮಂತ್ರಿ ಏನು ಮಾಡಿದರೂ ನಡೆಯುತ್ತಾ? ನಾನು ಸಾಕ್ಷಿ ಸಮೇತ ಮಣ್ಣು ಕಳ್ಳತನ ಮಾಡಿದ್ದು, ಅಕ್ರಮವಾಗಿ ಮಣ್ಣು ಸಾಗಿಸಿದ ಲಾರಿಗಳನ್ನು ಹಿಡಿದಿದ್ದೆ. ಆದರೆ, ನನ್ನ ವಿರುದ್ಧವೇ ಅಟ್ರಾಸಿಟಿ ಕೇಸ್ ಮಾಡಿದ್ದೀರಿ. ಅಟ್ರಾಸಿಟಿ ಹಾಕಿಸಿದ್ದಕ್ಕೆ ನನಗೆ ದಾಖಲೆ ಕೊಡಿ. ಅಕ್ರಮವಾಗಿ ಮಣ್ಣು ಲೂಟಿ ಮಾಡಿದವರ ಬಗ್ಗೆ ನಾನು ದೂರು ನೀಡಿದ್ದರೂ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು. ಆಗ ಮನವಿ ಕೊಡಿ ತನಿಖೆ ನಡೆಸುತ್ತೇವೆಂದು ಡಿವೈಎಸ್ಪಿಗಳು ಹೇಳುತ್ತಿದ್ದಂತೆ ಶಾಸಕ ಹರೀಶ್ ಮತ್ತೆ ಆಕ್ರೋಶಗೊಂಡರು.ಅದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಎಎಸ್‌ಪಿ ಪರಮೇಶ್ವರ ಹೆಗಡೆ, ಶಾಸಕ ಹರೀಶರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿಲ್ಲ. ಕೊಟ್ಟ ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿದ್ದೇವೆ. ಕಾಡಜ್ಜಿ ಕೃಷಿ ಇಲಾಖೆ ಜಮೀನಿನ ಮಣ್ಣು ಒಯ್ದವರ ವಿರುದ್ಧ ದೂರು ದಾಖಲಾಗಿದೆ ಎಂದು ಸ್ಪಷ್ಟಪಡಿಸಿದರು.
ಲಾರಿಗಳನ್ನು ಜಪ್ತಿ ಮಾಡಿಲ್ಲ?:ಪೊಲೀಸ್ ಅಧಿಕಾರಿಗಳ ಉತ್ತರಕ್ಕೆ ಮತ್ತೆ ಕೆರಳಿದ ಶಾಸಕ ಹರೀಶ, ನಿಮ್ಮ ಗ್ರಾಮಾಂತರ ಸಬ್ ಇನ್‌ಸ್ಪೆಕ್ಟರ್ ಸಮ್ಮುಖದಲ್ಲೇ ಮಣ್ಣು ತುಂಬಿಕೊಂಡು ಹೋಗುತ್ತಿದ್ದವರನ್ನು ಲಾರಿ ಸಮೇತ ತಡೆದಿದ್ದೇನೆ. ನೀವು ಯಾಕೆ ಲಾರಿಗಳನ್ನು ಜಪ್ತಿ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಎಎಸ್‌ಪಿ ಪರಮೇಶ್ವರ ಹೆಗಡೆ, ತನಿಖೆ ನಡೆಯುತ್ತಿದೆ ಎನ್ನುತ್ತಿದ್ದಂತೆ, ಇಂತಹ ಬುದ್ಧಿವಂತಿಕೆಯ ಉತ್ತರ ನಮಗೆ ಬೇಡ, ಸೀಟ್ ಬೆಲ್ಟ್ ಹಾಕದವರು, ಹೆಲ್ಮೆಟ್ ಹಾಕದವರು ನಿಮ್ಮ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಾರೆ. ಜಿಲ್ಲಾ ಮಂತ್ರಿಗಳು ಮಣ್ಣು ಕದ್ದಿದ್ದು ಮಾತ್ರ ಸೆರೆ ಆಗುವುದಿಲ್ಲವೇ? ನಿಮ್ಮಿಂದ ತಪ್ಪು ನಡೆದಿದೆ. ಸ್ಥಳಕ್ಕೆ ಎಸ್‌ಪಿ ಕರೆಸಿ ಎಂಬುದಾಗಿ ಹರೀಶ ಸೇರಿದಂತೆ ಬಿಜೆಪಿ ಮುಖಂಡರು ಪಟ್ಟು ಹಿಡಿದು ಕುಳಿತರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಗ್ರಾಮಾಂತರ ಠಾಣೆಗೆ ಬಂದ ನಂತರ ಬಿಜೆಪಿ ಮುಖಂಡರು ದೂರು ನೀಡಿ, ಕಾಡಜ್ಜಿ ಕೃಷಿ ಇಲಾಖೆ ಜಮೀನಿನಲ್ಲಿ ಮಣ್ಣು ಲೂಟಿ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ.ರಾಜೇಶ, ಎಂ.ಬಸವರಾಜ ನಾಯ್ಕ, ಮುಖಂಡರಾದ ಅಣಬೇರು ಜೀವನಮೂರ್ತಿ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಸ್.ಜಗದೀಶ, ಆಲೂರು ನಿಂಗರಾಜ, ಮಾಯಕೊಂಡ ಜಿ.ಎಸ್. ಶ್ಯಾಮ್, ಶಿವನಹಳ್ಳಿ ರಮೇಶ, ಚಂದ್ರಶೇಖರ ಪೂಜಾರ್, ಕೆ.ಎಂ.ಸುರೇಶ, ಹರಪನಹಳ್ಳಿ ಮುಖಂಡ ಎಂ.ಪಿ.ನಾಯ್ಕ, ನಂಜನಗೌಡ, ಎಚ್.ಎನ್. ಶಿವಕುಮಾರ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಕೆ.ಪ್ರಸನ್ನಕುಮಾರ, ಜಗದೀಶ ಕುಮಾರ ಪಿಸೆ, ಕೆಟಿಜೆ ನಗರ ಲೋಕೇಶ, ಡಿ.ಎಸ್. ಶಿವಶಂಕರ, ಕೆಟಿಜೆ ನಗರ ಆನಂದ, ನಿಂಗರಾಜ ರೆಡ್ಡಿ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ನೀಲಗುಂದ ರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಜೆ.ಅಮಾನುಲ್ಲಾ ಖಾನ್, ಬಿಜೆಪಿ ಮಹಿಳಾ ಮೋರ್ಚಾದ ಎಚ್.ಸಿ.ಜಯಮ್ಮ, ಭಾಗ್ಯ ಪಿಸಾಳೆ, ಅಶ್ವಿನಿ, ರೂಪಾ ಕಾಟ್ವೆ, ದಾಕ್ಷಾಯಣಮ್ಮ, ಚೇತನಾ ಕುಮಾರ ಇತರರು ಇದ್ದರು. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ ಪ್ರತಿಭಟನೆಯಲ್ಲಿ ಗೈರಾಗಿದ್ದರು.
- - -(ಟಾಪ್ ಕೋಟ್)
ಕಾಡಜ್ಜಿ ಕೃಷಿ ಇಲಾಖೆಯ ಸರ್ಕಾರಿ ಜಮೀನಿನಲ್ಲಿ ಮಣ್ಣು ತೆಗೆದುಕೊಂಡು ಹೋಗಿರುವ ಬಗ್ಗೆ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ. ಸರಿಯಾದ ರೀತಿ ತನಿಖೆ ಆಗಬೇಕೆಂಬು ಕೇಳಿಕೊಂಡಿದ್ದಾರೆ. ದೂರನ್ನು ಸ್ವೀಕರಿಸಿದ್ದು, ತನಿಖೆ ನಡೆಸುತ್ತೇವೆ. - ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ.- - -
-(ಫೋಟೋ ಬರಲಿವೆ):