ಸಾರಾಂಶ
ವಾಷಿಂಗ್ಟನ್: ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಕುರಿತು ಗಂಭೀರ ಆರೋಪವನ್ನು ಮಾಡಿದ್ದಾರೆ.
ಬರಾಕ್ ಒಬಾಮಾ ಸಲಿಂಗಕಾಮಿಯಾಗಿದ್ದು, ಅವರ ಪತ್ನಿ ಮಿಷೆಲ್ ಮಹಿಳೆಯಲ್ಲ. ಅವರು ಗಂಡಸು ಎಂದು ಹೇಳಿದ್ದಾರೆ. ಇವರ ಹೇಳಿಕೆ ಬೆನ್ನಲ್ಲೇ ಭಾರಿ ಸಂಚಲನ ಸೃಷ್ಟಿಯಾಗಿದೆ. ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಮಸ್ಕ್,‘ಮಿಷೆಲ್ ಓರ್ವ ಪುರುಷ. ಇದನ್ನು 2014ರಲ್ಲಿಯೇ ಹಾಸ್ಯಗಾರ್ತಿ ಜಾನ್ ರಿವರ್ಸ್ ತಮ್ಮ ಶೋನಲ್ಲಿ ಹೇಳಿದ್ದರು.
ಈ ಹೇಳಿಕೆ ನೀಡಿದ ಕೆಲವೇ ವಾರಗಳಲ್ಲಿ ಅವರು ಮೃತಪಟ್ಟರು. ಒಬಾಮಾ ಅವರೇ ಕೊಲೆ ಮಾಡಿಸಿದ್ದರು. ಬರಾಕ್ ಒಬಾಮಾ ‘ಗೇ’, ಅದಕ್ಕೇ ಪುರುಷರನ್ನೇ ಮದುವೆಯಾಗಿದ್ದಾರೆ ಎಂದಿದ್ದಾರೆ.
ವೆಚ್ಚ ಕಡಿತದ ಭಾಗವಾಗಿ 10000 ಸರ್ಕಾರಿ ಸಿಬ್ಬಂದಿ ವಜಾಗೊಳಿಸಿದ ಟ್ರಂಪ್
ವಾಷಿಂಗ್ಟನ್: ವೆಚ್ಚ ಕಡಿತದ ಯೋಜನೆಯ ಭಾಗವಾಗಿ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅಂದಾಜು 10000 ನೌಕರರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಮನೆಗೆ ಕಳುಹಿಸಿದೆ. ಅನೇಕರು ಇನ್ನೂ ತರಬೇತಿ ಅವಧಿಯಲ್ಲೇ ಕೆಲಸ ಕಳೆದುಕೊಂಡಿದ್ದಾರೆ. ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ‘ಸರ್ಕಾರದ ಬಹಳಷ್ಟು ಹಣ ವ್ಯರ್ಥವಾಗಿ ಖರ್ಚಾಗುತ್ತಿದೆ. ಸರ್ಕಾರ ಈಗಾಗಲೇ 3120 ಲಕ್ಷ ಕೋಟಿ ರು. ಸಾಲ ಹೊಂದಿದ್ದು, 156 ಲಕ್ಷ ಕೋಟಿ ರು. ಹಣಕಾಸು ಕೊರತೆ ಎದುರಿಸುತ್ತಿದೆ. ಸರ್ಕಾರದ ಆರ್ಥಿಕ ಸ್ಥಿತಿಯ ಸುಧಾರಣೆಗೆ ಈ ಕ್ರಮ ಅಗತ್ಯ’ ಎಂದಿದ್ದಾರೆ.
ಟ್ರಂಪ್ ಆಕ್ಷೇಪದ ಬೆನ್ನಲ್ಲೇ ಅಮೆರಿಕ ವಿಸ್ಕಿ ಮೇಲಿನ ಸುಂಕ ಇಳಿಸಿದ ಭಾರತ
ನವದೆಹಲಿ: ಭಾರತ ನಮ್ಮ ಉತ್ಪನ್ನಗಳ ಮೇಲೆ ಭಾರೀ ಸುಂಕ ಹೇರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಅಮೆರಿಕದ ಬಾರ್ಬೌನ್ ವಿಸ್ಕಿಯ ಮೇಲಿನ ಸುಂಕವನ್ನು ಭಾರತ ಸರ್ಕಾರ ಶೇ.150ರಿಂದ ಶೇ.100ಕ್ಕೆ ಇಳಿಸಿದೆ. ಹೀಗಾಗಿ ಈ ವಿಸ್ಕಿಯ ದರ ಇನ್ನು ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಯಲಿದೆ. ಅಮೆರಿಕ ವಸ್ತುಗಳಿಗೆ ಭಾರತದಲ್ಲಿ ಭಾರೀ ಪ್ರಮಾಣದ ತೆರಿಗೆ ವಿಧಿಸಲಾಗುತ್ತಿದೆ. ಇನ್ನು ಮುಂದೆ ಭಾರತ ಎಷ್ಟು ಪ್ರಮಾಣದ ತೆರಿಗೆ ವಿಧಿಸುತ್ತದೋ ಅಷ್ಟೇ ಪ್ರಮಾಣದ ತೆರಿಗೆಯನ್ನು ನಾವು ವಿಧಿಸುತ್ತೇವೆ ಎಂದು ಟ್ರಂಪ್ ಎಚ್ಚರಿಸಿದ್ದರು.
ಅಮೆರಿಕ ಸೇನೆಗೆ ತೃತೀಯ ಲಿಂಗಿಗಳ ನೇಮಕ ಬ್ಯಾನ್
ವಾಷಿಂಗ್ಟನ್: ಅಮೆರಿಕ ಸೇನೆಯು ಇನ್ನು ಮುಂದೆ ತೃತೀಯ ಲಿಂಗಿಗಳನ್ನು ಸೇನೆಗೆ ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಜ.27ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭದ್ರತಾ ಪಡೆಗಳಲ್ಲಿ ತೃತೀಯ ಲಿಂಗಿಗಳ ನೇಮಕವನ್ನು ನಿಷೇಧಗೊಳಿಸಿ ಆದೇಶಿಸಿದ್ದರು. ಇದರ ಬೆನ್ನಲ್ಲೇ ಸೇನೆಯು ಕ್ರಮಕ್ಕೆ ಮುಂದಾಗಿದೆ. ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸೇನೆ, ತೃತೀಯ ಲಿಂಗಿಗಳ ನೇಮಕಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಹಾಲಿ ಸೇವೆಯಲ್ಲಿರುವ ಸಿಬ್ಬಂದಿಗಳ ಲಿಂಗ ಪರಿವರ್ತನೆಗೆ ಮುಂದಾಗುವ ಕ್ರಮಗಳನ್ನು ಸಹ ನಿಲ್ಲಿಸಲಾಗಿದೆ ಎಂದು ತಿಳಿಸಿದೆ. ಇದು ಟ್ರಂಪ್ ಅವರು ಅಧಿಕಾರವಹಿಸಿಕೊಂಡ ಬಳಿಕ ತೃತೀಯ ಲಿಂಗಿ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮವಾಗಿದ್ದು, ಈ ಹಿಂದೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಹ ನಿಷೇಧ ಹೇರಿದ್ದರು.
ಕುಂಭಮೇಳದ ಅವಧಿ ವಿಸ್ತರಿಸಿ: ಸರ್ಕಾರಕ್ಕೆ ಅಖಿಲೇಶ್ ಆಗ್ರಹ
ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ಮೇಳದ ಅವಧಿ ವಿಸ್ತರಿಸುವಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ. ‘ಫೆ.26ರಂದು ಮೇಳ ಮುಕ್ತಾಯವಾಗಲಿದೆ. ಆದರೆ ಇನ್ನೂ ಸಾಕಷ್ಟು ಜನರಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಸರ್ಕಾರ ಮೇಳದ ಅವಧಿಯನ್ನು ವಿಸ್ತರಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು. ಈ ಹಿಂದೆಯೂ ಕುಂಭ ಮತ್ತು ಮಹಾಕುಂಭ ಮೇಳಗಳ ಅವಧಿ ವಿಸ್ತರಿಸಿದ ಉದಾಹರಣೆಯಿದೆ’ ಎಂದು ಅವರು ಹೇಳಿದ್ದಾರೆ. ಜ.13ರಿಂದ ಮೇಳ ಆರಂಭವಾಗಿದ್ದು, ಶುಕ್ರವಾರದವರೆಗೆ 50 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.