ಸಾರಾಂಶ
ನವದೆಹಲಿ: ಅಯೋಧ್ಯೆ ರೀತಿ ಹಿಂದೂ ದೇಗುಲಗಳನ್ನು ಕೆಡವಿ ನಿರ್ಮಿಸುವ ಮಸೀದಿ, ದರ್ಗಾಗಳನ್ನು ವಾಪಸ್ ಹಿಂದೂಗಳ ಕೈಗೊಪ್ಪಿಸಬೇಕೆಂಬ ಕೂಗು ಹೆಚ್ಚುತ್ತಿರುವ ನಡುವೆಯೇ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಪೂಜಾ ಸ್ಥಳದ ಕಾಯ್ದೆ-1991ರ ಕುರಿತು ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ಮಹತ್ವದ ವಿಚಾರಣೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಸಂಜಯ್ ಕುಮಾರ್ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರ ತ್ರಿಸದಸ್ಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ಸ್ವಾತಂತ್ರ್ಯಾನಂತರ ಧಾರ್ಮಿಕ ಸ್ಥಳಗಳು ಅಥವಾ ಪೂಜಾ ಸ್ಥಳಗಳು ಹೇಗಿವೆಯೋ ಅದೇ ರೀತಿ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಬೇಕು, ಯಾವುದೇ ಕಾರಣಕ್ಕೂ ಅಲ್ಲಿರುವ ಧಾರ್ಮಿಕ ಕುರುಹನ್ನು ಬದಲಾವಣೆ ಮಾಡಲು ಹೋಗಬಾರದು ಎಂದು ಈ ಕಾಯ್ದೆ ಹೇಳುತ್ತದೆ. ಆದರೆ, ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದವನ್ನು ಈ ಕಾಯ್ದೆಯಿಂದ ಹೊರಗಿಡಲಾಗಿತ್ತು.
ಇದೀಗ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಕೆಲ ಅರ್ಜಿಗಳಲ್ಲಿ 1991ರ ಕಾಯ್ದೆಯ ಮಾನ್ಯತೆಯನ್ನು ಪ್ರಶ್ನೆ ಮಾಡಲಾಗಿದ್ದರೆ, ಕೆಲವು ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಲಾಗಿತ್ತು.
ಜ.2ರಂದು ಎಐಐಎಂ ಮುಖ್ಯಸ್ಥ ಅಕ್ಬರುದ್ದೀನ್ ಓವೈಸಿ ಅವರು 1991ರ ಧಾರ್ಮಿಕ ಪೂಜಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಈಗಾಗಲೇ ಒಪ್ಪಿಕೊಂಡಿದೆ. ಇದಕ್ಕೂ ಮುನ್ನ ಡಿ.12ರಂದು ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠವು ಮಸೀದಿ ಮತ್ತು ದರ್ಗಾಕ್ಕೆ ಸಂಬಂಧಿಸಿ ಇದೇ ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಮತ್ತು ಯಾವುದೇ ಅಧ್ಯಂತರ ಅಥವಾ ಅಂತಿಮ ತೀರ್ಪು ನೀಡದಂತೆ ಎಲ್ಲಾ ಕೋರ್ಟ್‌ಗಳಿಗೆ ಸೂಚಿಸಿತ್ತು.
ಡಿ.12ರ ಆದೇಶದಿಂದಾಗಿ ಗ್ಯಾನವ್ಯಾಪಿ ಸೇರಿ ವಿವಿಧ 12ಕ್ಕೂ ಹೆಚ್ಚು ಮದೀಸಿ, ದರ್ಗಾಗಳ ವಿವಾದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ತಡೆ ಬಿದ್ದಿದೆ.