‘ಬಿಜೆಪಿ, ಆರೆಸ್ಸೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಪ್ರಧಾನಿ ಪಟ್ಟ ಸಿಗುತ್ತದೆ’ ಎಂದು ಹೊಗಳಿ, ಅದಕ್ಕೆ ಪೂರಕವಾಗಿ 90ರ ದಶಕದಲ್ಲಿ ಎಲ್‌.ಕೆ. ಅಡ್ವಾಣಿ ಅವರ ಎದುರು ನರೇಂದ್ರ ಮೋದಿ ಅವರು ನೆಲದ ಮೇಲೆ ಕುಳಿತಿದ್ದ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್‌ ಹೇಳಿಕೆ ಬಗ್ಗೆ ಕಾಂಗ್ರೆಸ್ಸಲ್ಲಿ ಪರ-ವಿರೋಧ ಚರ್ಚೆ ಮುಂದುವರಿದಿದೆ.

- ಪಕ್ಷದ ಸಂಘಟನೆ ಅಗತ್ಯ: ದಿಗ್ವಿ ಹೇಳಿಕೆಗೆ ತರೂರ್ ಸಹಾನುಭೂತಿ

- ಆರೆಸ್ಸೆಸ್ ಅಲ್‌ಖೈದಾ ಥರ, ಅದರಿಂದ ಏನು ಕಲೀಬೇಕು?: ಟ್ಯಾಗೋರ್‌

- ಗಾಂಧಿ ಹಂತಕರಿಂದ ನಾವೇನೂ ಕಲಿಯಬೇಕಿಲ್ಲ: ಸುಪ್ರಿಯಾ, ಖೇರಾಪಿಟಿಐ ನವದೆಹಲಿ

‘ಬಿಜೆಪಿ, ಆರೆಸ್ಸೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಪ್ರಧಾನಿ ಪಟ್ಟ ಸಿಗುತ್ತದೆ’ ಎಂದು ಹೊಗಳಿ, ಅದಕ್ಕೆ ಪೂರಕವಾಗಿ 90ರ ದಶಕದಲ್ಲಿ ಎಲ್‌.ಕೆ. ಅಡ್ವಾಣಿ ಅವರ ಎದುರು ನರೇಂದ್ರ ಮೋದಿ ಅವರು ನೆಲದ ಮೇಲೆ ಕುಳಿತಿದ್ದ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್‌ ಹೇಳಿಕೆ ಬಗ್ಗೆ ಕಾಂಗ್ರೆಸ್ಸಲ್ಲಿ ಪರ-ವಿರೋಧ ಚರ್ಚೆ ಮುಂದುವರಿದಿದೆ.ದಿಗ್ವಿ ಹೇಳಿಕೆಯನ್ನು ಪಕ್ಷದ ನಾಯಕರಾದ ಮಾಣಿಕ್ಯಂ ಟ್ಯಾಗೋರ್‌ ಹಾಗೂ ಸುಪ್ರಿಯಾ ಶ್ರೀನೇತ್‌ ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ ಪಕ್ಷದ ವಿರುದ್ಧ ಆಗಾಗ ಕಿಡಿಕಾರುವ ಹಿರಿಯ ಸಂಸದ ಶಶಿ ತರೂರ್‌ ಅವರು, ದಿಗ್ವಿಜಯ ಹೇಳಿಕೆ ಬಗ್ಗೆ ಸಹಾನುಭೂತಿಯ ಮಾತು ಆಡಿದ್ದಾರೆ.ಸಂಘಟನೆಗೆ ಬಲ ಅಗತ್ಯ- ತರೂರ್‌:

ಭಾನುವಾರ ಕಾಂಗ್ರೆಸ್‌ 140ನೇ ಸಂಸ್ಥಾಪನಾ ದಿನದಲ್ಲಿ ದಿಗ್ವಿಜಯ ಪಕ್ಕವೇ ಕೂತಿದ್ದ ತರೂರ್ ಅವರನ್ನು ಪತ್ರಕರ್ತರು ದಿಗ್ವಿ ಹೇಳಿಕೆ ಪ್ರಶ್ನಿಸಿದಾಗ, ‘ಸಂಘಟನೆಯನ್ನು ಬಲಪಡಿಸಬೇಕು, ಯಾವುದೇ ಸಂದೇಹವಿಲ್ಲ’ ಎಂದು ಹೇಳಿದರು.

ಅಲ್ಲದೆ, ‘ನಾವು (ತರೂರ್‌-ದಿಗ್ವಿಜಯ) ಸ್ನೇಹಿತರು. ಆಗಾಗ ಪರಸ್ಪರ ಮಾತನಾಡುತ್ತಲೇ ಇರುತ್ತೇವೆ. ಇಂದು ಕಾಂಗ್ರೆಸ್‌ನ 140 ನೇ ಸಂಸ್ಥಾಪನಾ ದಿನ. ಇದು ಪಕ್ಷಕ್ಕೆ ಬಹಳ ಮುಖ್ಯವಾದ ದಿವಸ. ಪಕ್ಷವು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ನಾವು ಹಿಂತಿರುಗಿ ನೋಡುವ ದಿನವಾಗಿದೆ’ ಎಂದರು.ಅಲ್‌ಖೈದಾಗೆ ಸಂಘ ಹೋಲಿಸಿದ ಟ್ಯಾಗೋರ್:

ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್, ಆರ್‌ಎಸ್‌ಎಸ್ ಅನ್ನು ಅಲ್-ಖೈದಾ ಉಗ್ರ ಸಂಘಟನೆ ಜತೆ ಹೋಲಿಸಿದ್ದು, ಈ ಎರಡೂ ಪಕ್ಷಗಳು ದ್ವೇಷವನ್ನು ಹರಡುತ್ತವೆ ಎಂದರು

‘ಆರ್‌ಎಸ್‌ಎಸ್ ದ್ವೇಷದ ಮೇಲೆ ನಿರ್ಮಿಸಲಾದ ಸಂಘಟನೆಯಾಗಿದೆ ಮತ್ತು ಅದು ದ್ವೇಷವನ್ನು ಹರಡುತ್ತದೆ. ದ್ವೇಷದಿಂದ ಕಲಿಯಲು ಏನೂ ಇಲ್ಲ. ಅಲ್-ಖೈದಾದಿಂದ ನೀವು ಏನನ್ನಾದರೂ ಕಲಿಯಬಹುದೇ? ಅಲ್-ಖೈದಾ ದ್ವೇಷದ ಸಂಘಟನೆ. ಅದು ಇತರರನ್ನು ದ್ವೇಷಿಸುತ್ತದೆ. ಆ ಸಂಘಟನೆಯಿಂದ ಕಲಿಯಲು ಏನು ಇದೆ?’ ಎಂದು ಟ್ಯಾಗೋರ್‌ ಪ್ರಶ್ನಿಸಿದರು.

ಸಂಘದ ಬಗ್ಗೆ ಶ್ರೀನೇತ್ ಕಿಡಿ:

ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಮಾತನಾಡಿ, ‘ ದಿಗ್ವಿಜಯ್ ಅವರ ಹೇಳಿಕೆಯ ಉದ್ದೇಶವನ್ನು ಬಿಜೆಪಿ ವಿರೂಪಗೊಳಿಸುತ್ತಿದೆ. ದ್ವೇಷ ಹರಡುವ ಮತ್ತು ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯ ಸಿದ್ಧಾಂತದಿಂದ ಸ್ಫೂರ್ತಿ ಪಡೆಯುವ ಸಂಘದಿಂದ ನಾವು ಏನನ್ನೂ ಕಲಿಯಬೇಕಾಗಿಲ್ಲ. ಬದಲಿಗೆ, ಇತರರು ನಮ್ಮಿಂದ ಕಲಿಯಬೇಕು’ ಎಂದರು. ಹಿರಿಯ ಕಾಂಗ್ರೆಸ್ ನಾಯಕ ಪವನ್‌ ಖೇರಾ ಹಾಗೂ ಸಲ್ಮಾನ್ ಖುರ್ಷಿದ್ ಕೂಡ ಇದೇ ಮಾತು ಆಡಿದರು.

--

ಗೋಡ್ಸೆ ಬೆಂಬಲಿಗರಿಂದ ಕಲಿಯಬೇಕಿಲ್ಲ: ದಿಗ್ವಿ ಯು-ಟರ್ನ್‌ನವದೆಹಲಿ: ಆರೆಸ್ಸೆಸ್‌ ಹಾಗೂ ಬಿಜೆಪಿ ಬಗ್ಗೆ ಶನಿವಾರ ಹೊಗಳಿದ್ದ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್‌ ಭಾನುವಾರ ಯು-ಟರ್ನ್‌ ಹೊಡೆದಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾಥುರಾಮ್ ಗೋಡ್ಸೆಯಂತಹ ಹಂತಕರಿಂದ ಕಾಂಗ್ರೆಸ್ ಏನನ್ನೂ ಕಲಿಯಬೇಕಾಗಿಲ್ಲ’ ಎಂದು ಹೇಳಿದರು. ಆದಾಗ್ಯೂ, ಪ್ರತಿಯೊಂದು ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿದರು.

‘ನಾನು ಏನು ಹೇಳಬೇಕೆಂದಿದ್ದೆನೋ ಅದನ್ನು ನಾನು ಈಗಾಗಲೇ ಹೇಳಿದ್ದೇನೆ. ದಯವಿಟ್ಟು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ. ನಾನು 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಮತ್ತು ನಾನು ಈ ಕೋಮುವಾದಿ ಶಕ್ತಿಗಳ ವಿರುದ್ಧ ವಿಧಾನಸಭೆ, ಸಂಸತ್ತು ಮತ್ತು ಸಂಘಟನೆಯಲ್ಲಿ ಹೋರಾಡಿದ್ದೇನೆ. ನಾನು ಯಾವಾಗಲೂ ಬಿಜೆಪಿ-ಆರ್‌ಎಸ್‌ಎಸ್‌ ಸಿದ್ಧಾಂತ ವಿರೋಧಿಸುತ್ತೇನೆ ಮತ್ತು ನಾನು ಅವರ ವಿರುದ್ಧ ಹೋರಾಡುತ್ತಲೇ ಇರುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ನಿನ್ನೆ ಕೆಟ್ಟದಾಗಿ ವರ್ತಿಸಿದರಿ: ದಿಗ್ವಿಗೆ ರಾಹುಲ್‌ ತಮಾಷೆ!

ನವದೆಹಲಿ: ‘ತಳಮಟ್ಟದ ಕಾರ್ಯಕರ್ತರಿಗೆ ಮನ್ನಣೆ ನೀಡುವುದು ಹೇಗೆಂದು ಆರ್‌ಎಸ್‌ಎಸ್-ಬಿಜೆಪಿ ಅನ್ನು ನೋಡಿ ಕಲಿಯಬೇಕು’ ಎಂದು ಗಾಂಧಿಗಳತ್ತ ಚಾಟಿ ಬೀಸಿದ್ದ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್ ಅವರು ಕಾಂಗ್ರೆಸ್ ಸಂಸ್ಥಾಪನಾ ದಿನದ ವೇಳೆ, ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮುಖಾಮುಖಿಯಾಗಿ ಭೇಟಿಯಾದರು.ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ದಿಗ್ವಿಜಯ ಜತೆ ಕೈಕುಲುಕುತ್ತಾ ತಮಾಷೆಯಾಗಿ, ‘ನೀವು ನಿನ್ನೆ ಅನುಚಿತವಾಗಿ ವರ್ತಿಸಿದ್ದೀರಿ!’ ಎಂದು ಹೇಳಿದಾಗ, ಸೋನಿಯಾ ಗಾಂಧಿ ಸೇರಿದಂತೆ ಸುತ್ತಲೂ ನಿಂತಿದ್ದ ನಾಯಕರು ನಗೆಗಡಲಲ್ಲಿ ತೇಲಿದರು.ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ನಂತರ, ಪಕ್ಷದ ಪ್ರಧಾನ ಕಚೇರಿಯಲ್ಲಿ ನಾಯಕರಿಗೆ ಚಹಾ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಈ ಸಮಯದಲ್ಲಿ ತಮಾಷೆಯಾಗೇ ರಾಹುಲ್‌-ದಿಗ್ವಿ ಮಾತನಾಡಿದ್ದು ವಿಏಷವಾಗಿತ್ತು.