‘ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಯಾವುದೇ ರಾಜಕೀಯ ಕಾರ್ಯಸೂಚಿ ಇಲ್ಲ. ಸಂಘವನ್ನು ಬಿಜೆಪಿಯ ಕಣ್ಣಿನಿಂದ ನೋಡುವುದು ದೊಡ್ಡ ತಪ್ಪು. ದಾರಿ ತಪ್ಪಿಸುವ ಕೆಲವು ಅಭಿಯಾನಗಳಿಂದಾಗಿ ಒಂದು ವರ್ಗದ ಜನರಲ್ಲಿ ಸಂಘಟನೆಯ ಬಗ್ಗೆ ತಪ್ಪು ಕಲ್ಪನೆಗಳಿವೆ’ ಎಂದು ಆರ್‌ಎಸ್ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಹೇಳಿದ್ದಾರೆ.

ಸಂಘಕ್ಕೆ ಯಾವುದೇ ರಾಜಕೀಯ ಕಾರ್ಯಸೂಚಿ ಇಲ್ಲ: ಸ್ಪಷ್ಟನೆ

ಕೋಲ್ಕತಾ: ‘ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಯಾವುದೇ ರಾಜಕೀಯ ಕಾರ್ಯಸೂಚಿ ಇಲ್ಲ. ಸಂಘವನ್ನು ಬಿಜೆಪಿಯ ಕಣ್ಣಿನಿಂದ ನೋಡುವುದು ದೊಡ್ಡ ತಪ್ಪು. ದಾರಿ ತಪ್ಪಿಸುವ ಕೆಲವು ಅಭಿಯಾನಗಳಿಂದಾಗಿ ಒಂದು ವರ್ಗದ ಜನರಲ್ಲಿ ಸಂಘಟನೆಯ ಬಗ್ಗೆ ತಪ್ಪು ಕಲ್ಪನೆಗಳಿವೆ’ ಎಂದು ಆರ್‌ಎಸ್ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಶತಮಾನೋತ್ಸವದ ನಿಮಿತ್ತ ಕೋಲ್ಕತಾದ ಸೈನ್ಸ್ ಸಿಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಘಕ್ಕೆ ಯಾವುದೇ ರಾಜಕೀಯ ಕಾರ್ಯಸೂಚಿಗಳಿಲ್ಲ. ಅನೇಕರು ಬಿಜೆಪಿಯ ದೃಷ್ಟಿಯಲ್ಲಿ ಸಂಘವನ್ನು ಅರ್ಥಮಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದಾರೆ, ಇದು ದೊಡ್ಡ ತಪ್ಪು. ಸಂಘ ಬೆಳೆದರೆ ಸಂಕುಚಿತ ಹಿತಾಸಕ್ತಿ ಹೊಂದಿರುವವರ ಅಂಗಡಿಗಳು ಮುಚ್ಚುತ್ತವೆ. ಸಂಘದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಹಕ್ಕಿದೆ. ಆದರೆ ಅದು ವಾಸ್ತವದ ಮೇಲೆ ನಿಂತಿರಬೇಕು. ಯಾವುದೇ ಕಥನ (ನರೇಟಿವ್) ಅಥವಾ 2ನೇ ಮಾಹಿತಿ ಮೂಲದ ಮೇಲೆ ನಿಂತಿರಬಾರದು’ ಎಂದರು.

‘ಸಂಘಕ್ಕೆ ಯಾವುದೇ ಶತ್ರುಗಳಿಲ್ಲ. ಹಿಂದೂ ಸಮಾಜದ ಉನ್ನತಿ ಮತ್ತು ರಕ್ಷಣೆಗಾಗಿ ಸಂಘ ಕೆಲಸ ಮಾಡುತ್ತದೆ. ಭಾರತ ಮತ್ತೊಮ್ಮೆ ವಿಶ್ವಗುರುವಾಗುತ್ತದೆ. ಹಿಂದೂ ಸಮಾಜವನ್ನು ಆ ಉದ್ದೇಶಕ್ಕಾಗಿ ಸಜ್ಜುಗೊಳಿಸುವುದೇ ಸಂಘದ ಕರ್ತವ್ಯ. ಹೀಗಾಗಿ ಕೋಲ್ಕತಾ, ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ’ ಎಂದು ತಿಳಿಸಿದರು.