ಸಾರಾಂಶ
ಪಾಕಿಸ್ತಾನ ದಾಳಿಯ ತೀವ್ರತೆ ತಡೆಯಲಾಗದೇ ಅದು ಬಾಲಮುದುಡಿಕೊಂಡು ಬೆದರಿದ ನಾಯಿಯ ರೀತಿ ಕದನ ವಿರಾಮಕ್ಕಾಗಿ ಅಲೆದಾಡಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಪಾಕಿಸ್ತಾನದ ಸ್ಥಿತಿಯನ್ನು ಬಣ್ಣಿಸಿದ್ದಾರೆ.
ವಾಷಿಂಗ್ಟನ್ : ಸೀಮಿತ ಸ್ಥಳಗಳನ್ನು ಗುರಿಯಾಗಿಸಿ ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ ಅಕ್ಷರಶಃ ಬೆಚ್ಚಿಬಿದ್ದಿತ್ತು. ದಾಳಿಯ ತೀವ್ರತೆ ತಡೆಯಲಾಗದೇ ಅದು ಬಾಲಮುದುಡಿಕೊಂಡು ಬೆದರಿದ ನಾಯಿಯ ರೀತಿಯಲ್ಲಿ ಕದನ ವಿರಾಮಕ್ಕಾಗಿ ಅಲೆದಾಡಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಪಾಕಿಸ್ತಾನದ ಸ್ಥಿತಿಯನ್ನು ಬಣ್ಣಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರುಬಿನ್, ‘ಭಾರತ, ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಅತ್ಯಂತ ನಿಖರ ದಾಳಿ ನಡೆದಿತ್ತು. ಪಾಕಿಸ್ತಾನದ ಸೇನೆ ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದ ಸ್ಥಿತಿಯಲ್ಲಿತ್ತು. ಅದು ಸಮರವನ್ನು ಅತ್ಯಂತ ಹೀನಾಯವಾಗಿ ಸೋತಿತು. ಈ ಸಮರದಲ್ಲಿ ಭಾರತ ಸೇನಾಶಕ್ತಿ ಮತ್ತು ರಾಜತಾಂತ್ರಿಕವಾಗಿ ಬಹುದೊಡ್ಡ ಗೆಲುವು ಸಾಧಿಸಿತು. ಈ ದಾಳಿಯ ಬಳಿಕ ಎಲ್ಲರ ಗಮನ ಇದೀಗ ಪಾಕಿಸ್ತಾನ ಸರ್ಕಾರ ಪ್ರಾಯೋಜಿತ ಉಗ್ರವಾದದ ಮೇಲೆ ನೆಟ್ಟಿದೆ’ ಎಂದು ಬಣ್ಣಿಸಿದ್ದಾರೆ.
ಭಾರತದ ದಾಳಿಗೆ ಬಲಿಯಾದ ಉಗ್ರರ ಅತ್ಯಸಂಸ್ಕಾರದಲ್ಲಿ ಪಾಕಿಸ್ತಾನದ ಸೇನೆ ಅಧಿಕಾರಿಗಳು ಭಾಗಿಯಾಗಿದ್ದು, ಉಗ್ರರು, ಪಾಕ್ ಸೇನೆ ಮತ್ತು ಐಎಸ್‌ಐ ಉಗ್ರ ಸಂಘಟನೆ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಾಗತಿಕ ಸಮುದಾಯ ಈ ಕೊಳೆತ ವ್ಯವಸ್ಥೆಯ ಬಗ್ಗೆ ಪಾಕಿಸ್ತಾನವನ್ನು ಪ್ರಶ್ನಿಸಲಿದೆ. ಪಾಕ್‌ನ ಈ ಮುಖವಾಡ ಬಯಲು ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಅದನ್ನು ಭಾರತ ಏಕಾಂಗಿ ಮಾಡಿದೆ. ಇದು ಭಾರತದ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ.
ಭಾರತದ ದಾಳಿಗೆ ಪಾಕ್ ಪ್ರತಿಕ್ರಿಯಿಸಲು ಹೋದಾಗ ಅದನ್ನು ಪೂರ್ಣ ಮಟ್ಟಹಾಕುವಲ್ಲಿ ಭಾರತ ಯಶಸ್ವಿಯಾಯಿತು. ಆದರೂ ಸುಮ್ಮನಾಗದ ಪಾಕಿಸ್ತಾನ ಮತ್ತೆ ತಿರುಗೇಟು ನೀಡಲು ಹೋದಾಗ, ಅವರ ವಾಯುನೆಲೆಗಳನ್ನೇ ಮಾಡದ ರೀತಿಯಲ್ಲಿ ಭಾರತ ಧ್ವಂಸ ಮಾಡಿತು. ಹೀಗಾಗಿ ಪಾಕಿಸ್ತಾನವು, ಕದನ ವಿರಾಮಕ್ಕಾಗಿ ಕಾಲಿನ ನಡುವೆ ಬಾಲ ಮುದುಡಿಕೊಂಡ ಬೆದರಿದ ನಾಯಿಯ ರೀತಿಯಲ್ಲಿ ಸುತ್ತಾಡಿತು’ ಎಂದು ರುಬಿನ್ ಪಾಕ್‌ನ ದಯನೀಯ ಕಥೆಯನ್ನು ವರ್ಣಿಸಿದ್ದಾರೆ.