ಸಾರಾಂಶ
ನವದೆಹಲಿ: ಪಾಕಿಸ್ತಾನದ ಜೊತೆಗೆ ಇನ್ನೇನಾದರೂ ಮಾತುಕತೆ ಇದೆ ಎಂದಾದಲ್ಲಿ, ಅದು ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಮರಳಿಸುವ ಕುರಿತು ಮತ್ತು ಪಾಕಿಸ್ತಾನದ ನೆಲದಲ್ಲಿರುವ ಭಯೋತ್ಪಾದಕರನ್ನು ಹಸ್ತಾಂತರಿಸುವ ಕುರಿತು ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಪಾಕ್‌ನೊಂದಿಗೆ ದೇಶದ ಸಂಬಂಧದ ಕುರಿತು ಸುಳಿವು ನೀಡಿದ್ದಾರೆ.
‘ಆಪರೇಷನ್ ಸಿಂದೂರ’ ಮೂಲಕ ಪಾಕಿಸ್ತಾನಕ್ಕೆ ಭಾರತ ಛಡಿಯೇಟು ಕೊಡಲು ಆರಂಭಿಸಿದ ಬಳಿಕ, ‘ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು. ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು’ ಎಂದು ಒತ್ತಾಯಿಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಪ್ರಧಾನಿ, ‘ಕಾಶ್ಮೀರದ ಬಗ್ಗೆ ನಮಗೆ ಸ್ಪಷ್ಟವಾದ ನಿಲುವಿದೆ.
ಪಿಒಕೆಯನ್ನು ಭಾರತಕ್ಕೆ ಹಿಂದಿರುಗಿಸಬೇಕು. ಅವರು ಉಗ್ರವಾದದ ಬಗ್ಗೆ ಮಾತನಾಡಿದರೆ, ನಾವು ಮಾತನಾಡಬಹುದು. ಅದಕ್ಕೆ ಹೊರತಾಗಿ ಮಾತನಾಡಲು ಬೇರೆ ಯಾವುದೇ ವಿಷಯವಿಲ್ಲ. ಎರಡು ದೇಶಗಳ ನಡುವೆ ಕಾಶ್ಮೀರ ವಿಷಯದಲ್ಲಿ ಮೂರನೇ ದೇಶವೊಂದು ಮಧ್ಯಸ್ಥಿಕೆ ವಹಿಸುವುದು ನಮಗೆ ಇಷ್ಟವಿಲ್ಲ. ಅದರ ಅಗತ್ಯವೂ ಇಲ್ಲ’ ಎಂದರು ಎಂದು ತಿಳಿದುಬಂದಿದೆ.