ಸಾರಾಂಶ
ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ 2014ರಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆ ಘೋಷಿಸಿದ ನಂತರ ಇದು ಹೈ ವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದೆ.
ಪುರಾತನ ನಗರಿ ವಾರಾಣಸಿ ಆಧ್ಯಾತ್ಮಿಕ ರಾಜಧಾನಿ. ರಾಜಕೀಯ ಮತ್ತು ಚುನಾವಣಾ ಕಾರಣಕ್ಕೆ ವಾರಾಣಸಿಯೆಂಬ ಊರು ಅತಿಹೆಚ್ಚು ಚರ್ಚೆಗೆ ಕಾರಣವಾಗಿದ್ದು 2014ರಲ್ಲಿ. ನರೇಂದ್ರ ಮೋದಿಯವರಿಗೆ ರಾಷ್ಟ್ರ ರಾಜಕಾರಣಕ್ಕೆ ವೇದಿಕೆ ಕೊಟ್ಟ ಲೋಕಸಭಾ ಕ್ಷೇತ್ರ ವಾರಾಣಸಿ. ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ 2014ರಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆ ಘೋಷಿಸಿದ ನಂತರ ಇದು ಹೈ ವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದೆ.
ತಾಯಿ ಗಂಗೆಯೇ ನನ್ನ ಇಲ್ಲಿಗೆ ಕರೆದಿದ್ದಾಳೆ ಎನ್ನುವ ಮೂಲಕ ಮೋದಿ 2014ರಲ್ಲಿ ನಾಮಪತ್ರ ಸಲ್ಲಿಸಿದ್ದರು. ಗುಜರಾತ್‌ನ ವೊಡೋದರಾದಲ್ಲೂ ಸ್ಪರ್ಧಿಸಿ ಗೆದ್ದರಾದರೂ ವಾರಾಣಸಿ ಕ್ಷೇತ್ರವನ್ನೇ ಉಳಿಸಿಕೊಂಡರು. ಉತ್ತರ ಪ್ರದೇಶದಂತಾ ದೊಡ್ಡ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಎನ್ನುವ ಕಾರಣಕ್ಕೆ ಮೋದಿ ವಾರಾಣಸಿಯನ್ನ ಆಯ್ಕೆ ಮಾಡಿಕೊಂಡಿದ್ದರು. ಇದೆಲ್ಲವೂ ಆಗಿ 10 ವರ್ಷಗಳಾಗಿವೆ. 2019ರಲ್ಲೂ ಮೋದಿ ಇಲ್ಲಿಂದಲೇ ಚುನಾವಣೆ ಎದುರಿಸಿ 2ನೇ ಬಾರಿಗೆ ಗೆದ್ದು ಮತ್ತೆ ಪ್ರಧಾನಿಯಾಗಿ ಮುಂದುವರಿದರು. ಮೋದಿಯವರಿಗೆ ವಾರಾಣಸಿಯಲ್ಲಿ ಇದು ಮೂರನೇ ಚುನಾವಣೆ.
ಮೋದಿ ಗೆಲುವಿಗೆ ಅಮಿತ್ ಶಾ, ಯೋಗಿ ದುಡಿಮೆ..!:
ನರೇಂದ್ರ ಮೋದಿ ಇದೇ ತಿಂಗಳ 13ರಂದು ವಾರಾಣಸಿಯಲ್ಲಿ ದೊಡ್ಡ ರೋಡ್ ಶೋ ನಡೆಸಿದರು. 2014 ಮತ್ತು 2019ರಲ್ಲಿ ನಡೆದ ರೋಡ್ ಶೋಗಿಂತ ಈ ಬಾರಿಯ ರೋಡ್ ಶೋ ಭಿನ್ನವಾಗಿತ್ತು. ಕಾರಣ ಕಳೆದ ಎರಡೂ ಬಾರಿ ಮೋದಿ ಏಕಾಂಗಿಯಾಗಿ ರೋಡ್ ಶೋ ಮಾಡಿದ್ದರು. ಆದ್ರೆ ಈ ಬಾರಿ ಮೋದಿಯವರ ಜತೆ ಯೋಗಿ ಆದಿತ್ಯನಾಥ್ ಅವರೂ ಇದ್ದರು. ಕಾಶಿ ವಿಶ್ವನಾಥನ ದರ್ಶನ ಪಡೆಯುವಾಗಲೂ ಯೋಗಿ ಜತೆಯಲ್ಲೇ ಇದ್ದರು. ಈ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನ ಸ್ವತಃ ಅಮಿತ್ ಶಾ ಅವರೇ ಹೊತ್ತಿದ್ದಾರೆ. ಚುನಾವಣಾ ಪ್ರಚಾರ ಆರಂಭವಾದಾಗಿನಿಂದ ಅಮಿತ್ ಶಾ ವಾರಾಣಾಸಿಗೆ 10 ಕ್ಕೂ ಹೆಚ್ಚು ಬಾರಿ ಬಂದು ಹೋಗಿದ್ದಾರೆ. ಜೆಪಿ ನಡ್ಡಾ ಈಗಾಗಲೇ ಹಲವು ಬಾರಿ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ.
ಕಾಂಗ್ರೆಸ್ಗೆ ಈ ಬಾರಿಯೂ ಗೆಲ್ಲುವ ಉತ್ಸಾಹವಿಲ್ಲ:
ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಅಜಯ್ ರಾಯ್ ಸ್ಪರ್ಧಿಸಿದ್ದಾರೆ. ಬಿಎಸ್‌ಪಿ ಅಥರ್ ಜಮಾಲ್ ಲಾರಿ ಎಂಬ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ಕೊಟ್ಟಿದೆ. ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರೋ ಅಜಯ್ ರಾಯ್ ಕಳೆದೆರಡೂ ಚುನಾವಣೆಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಮೂರನೇ ಬಾರಿಗೂ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಿದೆ. ವಾರಾಣಸಿಯವರೇ ಆದ ಅಜಯ್ ರಾಯ್ ನರೇಂದ್ರ ಮೋದಿಯವರು ಹೊರಗಿನವರು ಅನ್ನೋ ಅಸ್ತ್ರ ಪ್ರಯೋಗಿಸಿ ಎರಡೂ ಬಾರಿ ಸೋತಿದ್ದಾರೆ, ಈ ಬಾರಿಯೂ ಸೇರಿದರೆ ಮೂರನೆಯದ್ದಾಗುತ್ತೆ. ಬಿಎಸ್‌ಪಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿರೋದ್ರಿಂದ ಸ್ವಲ್ಪಮಟ್ಟಿಗೆ ಮುಸ್ಲಿಂ ವೋಟ್‌ಗಳು ಛಿದ್ರವಾಗಬಹುದು.
ಅಭಿವೃಯತ್ತ ಸಾಗಿದೆ ವಾರಾಣಸಿ:
ನರೇಂದ್ರ ಮೋದಿ ವಾರಾಣಸಿ ಸಂಸದರಾದ ಮೇಲೆ ವಾರಾಣಸಿಯ ರಸ್ತೆಗಳು ಅಭಿವೃದ್ಧಿ ಕಂಡಿವೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಈಗಿಲ್ಲ. ಗಂಗಾ ತೀರದ ಘಾಟ್ಗಳನ್ನ ಅಭಿವೃದ್ಧಿಪಡಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮೋದಿಯವರ ಅತಿ ಮುಖ್ಯ ಸಾಧನೆ. ಕಾಶಿ ಕಾರಿಡಾರ್ ನಿರ್ಮಾಣವಾದ ಮೇಲೆ ಬರುವ ಪ್ರವಾಸಿಗರ ಸಂಖ್ಯೆಯೂ ಬಹಳಷ್ಟು ಹೆಚ್ಚಾಗಿದೆ. ಇದರ ಪರಿಣಾಮ ವಾರಾಣಸಿಯಲ್ಲಿ ವ್ಯಾಪಾರ-ವ್ಯವಹಾರ ದಿನೇ ದಿನೇ ಹೆಚ್ಚಾಗುತ್ತಿದೆ. ಬನಾರಸ್ ರೈಲ್ವೇ ನಿಲ್ದಾಣ ಅತ್ಯಾಧುನಿಕ ಸವಲತ್ತಿನೊಂದಿಗೆ ತಲೆಯೆತ್ತಿ ನಿಂತಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಓಡಾಡುತ್ತಿದೆ. ವಾರಾಣಸಿಗೆ ರಿಂಗ್ ರೋಡ್, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಕೆಲಸಗಳು ನಡೆಯುತ್ತಿವೆ.
ನಮಾಮಿ ಗಂಗೆ ಯೋಜನೆ:
2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಬೆನ್ನಿಗೇ ಆರಂಭವಾಗಿದ್ದು ನಮಾಮಿ ಗಂಗೆ ಯೋಜನೆ. ಶತಮಾನಗಳಿಂದ ಮಾಲಿನ್ಯದ ಕಳಂಕ ಹೊತ್ತಿದ್ದ ಗಂಗೆಯನ್ನ ಶುದ್ಧೀಕರಿಸುವ ಮಹತ್ವಾಕಾಂಕ್ಷಿಯ ಯೋಜನೆ. ಆರಂಭದಲ್ಲಿ 22 ಸಾವಿರ ಕೋಟಿ ಬಜೆಟ್ನಲ್ಲಿ ಆರಂಭವಾದ ಈ ಯೋಜನೆ ಈಗ 40 ಸಾವಿರ ಕೋಟಿಯನ್ನ ಮೀರಿದೆ. ಗಂಗೆಯನ್ನ ಸ್ವಚ್ಛಗೊಳಿಸುವ ಒಟ್ಟು 457 ಯೋಜನೆಗಳಲ್ಲಿ 10 ವರ್ಷದಲ್ಲಿ 280 ಯೋಜನೆಗಳು ಪೂರ್ಣವಾಗಿವೆ. ಹಲವು ನಗರಗಳನ್ನ ದಾಟಿಕೊಂಡು ವಾರಾಣಸಿಗೆ ಬರುವ ಗಂಗೆಗೆ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು ಈಗಲೂ ನದಿ ಸೇರುತ್ತಿದೆ. ಗಂಗಾ ನದಿಯ ಸ್ವಚ್ಛತೆ ಅಂದ್ರೆ ಅದು ಕಾಶಿಯಲ್ಲಷ್ಟೇ ನಡೀತಿಲ್ಲ. ಉತ್ತರ ಪ್ರದೇಶದಲ್ಲೇ ಗಂಗೆ 1,140 ಕಿ.ಮೀ. ಹರಿಯುತ್ತಾಳೆ. ಅಷ್ಟುದ್ದಕ್ಕೂ ಸ್ವಚ್ಛತೆಯಿಂದಿಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.
ಕಾಶಿಯನ್ನೇ ಬದಲಿಸಿದ ವಿಶ್ವನಾಥ ಕಾರಿಡಾರ್:
ಶತಮಾನಗಳ ಇತಿಹಾಸವಿರೋ ವಿಶ್ವನಾಥ ದೇಗುಲ ಕಾಶಿಯ ಗಲ್ಲಿಗಳಲ್ಲಿ ಕಳೆದುಹೋಗಿತ್ತು. ಗಂಗಾ ನದಿಗೂ, ಕಾಶಿ ವಿಶ್ವನಾಥನ ದೇಗುಲಕ್ಕೂ ನೇರ ಸಂಪರ್ಕವೇ ಇರಲಿಲ್ಲ. ಕಿಶ್ಕಿಂದೆಯಲ್ಲಿ ಕಳೆದುಹೋಗಿದ್ದ ಕಾಶಿ ವಿಶ್ವನಾಥನ ದೇಗುಲ ಈಗ ಕಾಶಿ ಕಾರಿಡಾರ್ ಮೂಲಕ ಕಂಗೊಳಿಸುತ್ತಿದೆ. ವಾರಾಣಸಿಯಲ್ಲಿ ಮೋದಿ ಗೆದ್ದಮೇಲೆ ಮೊದಲು ಮಾಡಿದ್ದು ಈ ಕಾರಿಡಾರ್ ವ್ಯವಸ್ಥೆ. 900 ಕೋಟಿ ವೆಚ್ಚದಲ್ಲಿ 2019ರ ಮಾರ್ಚ್ನಲ್ಲಿ ಆರಂಭವಾದ ಕಾಮಗಾರಿ 2021ರ ಡಿಸೆಂಬರ್ನಲ್ಲಿ ಪೂರ್ಣವಾಗಿ ಲೋಕಾರ್ಪಣೆಯಾಯ್ತು. ಮೊದಲು 3 ಸಾವಿರ ಚದುರಡಿಯಿದ್ದ ದೇವಸ್ಥಾನದ ಆವರಣ ಈಗ 5 ಲಕ್ಷ ಚದುರ ಅಡಿಯಷ್ಟು ವಿಸ್ತಾರಗೊಂಡಿದೆ. ಇದರಿಂದ ಭಕ್ತಾಧಿಗಳ ಸಂಖ್ಯೆ ವಿಪರೀತವಾಗಿ ಏರಿಕೆ ಕಂಡಿದೆ.
===
ವಾರಾಣಸಿ ಚುನಾವಣಾ ಇತಿಹಾಸ
- ಒಟ್ಟು 17 ಚುನಾವಣೆಗಳಲ್ಲಿ ಕಾಂಗ್ರೆಸ್ 7, ಬಿಜೆಪಿ 7 ಬಾರಿ ಗೆಲುವು.
- 3 ಬಾರಿ ಇತರೆ ಪಕ್ಷಗಳ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದರು.
- ವಾರಾಣಸಿಯಲ್ಲಿ ಕಾಂಗ್ರೆಸ್ ಕೊನೆದಾಗಿ 2004ರಲ್ಲಿ ಗೆದ್ದಿತ್ತು.
- ಕಳೆದ 7 ಚುನಾವಣೆಗಳಲ್ಲಿ 6 ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸಿದೆ.
===
ವಾರಾಣಸಿಯಲ್ಲಿ ನರೇಂದ್ರ ಮೋದಿ
2014ರ ಚುನಾವಣಾ ಫಲಿತಾಂಶ
ನರೇಂದ್ರ ಮೋದಿ ಬಿಜೆಪಿ 5,81,02,256 ಮತಗಳು
ಅರವಿಂದ ಕೇಜ್ರಿವಾಲ್ ಆಪ್ 2,09,23,820 ಮತಗಳು
ಅಜಯ್ ರಾಯ್ ಕಾಂಗ್ರೆಸ್ 7,56,147 ಮತಗಳು
ಗೆಲುವಿನ ಅಂತರ 3,71,784
--------------------
2019ರ ಚುನಾವಣಾ ಫಲಿತಾಂಶ
ನರೇಂದ್ರ ಮೋದಿ ಬಿಜೆಪಿ 6,74,664 ಮತಗಳು
ಶಾಲಿನಿ ಯಾದವ್ ಎಸ್ಪಿ 1,95,159 ಮತಗಳು
ಅಜಯ್ ರಾಯ್ ಕಾಂಗ್ರೆಸ್ 1,52,548 ಮತಗಳು
ಗೆಲುವಿನ ಅಂತರ 4,79,505