ಪಾಕ್‌ ಗಡಿಯ ವಾಯುನೆಲೆಗೆ ಮೋದಿ ಭೇಟಿ

| Published : May 13 2025, 11:57 PM IST

ಸಾರಾಂಶ

ಸೋಮವಾರವಷ್ಟೇ ವಿಶ್ವವನ್ನು ಉದ್ದೇಶಿಸಿ ಪಾಕ್‌ ಉಗ್ರರ ವಿರುದ್ಧ ಆಪರೇಷನ್‌ ಸಿಂದೂರದ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅದರ ಮರುದಿನ ಬೆಳ್ಳಂಬೆಳಗ್ಗೆಯೇ ಪಂಜಾಬ್‌ನ ಅದಂಪುರ ವಾಯುನೆಲೆಗೆ ತೆರಳಿ, ದೇಶರಕ್ಷಕರ ಜತೆ ಮಾತುಕತೆ ನಡೆಸಿದರು.

ಯೋಧರು ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯ ಪ್ರತೀಕ

ವಿಶ್ವವನ್ನುದ್ದೇಶಿಸಿ ಭಾಷಣದ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಪಂಜಾಬ್‌ಗೆ

==

ನವದೆಹಲಿ: ಸೋಮವಾರವಷ್ಟೇ ವಿಶ್ವವನ್ನು ಉದ್ದೇಶಿಸಿ ಪಾಕ್‌ ಉಗ್ರರ ವಿರುದ್ಧ ಆಪರೇಷನ್‌ ಸಿಂದೂರದ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅದರ ಮರುದಿನ ಬೆಳ್ಳಂಬೆಳಗ್ಗೆಯೇ ಪಂಜಾಬ್‌ನ ಅದಂಪುರ ವಾಯುನೆಲೆಗೆ ತೆರಳಿ, ದೇಶರಕ್ಷಕರ ಜತೆ ಮಾತುಕತೆ ನಡೆಸಿದರು.

ಮಂಗಳವಾರ ಬೆಳಗ್ಗೆ ವಾಯುನೆಲೆ ತಲುಪಿದ ಮೋದಿ, ಅಲ್ಲಿ ಪಾಕ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವಾಯುಪಡೆ ಸಿಬ್ಬಂದಿ ಭೇಟಿಯಾದರು. ಈ ವೇಳೆ, ‘ಯೋಧರು ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯ ಪ್ರತೀಕವಾಗಿದ್ದಾರೆ. ದೇಶಸೇವೆಯಲ್ಲಿ ತೊಡಗಿರುವ ನಮ್ಮ ಸಶಸ್ತ್ರ ಪಡೆಗಳಿಗೆ ಭಾರತ ಕೃತಜ್ಞವಾಗಿದೆ’ ಎಂದು ಹೇಳಿದರು.

==

ಭಾರತದ ದಾಳಿಗೆ 11 ಯೋಧರು, 40 ನಾಗರಿಕರು ಬಲಿ: ಪಾಕ್

ಒಟ್ಟು 121 ಮಂದಿಗೆ ಗಾಯ: ಸಾವು, ನೋವಿನ ಬಗ್ಗೆ ಮೊದಲ ಮಾಹಿತಿ

==

ಇಸ್ಲಾಮಾಬಾದ್‌: ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ತನ್ನ ಸೇನೆಯ 11 ಯೋಧರು ಮತ್ತು 40 ನಾಗರಿಕರು ಬಲಿಯಾಗಿದ್ದಾರೆ. ಒಟ್ಟು 121 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಇದೇ ಮೊದಲ ಬಾರಿಗೆ ಹೇಳಿದೆ. ಈ ಮೂಲಕ ತನ್ನ ಯೋಧರ ಸಾವನ್ನು ಖಚಿತಪಡಿಸಿದೆ.ಎರಡು ದೇಶಗಳ ನಡುವೆ ಕದನ ವಿರಾಮ ಘೋಷಣೆಯ ಮೂರು ದಿನದ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಸೇನೆ , ‘ಭಾರತವು ಮೇ 6- 7 ರ ರಾತ್ರಿ ನಮ್ಮ ದೇಶದ ವಿರುದ್ಧ ಭಾರತದ ನಡೆಸಿದ ಅಪ್ರಚೋದಿತ ಮತ್ತು ಖಂಡನೀಯ ದಾಳಿಯಲ್ಲಿ 11 ಸೈನಿಕರು , 7 ಮಹಿಳೆಯರು ಮತ್ತು 15 ಮಕ್ಕಳು ಸೇರಿದಂತೆ 40 ನಾಗರಿಕರು ಬಲಿಯಾಗಿದ್ದಾರೆ. 121 ಮಂದಿ ಗಾಯಗೊಂಡಿದ್ದು ಅದರಲ್ಲಿ ಸೇನೆಯ 78 ಮಂದಿ ಸೇರಿದ್ದಾರೆ’ ಎಂದಿದೆ.

ಸೇನೆಯ 11 ಮಂದಿ ಬಲಿ: ಭಾರತದ ದಾಳಿಯಲ್ಲಿ ವಾಯು ಸೇನೆ ಸ್ಕ್ಯಾಡ್ರನ್ ನಾಯಕ ಉಸ್ಮಾನ್ ಯೂಸಫ್. ಮುಖ್ಯ ತಂತ್ರಜ್ಞ ಔರಂಗಜೇಬ್, ಹಿರಿಯ ತಂತ್ರಜ್ಞ ನಜೀಬ್, ಕಾರ್ಫೋರಲ್ ತಂತ್ರಜ್ಞ ಫಾರೂಖ್‌, ಹಿರಿಯ ತಂತ್ರಜ್ಞ ಮುಬಾಶಿರ್‌ ಹಾಗೂ ಸೇನೆಯ ನಾಯಕ್ ಅಬ್ದುಲ್ಲಾ ರೆಹಮಾನ್, ಲ್ಯಾನ್ಸ್‌ ನಾಯಕ್ ದಿಲಾವರ್‌ ಖಾನ್, ಲ್ಯಾನ್ಸ್‌ ನಾಯಕ್ ಇಕ್ರಮುಲ್ಲಾ, ನಾಯಕ್ ವಕಾರ್‌ ಖಾಲಿದ್‌, ಸಿಪಾಯಿ ಮುಹಮ್ಮದ್‌ ಅದೀಲ್ ಅಕ್ಬರ್‌, ಸಿಪಾಯಿ ನಿಸಾರ್‌ ಬಲಿಯಾಗಿದ್ದಾರೆ ಎಂದಿದೆ.

==

ಗೂಢಚಾರ: ಪಾಕ್ ರಾಯಭಾರ ಕಚೇರಿ ನೌಕರಗೆ ಗೇಟ್‌ಪಾಸ್‌

ನವದೆಹಲಿ: ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರನ್ನು ಗೂಢಚಾರ ಚಟುವಟಿಕೆ ನಡೆಸಿದ ಕಾರಣಕ್ಕೆ ದೇಶ ಬಿಡುವಂತೆ ಭಾರತ ಸೂಚಿಸಿದೆ. ತಮ್ಮ ಅಧಿಕೃತ ಸ್ಥಾನಮಾನಕ್ಕೆ ಅನುಗುಣವಾಗಿಲ್ಲದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಅವರನ್ನು ಮಂಗಳವಾರ ದೇಶದಿಂದ ಹೊರಹಾಕಿ ಆದೇಶ ಹೊರಡಿಸಿದೆ. ವಿದೇಶಾಂಗ ಸಚಿವಾಲಯವು ಅಧಿಕಾರಿಗೆ ಭಾರತವನ್ನು ತೊರೆಯಲು 24 ಗಂಟೆಗಳ ಕಾಲಾವಕಾಶ ನೀಡಿದೆ. ಅಧಿಕಾರಿಯ ಚಟುವಟಿಕೆಗಳ ಕುರಿತು ನವದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿಗೆ ಮಾಹಿತಿ ಕೊಡಲಾಗಿದೆ.

==

ಹೆಚ್ಚುವರಿ ಎಸ್-400 ಕ್ಷಿಪಣಿ ವ್ಯವಸ್ಥೆ ಪೂರೈಕೆಗೆ ರಷ್ಯಾಕ್ಕೆ ಭಾರತ ಮನವಿ ಗಡಿಯಲ್ಲಿ ಇನ್ನಷ್ಟು ಭದ್ರತೆ ಒದಗಿಸಲು ಕ್ರಮ

ನವದೆಹಲಿ: ‘ಆಪರೇಷನ್ ಸಿಂದೂರ್’ ಯಶಸ್ಸಿನ ಬೆನ್ನಲ್ಲೆ, ಹೆಚ್ಚುವರಿ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಒದಗಿಸುವಂತೆ ರಷ್ಯಾಕ್ಕೆ ಭಾರತ ಮನವಿ ಮಾಡಿದೆ. ಭಾರತದ ಮನವಿಯನ್ನು ರಷ್ಯಾ ಶೀಘ್ರವೇ ಪೂರೈಸುವ ಸಾಧ್ಯತೆಯಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಆಪರೇಷನ್ ಸಿಂದೂರ್ ವೇಳೆ ಎಸ್-400 ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿ ಯತ್ನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ‘ಸುದರ್ಶನ ಚಕ್ರ’ ಎಂದೇ ಕರೆಯಲಾಗುವ ಈ ರಕ್ಷಣಾ ವ್ಯವಸ್ಥೆಯನ್ನು ಅಮೆರಿಕವನ್ನು ಎದುರು ಹಾಕಿಕೊಂಡು ರಷ್ಯಾದಿಂದ ಭಾರತ ಖರೀದಿ ಮಾಡಿತ್ತು. ಇದೀಗ ಮತ್ತೆ ಖರೀದಿಗೆ ಬೇಡಿಕೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

==

ಆಪರೇಷನ್ ಸಿಂದೂರದ ಬಗ್ಗೆ 70 ದೇಶಗಳಿಗೆ ಮಾಹಿತಿ

- ಸಶಸ್ತ್ರ ಪಡೆಗಳ ತಾಂತ್ರಿಕ ಶ್ರೇಷ್ಠತೆಯ ಬಗ್ಗೆ ವಿವರಣೆ

ನವದೆಹಲಿ: ಪಾಕಿಸ್ತಾನದ ನಡೆಸಿದ ಪಹಲ್ಗಾಂ ನರಮೇಧದಕ್ಕೆ ಪ್ರತೀಕಾರವಾಗಿ ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಸೇನೆಯ ಉನ್ನತ ಅಧಿಕಾರಿಗಳು 70 ದೇಶಗಳ ರಾಯಭಾರ ಸಿಬ್ಬಂದಿಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.

ದೆಹಲಿ ಕಂಟೋನ್ಮೆಂಟ್‌ ಮಾಣೆಕ್‌ ಶಾ ಕೇಂದ್ರದಲ್ಲಿ ರಕ್ಷಣಾ ಗುಪ್ತಚರ ಸಂಸ್ಥೆಯ ಮಹಾನಿರ್ದೇಶಕ ಲೆಫ್ಟಿನೆಂಟ್‌ ಜನರಲ್ ಡಿ.ಎಸ್‌ ರಾಣಾ ಸುಮಾರು 30 ನಿಮಿಷಗಳ ಕಾಲ ನಡೆಸಿಕೊಟ್ಟರು. ಈ ವೇಳೆ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಸ್ವೀಡನ್, ನೇಪಾಳ, ಈಜಿಪ್ಟ್‌, ಫಿಲಿಫೈನ್ಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗುಂಪುಗಳು ಮತ್ತು ಹಲವು ಮುಸ್ಲಿಂ ದೇಶಗಳಿಗೆ ವಿವರಿಸಿದರು.ಈ ಬಗ್ಗೆ ರಕ್ಷಣಾ ಸಂಸ್ಥೆ ತನ್ನ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ 70 ರಾಷ್ಟ್ರಗಳಿಗೆ ಆಪರೇಷನ್ ಸಿಂದೂರ್‌ ಯಶಸ್ವಿಯ ಬಗ್ಗೆ ವಿವರಿಸಲಾಗಿದೆ. ಇದು ಹೊಸ ಯುಗದ ಯುದ್ಧದಲ್ಲಿ ಭಾರತದ ಪ್ರದರ್ಶಿತ ಶಕ್ತಿ ಮತ್ತು ಮಿಲಿಟರಿ ಶ್ರೇಷ್ಠತೆಯನ್ನು ತೋರಿಸುತ್ತದೆ. ಭ್ರಿಫಿಂಗ್ ವೇಳೆ ಭಾರತ ಸಶಸ್ತ್ರ ಪಡೆಗಳ ತಾಂತ್ರಿಕ ಶ್ರೇಷ್ಠತೆಯ ಬಗ್ಗೆ ವಿವರಿಸಲಾಗಿದೆ’ ಎಂದಿದೆ.