ಸಾರಾಂಶ
ಶೋಪಿಯಾನ್‌ನಲ್ಲಿ ಭರ್ಜರಿ ಎನ್‌ಕೌಂಟರ್ । ಮೋಸ್ಟ್ ವಾಂಟೆಡ್ ಉಗ್ರ ಹತ
=ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆಗಳು ಮಂಗಳವಾರ ನಡೆಸಿದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಮೂವರನ್ನು ಉಗ್ರರನ್ನು ಹತ್ಯೆಗೈಯಲಾಗಿದೆ. ಹತ್ಯೆಯಾದವರ ಪೈಕಿ ಲಷ್ಕರ್ ಎ ತೊಯ್ಬಾ ಕಮಾಂಡರ್ ಶಾಹಿದ್ ಕುಟ್ಟಾಯ್ ಕೂಡಾ ಸೇರಿದ್ದಾನೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಆರಂಭಿಸಿದ್ದವು. ಆ ವೇಳೆ ಉಗ್ರರು ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿಗೆ ಯತ್ನಿಸಿದರು. ಆಗ ಸೇನೆ ನಡೆಸಿದ ಪ್ರತಿದಾಳಿ ವೇಳೆ ಮೂವರು ಉಗ್ರರು ಹತರಾಗಿದ್ದಾರೆ.‘ಎನ್‌ಕೌಂಟರ್‌ಗೆ ಬಲಿಯಾದ ಮೂರೂ ಉಗ್ರರು ಎಲ್‌ಇಟಿಗೆ ಸೇರಿದವರು. ಅವರಲ್ಲಿ ಒಬ್ಬ ಎಲ್‌ಇಟಿ ಕಮಾಂಡರ್ ಶಾಹಿದ್ ಕುಟ್ಟಾಯ್, ಮತ್ತೊಬ್ಬ ಅದ್ನಾನ್ ಶಫಿ ದಾರ್, ಇನ್ನೊಬ್ಬ ಹ್ಯಾರಿಸ್ ನಾಸಿರ್. ಕುಟ್ಟಾಯ್ ‘ಎ’ ವರ್ಗದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ಸಂಘಟನೆಯಲ್ಲಿ ಬಹಳ ಪ್ರಭಾವಿಯೆನಿಸಿದ್ದ. 2024ರಲ್ಲಿ ಬಿಜೆಪಿ ಸರಪಂಚನ ಹತ್ಯೆ, ಡ್ಯಾನಿಷ್ ರೆಸಾರ್ಟ್ ಮೇಲೆ ದಾಳಿ ಮಾಡಿ ಇಬ್ಬರು ಜರ್ಮನ್ ಪ್ರಜೆಗಳ ಸಾವಿಗೆ ಕಾರಣನಾಗಿದ್ದ. ಶಫಿ ಕಳೆದ ವರ್ಷ ಶೋಪಿಯಾನ್‌ನಲ್ಲಿ ವಲಸೆ ಕಾರ್ಮಿಕನ ಹತ್ಯೆಗೈದಿದ್ದ. ನಾಸಿರ್ ಸಹ ಜರ್ಮನ್ ಪ್ರಜೆಗಳ ಹತ್ಯೆ ಅಪರಾಧಿ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಹಲ್ಗಾಂ ದಾಳಿ ಬಳಿಕ, ಏ.26ರಂದು ಭಾರತೀಯ ಸೇನೆ ಕುಟ್ಟಾಯ್‌ನ ಮನೆಯನ್ನು ಧ್ವಂಸಗೊಳಿಸಿತ್ತು.