ಈ ಬಾರಿ ಕರ್ನಾಟಕ, ಯುಪಿಯಿಂದ ರಾಹುಲ್‌ ಸ್ಪರ್ಧೆ?

| Published : Feb 27 2024, 01:32 AM IST / Updated: Feb 27 2024, 11:13 AM IST

ಈ ಬಾರಿ ಕರ್ನಾಟಕ, ಯುಪಿಯಿಂದ ರಾಹುಲ್‌ ಸ್ಪರ್ಧೆ?
Share this Article
  • FB
  • TW
  • Linkdin
  • Email

ಸಾರಾಂಶ

ಕೇರಳದ ವಯನಾಡ್‌ ಬಿಟ್ಟು ಬೇರೆ ಕಡೆ ಸ್ಪರ್ಧೆಗೆ ರಾಹುಲ್‌ ಗಾಂಧಿ ಒಲವು ತೋರಿದ್ದಾರೆ. ಅಲ್ಲದೆ ಈ ಬಾರಿಯೂ 2 ಕ್ಷೇತ್ರಗಳಿಂದ ಕಣಕ್ಕಿಳಿಯುವುದು ಖಚಿತವಾಗಿದೆ.

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್‌ ಗಾಂಧಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್‌ನಿಂದ ಸ್ಪರ್ಧಿಸುವುದಿಲ್ಲ. 

ಇದರ ಬದಲು 2 ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಪೈಕಿ ಒಂದು ಉತ್ತರಪ್ರದೇಶದಿಂದ ಹಾಗೂ ಮತ್ತೊಂದು ಕರ್ನಾಟಕ ಅಥವಾ ತೆಲಂಗಾಣ ಪೈಕಿ ಒಂದಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಬಾರಿ ಕೂಡಾ ರಾಹುಲ್‌ ಉತ್ತರಪ್ರದೇಶದ ಅಮೇಠಿ ಮತ್ತು ಕೇರಳದ ವಯನಾಡಿನಿಂದ ಕಣಕ್ಕೆ ಇಳಿದಿದ್ದರು. ಈ ಪೈಕಿ ವಯನಾಡಿನಲ್ಲಿ ಗೆದ್ದಿದ್ದರಾದರೂ, ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು. 

ಹೀಗಾಗಿ ಈ ಬಾರಿಯೂ ಎರಡು ಕ್ಷೇತ್ರಗಳಿಂದ ಅವರನ್ನು ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ ಎಂದು ಆಂಗ್ಲ ಟೀವಿ ಮಾಧ್ಯಮವೊಂದು ವರದಿ ಮಾಡಿದೆ.

ಕೇರಳದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷವಾದ ಇಂಡಿಯನ್‌ ಮುಸ್ಲಿಂ ಲೀಗ್‌ ಈ ಬಾರಿ ವಯನಾಡು ಸೇರಿದಂತೆ 3 ಕ್ಷೇತ್ರಗಳಿಗಾಗಿ ಪಟ್ಟುಹಿಡಿದಿದೆ. ಮತ್ತೊಂದೆಡೆ ಸಿಪಿಐ ಕೂಡ ಎ.ರಾಜಾ ಅವರ ಪತ್ನಿ ಆ್ಯನ್ನಿ ರಾಜಾ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ. 

ಹೀಗಾಗಿ ಮಿತ್ರಪಕ್ಷದ ಬೇಡಿಕೆ ತಿರಸ್ಕರಿಸಲು ಹಿಂಜರಿಯುತ್ತಿರುವ ಕಾಂಗ್ರೆಸ್‌ ವಯನಾಡು ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆ ಇದೆ.

ಅದರ ಬದಲಾಗಿ ಕಾಂಗ್ರೆಸ್‌ ಅಧಿಕಾರದಲ್ಲಿರುವ ಕರ್ನಾಟಕ ಅಥವಾ ತೆಲಂಗಾಣದ ಪೈಕಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಇನ್ನು ದೇಶದಲ್ಲೇ ಅತಿಹೆಚ್ಚು (80) ಕ್ಷೇತ್ರ ಹೊಂದಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಪ್ರಭಾವ ಉಳಿಸಿಕೊಳ್ಳುವ ಯತ್ನದ ಭಾಗವಾಗಿ ರಾಹುಲ್‌ ಅಮೇಠಿಯಿಂದ ಮತ್ತು ಪ್ರಿಯಾಂಕಾ ವಾದ್ರಾ ತಮ್ಮ ತಾಯಿ ಸ್ಪರ್ಧಿಸುತ್ತಿದ್ದ ರಾಯ್‌ಬರೇಲಿಯಿಂದ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.