ದೇಶದಲ್ಲೀಗ 5% ಜನರಷ್ಟೇ ಬಡವರು: ನೀತಿ ಆಯೋಗ

| Published : Feb 27 2024, 01:31 AM IST / Updated: Feb 27 2024, 08:15 AM IST

ಸಾರಾಂಶ

ದೇಶದಲ್ಲಿ ಬಡತನ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಜನರ ಗೃಹಬಳಕೆ ವೆಚ್ಚ ಆಧರಿಸಿ ಈ ಸಮೀಕ್ಷೆಯನ್ನು ತಯಾರಿಸಲಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಕಸಿತ ಭಾರತದ ಕನಸು ಕಾಣುತ್ತಿರುವಾಗಲೇ, ಭಾರತದಲ್ಲಿನ ಬಡತನ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿ ಶೇ.5ಕ್ಕಿಂತ ಕೆಳಗೆ ಇಳಿದಿದೆ ಎಂಬ ಶುಭ ಸುದ್ದಿಯೊಂದು ಹೊರಬಿದ್ದಿದೆ. 

ಗೃಹ ಬಳಕೆ ವೆಚ್ಚ ಸಮೀಕ್ಷೆ ವರದಿಗಳನ್ನು ಆಧರಿಸಿ ನೀತಿ ಆಯೋಗದ ಸಿಇಒ ಬಿ.ವಿ.ಆರ್‌. ಸುಬ್ರಹ್ಮಣ್ಯಂ ಈ ಮಾಹಿತಿ ನೀಡಿದ್ದಾರೆ.ರಾಷ್ಟ್ರೀಯ ಸಾಂಖ್ಯಿಕ ಇಲಾಖೆ 2022ರ ಆಗಸ್ಟ್‌ ಮತ್ತು 2023ರ ಜುಲೈ ನಡುವೆ ಗೃಹ ಬಳಕೆ ವೆಚ್ಚ ಸಮೀಕ್ಷೆ ನಡೆಸಿತ್ತು. 

ಗೃಹಬಳಕೆ ವೆಚ್ಚವು, ಬಡತನ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮಗಳನ್ನು ತೋರಿಸುವ ಕಾರಣ ಈ ಸಮೀಕ್ಷಾ ವರದಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. 

ಪ್ರತಿ 5 ವರ್ಷಗಳಿಗೊಮ್ಮೆ ಈ ಸಮೀಕ್ಷೆ ನಡೆಸಲಾಗುತ್ತದೆಯಾದರೂ 2017-18ರ ಅವಧಿಯ ಸಮೀಕ್ಷಾ ವರದಿ ಬಿಡುಗಡೆಗೊಂಡಿರಲಿಲ್ಲ. ಹೀಗಾಗಿ 2011-12ನೇ ಸಾಲಿಗೆ ಈ ಸಾಲಿನ ವರದಿಯನ್ನು ಹೋಲಿಕೆ ಮಾಡಲಾಗಿದೆ.

ವರದಿಯಲ್ಲಿ ಏನಿದೆ?
ವರದಿ ಅನ್ವಯ ನಗರ ಮತ್ತು ಗ್ರಾಮೀಣ ಪ್ರದೇಶ ಎರಡೂ ಕಡೆ ಗೃಹಬಳಕೆಯ ವೆಚ್ಚದಲ್ಲಿ ಎರಡೂವರೆ ಪಟ್ಟು ಹೆಚ್ಚಳ ಕಂಡುಬಂದಿದೆ. ನಗರ ಪ್ರದೇಶದಲ್ಲಿ ಸರಾಸರಿ ಮಾಸಿಕ ತಲಾಬಳಕೆ ವೆಚ್ಚ 2011-12ರಲ್ಲಿ 2630 ರು. ಇದ್ದರೆ, 2022-23ರಲ್ಲಿ ಅದು 6459 ರು.ಗೆ ತಲುಪಿದೆ. ಅಂದರೆ ಶೇ. ಶೇ.146ರಷ್ಟು ಹೆಚ್ಚಳವಾಗಿದೆ. 

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಈ ವೆಚ್ಚದ ಪ್ರಮಾಣ 1430 ರು.ನಿಂದ 3773 ರು.ಗೆ ತಲುಪಿದೆ. ಅಂದರೆ ಶೇ.164ರಷ್ಟು ಹೆಚ್ಚು ಎಂದು ವರದಿ ಹೇಳಿದೆ. ಇದರ ಆಧಾರದಲ್ಲಿ ಹೇಳುವುದಾದರೆ ದೇಶದ ಬಡತನ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ.5ಕ್ಕಿಂತಲೂ ಕೆಳಗೆ ಇಳಿದಿದೆ ಎಂದು ನೀತಿ ಆಯೋಗದ ಸಿಇಒ ಹೇಳಿದ್ದಾರೆ.

ಆಹಾರಕ್ಕೆ ಕಡಿಮೆ ಹಣ: ವರದಿಯಲ್ಲಿ ಕಂಡುಬಂದ ಇನ್ನೊಂದು ಪ್ರಮಖ ಅಂಶವೆಂದರೆ ಗ್ರಾಮೀಣ ಭಾಗದ ಜನರ ವೆಚ್ಚದಲ್ಲಿ ಬದಲಾವಣೆ ಕಂಡುಬಂದಿರುವುದು. 

ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದ ಜನರು ತಮ್ಮ ಒಟ್ಟು ವೆಚ್ಚದಲ್ಲಿ ಶೇ.50ಕ್ಕಿಂತ ಕಡಿಮೆ ಹಣವನ್ನು ಆಹಾರಕ್ಕಾಗಿ ಮಾಡಿದ್ದಾರೆ. ಇದು ಅವರ ಆದಾಯ ಹೆಚ್ಚಾಗಿ, ಅವರು ತಮ್ಮ ಹಣವನ್ನು ಇತರೆ ಉದ್ದೇಶಗಳಿಗೂ ಬಳಸಲು ಸಾಧ್ಯವಾಗಿದೆ ಎಂಬುದರ ಸೂಚಕ ಎನ್ನಲಾಗಿದೆ.

ಅಂತರ ಇಳಿಕೆ: ವರದಿಯ ಇನ್ನೊಂದು ಗಮನಾರ್ಹ ಅಂಶವೆಂದರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ವೆಚ್ಚದ ಅಂತರದಲ್ಲಿ ಇಳಿಕೆ ದಾಖಲಾಗಿರುವುದು. 2004-05ರಲ್ಲಿ ನಗರ- ಗ್ರಾಮೀಣ ಗೃಹಬಳಕೆ ವೆಚ್ಚದ ಅಂತರ ಶೇ.91ರಷ್ಟಿದ್ದರೆ 2022-23ರಲ್ಲಿ ಅದು ಶೇ.71ಕ್ಕೆ ಇಳಿದಿದೆ.

ವೈವಿಧ್ಯಮಯ ಆಹಾರ: ಇನ್ನು ಜನರು ಪಾನೀಯ, ಸಂಸ್ಕೃರಿತ ಆಹಾರ, ಹಾಲು ಮತ್ತು ಹಣ್ಣುಗಳ ಬಳಕೆ ಹೆಚ್ಚು ಮಾಡಿರುವುದು ಕಂಡುಬಂದಿದೆ. ಇದು ಜನರು ಹೆಚ್ಚು ವೈವಿಧ್ಯಮಯ ಮತ್ತು ಸಮತೋಲಿತ ಆಹಾರ ಸೇವನೆಯತ್ತ ಗಮನಹರಿಸಿರುವುದು ಸಂಕೇತ ಎಂದು ವರದಿ ಹೇಳಿದೆ.

ಆಹಾರೇತರ ಬಳಕೆ ಏರಿಕೆ: ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳಲ್ಲಿ ಜನರ ಆಹಾರ ವೆಚ್ಚ ಇಳಿಕೆಯಾಗಿದೆ. ಅದರ ಬದಲಾಗಿ ಜನತೆ ಪಾನೀಯ, ರೆಫ್ರಿಜರೇಟರ್‌, ಟೀವಿ, ಸಂಸ್ಕೃರಿತ ಆಹಾರ, ವೈದ್ಯಕೀಯ ವೆಚ್ಚ, ಸಂಚಾರಕ್ಕೆ ಹೆಚ್ಚಿನ ವೆಚ್ಚ ಮಾಡಿರುವುದು ಕಂಡುಬಂದಿದೆ.

ಬಡತನ ಮಾನದಂಡನಗರ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯ ನಿತ್ಯದ ವೆಚ್ಚ 47 ರು. ಮತ್ತು ಗ್ರಾಮೀಣ ಭಾಗದಲ್ಲಿ ವೆಚ್ಚ 32 ರು.ಗಿಂತ ಕಡಿಮೆ ಇದ್ದರೆ ಅದನ್ನು ಬಡತನ ಎನ್ನಲಾಗುತ್ತದೆ. ಇದಕ್ಕಿಂತ ಹೆಚ್ಚಿದ್ದರೆ ಅವರು ಬಡತನ ರೇಖೆಯಿಂದ ಮೇಲಿರುವವರು ಎಂದು ಹೇಳಲಾಗುತ್ತದೆ.