ಸಾರಾಂಶ
ಜೈಪುರ/ಕೋಟಾ: ರಾಜಸ್ಥಾನದಲ್ಲಿ ಮಳೆ ಹಾಗೂ ಪ್ರವಾಹಕ್ಕೆ ಗುರುವಾರ 6 ಮಂದಿ ಸಾವನ್ನಪ್ಪಿದ್ದಾರೆ. ಕೋಟದ ಗರಗಾಂವ್ ಸೇತುವೆ ಮೇಲೆ ಪ್ರವಾಹದ ನೀರು ಉಕ್ಕೇರಿದಾಗ ಅಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಜೈಪುರದಲ್ಲಿ ಮನೆಯೊಂದರ ನೆಲಮಹಡಿಗೆ ನೀರು ನುಗ್ಗಿ ಮೂವರು ಬಲಿಯಾಗಿದ್ದಾರೆ.
ಬಿಹಾರದಲ್ಲಿ ಸಿಡಿಲಿಗೆ 12 ಮಂದಿ ಬಲಿ
ಪಟನಾ: ಬಿಹಾರದಲ್ಲಿ ಕೂಡ ಮಳೆ ಹಾಗೂ ಸಿಡಿಲು ಅಬ್ಬರ ಗುರುವಾರ ಸಂಭವಿಸಿದ್ದು, ರಾಜ್ಯದ ವಿವಿಧೆಡೆ ಒಂದೇ ದಿನ 12 ಮಂದಿ ಸಾವನ್ನಪ್ಪಿದ್ದಾರೆ. ಗಯಾದಲ್ಲಿ 5, ಜೆಹಾನಾಬಾದ್‌ನಲ್ಲಿ 3, ನಳಂದ, ರೋಹ್ತಾಸ್ ತಲಾ ಇಒಬ್ಬರು ಸಾವನ್ನಪ್ಪಿದ್ದಾರೆ.
ದಿಲ್ಲಿ: ಭಾರಿ ಮಳೆಗೆ 9 ಬಲಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ರಾತ್ರಿ ಇಡೀ ಸುರಿದ ಭಾರೀ ಮಳೆಗೆ 9 ಮಂದಿ ಅಸುನೀಗಿದ್ದಾರೆ. ಹಲವು ಭಾಗಗಳು ಜಲಾವೃತವಾಗಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.ವಿಶೇಷವೆಂದರೆ ಸಂಸತ್ ಭವನದ ಆವರಣದಲ್ಲೂ ನೀರು ನುಗ್ಗಿದ್ದು, ಹೊಸ ಸಂಸತ್ ಭವನದ ಒಂದು ಭಾಗದಲ್ಲಿ ಸೋರಿಕೆ ಕಂಡುಬಂದಿದೆ.ಆ.5ರ ವರೆಗೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಿಸಿದೆ.
ಇದರ ಬೆನ್ನಲ್ಲೇ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಭಾರಿ ಮಳೆಯಿಂದಾಗಿ ಕೆಲವು ವಿಮಾನ ಸಂಚಾರ ರದ್ದುಗೊಳಿಸಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಜೈಪುರ ಕಡೆ 8 ವಿಮಾನ ಹಾಗೂ ಲಖನೌ ಕಡೆ 2 ವಿಮಾನವನ್ನು ಕನಿಷ್ಠ 10 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.ರಸ್ತೆಗಳು ಜಲಾವೃತವಾಗಿದ್ದು, ಸವಾರರು ಪರದಾಡುವಂತಾಗಿದೆ. ಭಾರಿ ಮಳೆಯಿಂದಾಗಿ ಮೆಹ್ರೌಲಿ-ಛತ್ತರ್‌ಪುರ ರಸ್ತೆಯಲ್ಲಿ ಒಂದೂವರೆ ಗಂಟೆ ಕಾಲ ಸವಾರರು ಟ್ರಾಫಿಕ್‌ನಲ್ಲೇ ಸಿಲುಕಿಕೊಂಡಿದ್ದರು. ಇನ್ನು ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್ ಕಡೆ ಹೋಗುವ ರಸ್ತೆಗಳಲ್ಲಿ ನೀರು ನಿಂತಿದ್ದು, ಹಲವಾರು ರೆಸ್ಟೋರೆಂಟ್‌ಗಳು ಹಾಗೂ ಶೋರೂಂಗಳಿಗೆ ನೀರು ನುಗ್ಗಿವೆ.