ಕುಂಭದ್ರೋಣ ಮಳೆಯಿಂದಾಗಿ ಉತ್ತರಾಖಂಡದ ಹಲವು ಭಾಗಗಳಲ್ಲಿ ಪ್ರವಾಹ : ಜಲಪ್ರಳಯಕ್ಕೆ12 ಸಾವು

| Published : Aug 02 2024, 12:50 AM IST / Updated: Aug 02 2024, 07:33 AM IST

ಸಾರಾಂಶ

ಬುಧವಾರ ತಡರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಉತ್ತರಾಖಂಡದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, 12 ಮಂದಿ ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ.

 ಡೆಹ್ರಾಡೂನ್ : ಬುಧವಾರ ತಡರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಉತ್ತರಾಖಂಡದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, 12 ಮಂದಿ ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ.

ಹಲವು ನದಿಗಳು ಉಕ್ಕಿ ಹರಿಯತೊಡಗಿದ್ದು, ಹರಿದ್ವಾರ ಜಿಲ್ಲೆಯ ತೆಹ್ರಿಯಲ್ಲಿ 3, ಡೆಹ್ರಾಡೂನ್‌ನಲ್ಲಿ 2, ಚಮೋಲಿಯಲ್ಲಿ 1 ಹಾಗೂ ಉಳಿದ ಕಡೆ 6 ಸಾವುಗಳು ವರದಿಯಾಗಿವೆ. ಹೀಗಾಗಿ ಕೇದಾರನಾಥ ಯಾತ್ರ ಸದ್ಯಕ್ಕೆ ಸ್ಥಗಿತವಾಗಿದ್ದು, ಚಾರಧಾಮ ಯಾತ್ರೆಯ ಹೊಸ ನೋಂದಣಿಗೆ ತಡೆ ಒಡ್ಡಲಾಗಿದೆ.

ಹರಿದ್ವಾರ ಜಿಲ್ಲೆಯ ಬಹಾದರಾಬಾದ್‌ನಲ್ಲಿ ಬುಧವಾರ ಮಳೆಯಿಂದ ಒಂದು ಮನೆ ಕುಸಿದಿದ್ದು, ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ರಸ್ತೆಗಳು ಮುಳುಗಡೆಯಾಗಿದ್ದು, ಪೊಲೀಸ್ ಠಾಣೆಗೂ ನೀರು ನುಗ್ಗಿದೆ. ಇನ್ನು ನೈನಿತಾಲ್‌ ಜಿಲ್ಲೆಯ ಹಲ್ದ್ವಾನಿ, ಚಮೋಲಿ, ಡೆಹ್ರಾಡೂನ್‌ನಲ್ಲೂ ಭಾರಿ ಮಳೆಯಿಂದ ಜನಜೀವನ ಏರುಪೇರಾಗಿದೆ.

ಕೇದಾರನಾಥದ ರಸ್ತೆಗಳು ಸರಿಯಾಗುವ ತನಕ ಯಾತ್ರೆಯನ್ನು ಮುಂದೂಡುವಂತೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಭಕ್ತರನ್ನು ತುರ್ತು ಹೆಲಿಪ್ಯಾಡ್‌ಗೆ ಕರೆತರಲಾಗಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಜೊತೆಗೆ ರುದ್ರಪ್ರಯಾಗ ಮತ್ತು ತೆಹ್ರಿ ಗಢವಾಲ್‌ ಪ್ರದೇಶಗಳ ವೈಮಾನಿಕ ಹಾಗೂ ರಸ್ತೆ ಸಮೀಕ್ಷೆ ನಡೆಸುವುದಾಗಿ ಅವರು ಹೇಳಿದ್ದಾರೆ.

ಮಳೆಯ ಕಾರಣ ಹಲವು ಜಿಲ್ಲೆಗಳಲ್ಲಿ ಅಂಗನವಾಡಿ ಮತ್ತು 12ನೇ ತರಗತಿವರೆಗಿನ ಶಾಲೆಗಳನ್ನು ಮುಚ್ಚಲಾಗಿದೆ.