ಸಾರಾಂಶ
ಸಂಭಲ್ (ಉ.ಪ್ರ.): ಮೊಘಲರ ಕಾಲದ ಸಂಭಲ್‌ನ ಶಾಹಿ ಮಸೀದಿಯ ನಿಯಂತ್ರಣ ಮತ್ತು ನಿರ್ವಹಣೆ ಹೊಣೆಯನ್ನು ತನಗೆ ನೀಡಬೇಕು ಎಂದು ಮಸೀದಿಯ ಸಮೀಕ್ಷೆಗೆ ಆದೇಶಿಸಿದ್ದ ನ್ಯಾಯಾಲಯಕ್ಕೆ ಭಾರತೀಯ ಪುರಾತತ್ವ (ಎಎಸ್‌ಐ) ಇಲಾಖೆ ಕೋರಿದೆ.
ಮಸೀದಿಯ ಸಮೀಕ್ಷೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸುತ್ತಿರುವ ಕೋರ್ಟ್‌ಗೆ ತನ್ನ ಪ್ರತಿಕ್ರಿಯೆ ಸಲ್ಲಿಸಿರುವ ಎಸ್‌ಎಐ, ಇದು ಸಂರಕ್ಷಿತ ಪಾರಂಪರಿಕ ಸ್ಮಾರಕವಾಗಿದೆ. ಹೀಗಾಗಿ ಇದರ ನಿಯಂತ್ರಣ ಹಾಗೂ ನಿರ್ಣಯದ ಹೊಣೆಯನ್ನು ತನಗೆ ವಹಿಸಬೇಕು ಎಂದು ಮನವಿ ಮಾಡಿದೆ.ಈ ನಡುವೆ, ಸಮೀಕ್ಷೆಗೆ ಮಸೀದಿಯ ಆಡಳಿತ ಸಮಿತಿ ಮತ್ತು ಸ್ಥಳೀಯರಿಂದ ಪ್ರತಿರೋಧ ಬರುತ್ತಿದೆ ಎಂದು ಎಎಸ್‌ಐ ಪರ ವಕೀಲ ವಿಷ್ಣುಶರ್ಮಾ ಕೋರ್ಟಿಗೆ ತಿಳಿಸಿದ್ದಾರೆ.
‘1920ರಲ್ಲಿ ಎಎಸ್‌ಐ ರಕ್ಷಿತ ಸ್ಮಾರಕವೆಂದು ಮಸೀದಿಯನ್ನು ಘೋಷಿಸಲಾಗಿತ್ತು.ಇದು ತನ್ನ ವ್ಯಾಪ್ತಿಯಲ್ಲಿದೆ. ಎಎಸ್‌ಐ ನಿಯಮಗಳಿಗೆ ಒಳಪಟ್ಟು ಮಸೀದಿಗೆ ಸಾರ್ವಜನಿಕ ಪ್ರವೇಶಕ್ಕೆ ಅನುಮತಿಸಬೇಕು. ಮಸೀದಿ ತನ್ನ ನಿಯಂತ್ರಣದಲ್ಲಿರಬೇಕು. ರಚನಾತ್ಮಕ ಮಾರ್ಪಾಡು ಅಧಿಕಾರವೂ ತನ್ನ ಬಳಿ ಇರಬೇಕು. ಆದರೆ ಮಸೀದಿ ಸಮಿತಿ ತನ್ನ ಅನುಮತಿ ಇಲ್ಲದೇ ಕಟ್ಟಡದಲ್ಲಿ ಬದಲಾವಣೆ ಮಾಡಿದೆ. ಇದನ್ನು ನಿರ್ಬಂಧಿಸಬೇಕು ಎಂದು ಪುರಾತತ್ವ ಇಲಾಖೆ ವಾದಿಸಿದೆ.
ನ್ಯಾಯಾಂಗ ಸಮಿತಿ ಭೇಟಿ; ಸಂಭಲ್‌ನ ಶಾಹಿ ಜಾಮಾ ಮಸೀದಿ ಈ ಹಿಂದೆ ಶಿವ ದೇಗುಲವಾಗಿತ್ತೇ ಎಂಬುದರ ಬಗ್ಗೆ ಸಮೀಕ್ಷೆ ನಡೆಸುವ ವೇಳೆ ಉಂಟಾದ ಹಿಂಸಾಚಾರದ ಬಗ್ಗೆ ಪರಿಶೀಲನೆ ನಡೆಸಲು ಭಾನುವಾರ ನ್ಯಾಯಾಂಗ ಸಮಿತಿ ಭೇಟಿ ನೀಡಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮೂರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.
ಭಾಗವತ್ ಸಹಬಾಳ್ವೆ ಹೇಳಿಕೆಗೆ ಮೋದಿ ನಿರ್ಲಕ್ಷ್ಯ: ಖರ್ಗೆ ಕಿಡಿ
ನವದೆಹಲಿ: ಬಿಜೆಪಿಯ ಉನ್ನತ ನಾಯಕತ್ವವು ದೇಶದ ಪ್ರತಿಯೊಂದು ಮಸೀದಿಯಲ್ಲಿ ಸಮೀಕ್ಷೆ ನಡೆಸುವ ಮೂಲಕ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಆರೋಪಿಸಿದರು.
ಅಲ್ಲದೆ. ‘ರಾಮ ಮಂದಿರವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ ಮತ್ತು ಪ್ರತಿ ಮಸೀದಿಯ ಕೆಳಗೆ ನಾವು ಶಿವಾಲಯವನ್ನು ಕಾಣಬಾರದು’ ಎಂದು ಹೇಳಿದ್ದರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು. ಅವರ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಲಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ದೆಹಲಿಯ ರಾಮಲೀಲಾ ಮೈದಾನದಲ್ಲಿ ದಲಿತ. ಒಬಿಸಿ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ‘ಮಸೀದಿ ಸಮೀಕ್ಷೆಗಳಿಗೆ ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನರ ಒಗ್ಗಟ್ಟು ಮತ್ತು ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ನಾಯಕರು ಮುಸ್ಲಿಮರು ನಿರ್ಮಿಸಿದ ಕೆಂಪು ಕೋಟೆ, ತಾಜ್ ಮಹಲ್, ಕುತುಬ್ ಮಿನಾರ್ ಅಥವಾ ಚಾರ್ ಮಿನಾರ್‌ನಂತಹ ಹೆಗ್ಗುರುತುಗಳನ್ನು ಕೆಡವುತ್ತಾರೆಯೇ’ ಎಂದು ಪ್ರಶ್ನಿಸಿದರು.