ಕಾಂಗ್ರೆಸ್‌ ರಾಜ್ಯಾಧ್ಯಕ್ಷರೇಸಿಗೆ ಜಾರಕಿಹೊಳಿ!

| Published : Jan 15 2025, 01:46 AM IST

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಇದೇ ಮೊದಲ ಬಾರಿಗೆ ಹೈಕಮಾಂಡ್‌ ಸಮ್ಮುಖ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ

ಕನ್ನಡಪ್ರಭ ವಾರ್ತೆ, ಬೆಂಗಳೂರು

ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಇದೇ ಮೊದಲ ಬಾರಿಗೆ ಹೈಕಮಾಂಡ್‌ ಸಮ್ಮುಖ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬದಲಾವಣೆ ಸಂದರ್ಭದಲ್ಲಿ ತಮ್ಮನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಗಣಿಸಬೇಕು ಎಂದು ಪ್ರಬಲ ಹಕ್ಕೊತ್ತಾಯವನ್ನು ಸತೀಶ್‌ ಜಾರಕಿಹೊಳಿ ಅವರು ಹೈಕಮಾಂಡ್‌ ಮುಂದೆ ಮಂಡಿಸಿದ್ದಾರೆ. ಅಲ್ಲದೆ, ಪಕ್ಷದ 50ಕ್ಕೂ ಹೆಚ್ಚು ಶಾಸಕರು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ತಮ್ಮ ಮೇಲೆ ಒತ್ತಡ ನಿರ್ಮಾಣ ಮಾಡುತ್ತಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬದಲಾವಣೆ ವೇಳೆ ತಮಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವಂತೆ ಹೈಕಮಾಂಡ್‌ ಅನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ತಡರಾತ್ರಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ ಸತೀಶ್‌ ಜಾರಕಿಹೊಳಿ ಅವರು ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಹೇಳಿದರು ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೊಸಬರನ್ನು ತರುವ ನಿರ್ಧಾರವನ್ನು ಹೈಕಮಾಂಡ್‌ ಮಾಡುವ ಸಂದರ್ಭದಲ್ಲಿ ಈ ಹುದ್ದೆಗೆ ತಮ್ಮನ್ನು ಏಕೆ ಪರಿಗಣಿಸಬೇಕು ಎಂದು ವಿಸ್ತೃತವಾಗಿ ಸುರ್ಜೇವಾಲಾ ಅವರಿಗೆ ಸತೀಶ್‌ ವಿವರಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲಿ ನಡೆದಿರುವ ಬಣ ರಾಜಕಾರಣ ತಿಳಿಗೊಳಿಸುವ ಉದ್ದೇಶದಿಂದಲೇ ಬೆಂಗಳೂರಿಗೆ ಆಗಮಿಸಿ ಪದಾಧಿಕಾರಿಗಳ ಸಭೆ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಿದ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ನಾಯಕರು ಹಾಗೂ ಶಾಸಕರಿಗೆ ತಾಕೀತು ಮಾಡಿದ್ದರು.

ಇದಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದರು. ಈ ವೇಳೆಗೆ ತಡರಾತ್ರಿಯಾಗಿತ್ತು. ಇದಾದ ನಂತರ ಸತೀಶ್‌ ಜಾರಕಿಹೊಳಿ ಅವರು ಪ್ರತ್ಯೇಕವಾಗಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ವೇಳೆ ಕೆಪಿಸಿಸಿ ಹುದ್ದೆಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಬಜೆಟ್‌ವರೆಗೂ ಯಾವ ಬೆಳವಣಿಗೆಯಿಲ್ಲ:

ರಾಜ್ಯ ಕಾಂಗ್ರೆಸ್‌ನ ವಿವಿಧ ಬಣಗಳು ಮುಖ್ಯಮಂತ್ರಿ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ಮೇಲಾಟ ನಡೆಸುತ್ತಿದ್ದರೂ ದೆಹಲಿ ಚುನಾವಣೆಯ ಬ್ಯುಸಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ಬಜೆಟ್‌ ಮುಗಿಯುವವರೆಗೂ ಇಂತಹ ಯಾವುದೇ ಬೆಳವಣಿಗೆ ಬಗ್ಗೆ ಚಿಂತಿಸುವ ಮನಸ್ಥಿತಿ ಹೊಂದಿಲ್ಲ ಎನ್ನಲಾಗಿದೆ.

ಇದು ರಾಜ್ಯ ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೈಕಮಾಂಡ್‌ ಚಿಂತನೆ ನಡೆಸಿದರೆ ಆ ಸಂದರ್ಭದಲ್ಲಿ ತಮ್ಮನ್ನು ಸದರಿ ಹುದ್ದೆಗೆ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಇದೀಗ ಸತೀಶ್‌ ಜಾರಕಿಹೊಳಿ ಮಂಡಿಸಿದ್ದಾರೆ.

ರಾಜ್ಯದಲ್ಲಿ ನಾಯಕ ಸಮುದಾಯದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ತಾವು ವಹಿಸಿದ ಪಾತ್ರ, ಪಕ್ಷ ಸಂಘಟನೆಯಲ್ಲಿ ತಮ್ಮ ಕೊಡುಗೆ ಹಾಗೂ ತಮಗಿರುವ ಶಾಸಕರ ಬೆಂಬಲದ ವಿವರವನ್ನು ಇದೇ ವೇಳೆ ಸುರ್ಜೇವಾಲಾ ಅವರಿಗೆ ನೀಡಿರುವ ಸತೀಶ್‌ ಜಾರಕಿಹೊಳಿ ಅವರು ಪಕ್ಷದ ಅಧ್ಯಕ್ಷ ಹುದ್ದೆಯನ್ನು ನೀಡಿದರೆ ಪಕ್ಷ ಸಂಘಟನೆಯನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾಸ್ತವವಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಮಾಡುವ ಸಂದರ್ಭ ಎದುರಾದರೆ ಆಗ ಲಿಂಗಾಯತ ಸಮುದಾಯಕ್ಕೆ ಹುದ್ದೆ ನೀಡಬೇಕು ಎಂಬ ಚಿಂತನೆ ಪಕ್ಷದಲ್ಲಿತ್ತು. ಹೀಗಾಗಿ ಲಿಂಗಾಯತ ಸಮುದಾಯದ ಈಶ್ವರ್‌ ಖಂಡ್ರೆ ಅವರ ಹೆಸರು ಪ್ರಧಾನವಾಗಿ ಕೇಳಿ ಬರುತ್ತಿತ್ತು. ಇದೀಗ ಹಠಾತ್ ಆಗಿ ಸತೀಶ್ ಜಾರಕಿಹೊಳಿ ಅವರು ನೇರವಾಗಿ ಹುದ್ದೆ ಆಕಾಂಕ್ಷೆಯನ್ನು ಹೈಕಮಾಂಡ್‌ ಮುಂದೆ ನೇರವಾಗಿ ವ್ಯಕ್ತಪಡಿಸಿರುವುದು ಕುತೂಹಲ ಮೂಡಿಸಿದೆ.