ಬಿಲ್‌ ಕೊಡದಿದ್ದರೆ ಆತ್ಮಹತ್ಯೆಕಿಯೋನಿಕ್ಸ್‌ ವೆಂಡರ್ಸ್‌ ಎಚ್ಚರಿಕೆ

| Published : Jan 15 2025, 01:45 AM IST

ಸಾರಾಂಶ

ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ. ಅದಕ್ಕೆ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಗೂ ಅಧಿಕಾರಿಗಳೇ ಹೊಣೆ ಎಂದು ಕರ್ನಾಟಕ ರಾಜ್ಯ ವಿದ್ಯುನ್ಮಾನ ನಿಗಮ ನಿಯಮಿತದ (ಕಿಯೋನಿಕ್ಸ್) ವೆಂಡರ್‌ಗಳು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ. ಅದಕ್ಕೆ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಗೂ ಅಧಿಕಾರಿಗಳೇ ಹೊಣೆ ಎಂದು ಕರ್ನಾಟಕ ರಾಜ್ಯ ವಿದ್ಯುನ್ಮಾನ ನಿಗಮ ನಿಯಮಿತದ (ಕಿಯೋನಿಕ್ಸ್) ವೆಂಡರ್‌ಗಳು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ. ಬಾಕಿ ಬಿಲ್‌ ಬಿಡುಗಡೆಗೆ ಆಗ್ರಹಿಸಿ 8 ಸಚಿವರಿಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ ಬರೆದ ಬೆನ್ನಲ್ಲೇ ಈ ಬೆಳವಣಿಗೆಯೂ ನಡೆದಿದೆ

ಆದರೆ, ಕಿಯೋನಿಕ್ಸ್‌ನಲ್ಲಿ ಕೋಟ್ಯಂತರ ರು. ಅಕ್ರಮ ನಡೆದಿರುವುದರಿಂದ ವೆಂಡರ್‌ಗಳ ಬಿಲ್‌ಗಳಿಗೆ ತಡೆ ಹಿಡಿಯಲಾಗಿದೆ. ಭ್ರಷ್ಟಾಚಾರದ ಬಗ್ಗೆ ಆರೋಪ ಬಂದಾಗ ತನಿಖೆ ಮಾಡಬಾರದು ಎಂದರೆ ಹೇಗೆ? ಎಂದು ಸಚಿವರು, ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ.

450ರಿಂದ 500 ಉದ್ಯಮದಾರರು, ಸ್ಟಾರ್ಟಪ್‌ಗಳು ಕಿಯೋನಿಕ್ಸ್‌ನಲ್ಲಿ ವೆಂಡರ್‌ ಆಗಿ ನೋಂದಾಯಿಸಿಕೊಂಡಿವೆ. ಈ ಸಣ್ಣ ಸಂಸ್ಥೆಗಳು ಸರ್ಕಾರಕ್ಕೆ ವಿದ್ಯುನ್ಮಾನ ಸೇವೆ ಮತ್ತು ಮಾನವ ಸಂಪನ್ಮೂಲ ಸೇವೆ ನೀಡುತ್ತಿವೆ. 2023ರಲ್ಲಿ ಸರ್ಕಾರ ಬದಲಾದ ನಂತರ ವೆಂಡರ್‌ಗಳಿಗೆ ಬಿಲ್ ತಡೆ ಹಿಡಿದು ಕಿರುಕುಳ ನೀಡಲಾಗುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಸಚಿವರು, ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಕಿಯೋನಿಕ್ಸ್ ಹಿಂದಿನ ಸಿಇಒ ಸಂಗಪ್ಪ ಅವರು ಬಾಕಿ ಬಿಲ್‌ ಬಿಡುಗಡೆಗೆ ಶೇ.12ರಷ್ಟು ಕಮಿಷನ್ ಕೇಳಿದ್ದ ಕಾರಣ ಪ್ರತಿಭಟನೆ ನಡೆಸಲಾಗಿತ್ತು. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ನಮ್ಮ ಮೇಲೆಯೇ ದ್ವೇಷ ಸಾಧಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಳೇ ವೆಂಡರ್‌ಗಳನ್ನು ಅನರ್ಹಗೊಳಿಸಲು ಹೊಸ ನಿಯಮಗಳನ್ನು ತರಲಾಗಿದೆ. ಕೇವಲ ದೊಡ್ಡ ಕಂಪನಿಗಳನ್ನು ಮಾತ್ರ ವೆಂಡರ್‌ಗಳಾಗಿ ಪರಿಗಣಿಸಲಾಗಿದೆ. ಇದರಿಂದ ಸುಮಾರು 6 ಸಾವಿರ ಜನರು ಕೆಲಸ ಕಳೆದುಕೊಳ್ಳುವಂತಾಗಿದೆ. ಬಾಕಿ ಮೊತ್ತ ಇಲ್ಲದೇ, ಕೆಲಸವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ವೆಂಡರ್‌ಗಳು ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಚರ್ಚಿಸಿದ್ದಾರೆ ಎಂದು ಪತ್ರದಲ್ಲಿ ವೆಂಡರ್ಸ್‌ಗಳು ಆತಂಕ ತೋಡಿಕೊಂಡಿದ್ದಾರೆ.

ಇಷ್ಟು ದಿನ ಹೇಗೋ ತಡೆದುಕೊಂಡಿದ್ದೇವೆ. ಆದರೆ, ಇನ್ನು ಮುಂದೆ ಬದುಕುವ ಶಕ್ತಿ ಉಳಿದಿಲ್ಲ. ನಮಗೆ ಏನಾದರೂ ತೊಂದರೆಯಾದರೆ ಸಚಿವರು, ಅಧ್ಯಕ್ಷರು, ಸಿಇಒ ಪವನ್, ನಿರ್ದೇಶಕ ನಿಶ್ಚಿತ್ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.