ಸಾರಾಂಶ
ಬೆಂಗಳೂರು : ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿದ್ದ ಆದೇಶವನ್ನು ಕಾಂಗ್ರೆಸ್ ಹೈಕಮಾಂಡ್ ತಡೆ ಹಿಡಿದಿದೆ.
ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡು ವಿಧಾನ ಪರಿಷತ್ ಸದಸ್ಯರಾಗಿದ್ದ ಡಿ.ಟಿ.ಶ್ರೀನಿವಾಸ್ ಅವರನ್ನು ಪಕ್ಷದ ಪ್ರಮುಖ ಮುಂಚೂಣಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದು ಹಲವು ವರ್ಷಗಳಿಂದ ಪಕ್ಷ ಸಂಘಟನೆಗೆ ದುಡಿದ ಪಕ್ಷದ ವಿವಿಧ ಹಾಲಿ, ಮಾಜಿ ಶಾಸಕರು, ಮುಖಂಡರ ಕಣ್ಣು ಕೆಂಪಾಗಿಸಿತ್ತು. ಈ ಸಂಬಂಧ ಕೆಲ ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ದೂರನ್ನೂ ನೀಡಿದ್ದರು. ಅಲ್ಲದೆ, ಶ್ರೀನಿವಾಸ್ ಅವರನ್ನು ನೇಮಕ ಮಾಡಲು ಎಐಸಿಸಿ ಅಧ್ಯಕ್ಷರ ಅನುಮೋದನೆ ಕೂಡ ಪಡೆದಿರಲಿಲ್ಲ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಐಸಿಸಿ ಒಬಿಸಿ ಘಟಕದ ಅಧ್ಯಕ್ಷ ಅಜಯ್ ಸಿಂಗ್ ಯಾದವ್ ಅವರು ಡಿ.ಟಿ.ಶ್ರೀನಿವಾಸ್ ಅವರ ನೇಮಕಾತಿ ಆದೇಶವನ್ನು ತಡೆಹಿಡಿದಿದ್ದಾರೆ.
ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ವಿಧಾನ ಪರಿಷತ್‌ನ ಕೆಲ ಹಿರಿಯ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಎದುರಲ್ಲೇ ಈ ನೇಮಕಾತಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪಕ್ಷದ ಇತರೆ ಒಬಿಸಿ ಶಾಸಕರು ಕೂಡ ದನಿಗೂಡಿಸಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಶ್ರೀನಿವಾಸ್ ಅವರ ನೇಮಕ ತಡೆ ಹಿಡಿಯಲಾಗಿದೆ.