ಉತ್ತರ ಕರ್ನಾಟಕ ಭಾಗಕ್ಕೆ 1945 ಕೋಟಿ ರು. ಮೊತ್ತದ ವಿವಿಧ ಹೊಸ ಯೋಜನೆ ಹಾಗೂ 1503 ಕೋಟಿ ರು. ವೆಚ್ಚದ ಕೆರೂರು ಏತ ನೀರಾವರಿ ಯೋಜನೆಯ ಪರಿಷ್ಕೃತ ಅಂದಾಜಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

- ₹1945 ಕೋಟಿ ವೆಚ್ಚ ಯೋಜನೆ- ಕೆರೂರು ಏತ ನೀರಾವರಿ ಸ್ಕೀಂಗೆ₹1503 ಕೋಟಿ ಪರಿಷ್ಕೃತ ಅಂದಾಜುಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

ಉತ್ತರ ಕರ್ನಾಟಕ ಭಾಗಕ್ಕೆ 1945 ಕೋಟಿ ರು. ಮೊತ್ತದ ವಿವಿಧ ಹೊಸ ಯೋಜನೆ ಹಾಗೂ 1503 ಕೋಟಿ ರು. ವೆಚ್ಚದ ಕೆರೂರು ಏತ ನೀರಾವರಿ ಯೋಜನೆಯ ಪರಿಷ್ಕೃತ ಅಂದಾಜಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ತನ್ಮೂಲಕ ಉತ್ತರಾಧಿವೇಶನದ ಸಮಯದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಚರ್ಚೆ ಕುರಿತು ಉಭಯ ಸದನಗಳಲ್ಲಿ ಶುಕ್ರವಾರ ಉತ್ತರ ನೀಡಲಿದ್ದಾರೆ. ಈ ವೇಳೆ ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ನೀಡಲು ಪರಿಷ್ಕೃತ ಯೋಜನೆ ಸೇರಿ ಒಟ್ಟು 3,500 ಕೋಟಿ ರು.ಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ಪಡೆಯಲಾಗಿದೆ.

ಈ ಪೈಕಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮತ್ತು ಇತರೆ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಕಲ್ಪಿಸುವ 990 ಕೋಟಿ ರು. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 275.33 ಕೋಟಿ ರು. ವೆಚ್ಚದಲ್ಲಿ ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿ-48 ರಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ 2.03 ಕಿ.ಮೀ. ಉದ್ದದ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.

210 ಕೋಟಿ ರು. ವೆಚ್ಚದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕುಗಳಲ್ಲಿ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ರಾಯಬಾಗ ಉನ್ನತ ಮಟ್ಟದ ವಿತರಣಾ ಕಾಲುವೆ ಮತ್ತು ರಾಯಬಾಗ ವಿತರಣಾ ಕಾಲುವೆಗಳಿಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ದೊರೆತಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೃಷ್ಣಾ ನದಿಯಿಂದ ನೀರು ಎತ್ತಿ ಚಿಕ್ಕೋಡಿ ಶಾಖಾ ಕಾಲುವೆಗೆ ಹರಿಸುವ 198.90 ಕೋಟಿ ರು.ಗಳ ‘ಶ್ರೀ ಕರಿಸಿದ್ದೇಶ್ವರ ಏತ ನೀರಾವರಿ ಯೋಜನೆಗೆ’ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿ 19 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ 272 ಕೋಟಿ ರು. ವೆಚ್ಚದ ಏತ ನೀರಾವರಿಗೂ ಒಪ್ಪಿಗೆ ನೀಡಲಾಗಿದೆ.

1,503 ಕೋಟಿ ರು. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ:

ಇದೇ ವೇಳೆ ಬಾಗಲಕೋಟೆ ಬಾದಾಮಿ ಮತ್ತು ಬೀಳಗಿ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 1,503 ಕೋಟಿ ರು. ಮೊತ್ತದ ಕೆರೂರು ಏತನೀರಾವರಿ ಯೋಜನೆ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಇದೇ ವೇಳೆ ಇಂದಿರಾ ಕಿಟ್‌ನಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ. ಹೆಸರು ಕಾಳು ಬದಲಿಗೆ ತೊಗರಿ ಕಾಳು ನೀಡಲು ಹಿಂದಿನ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಎಷ್ಟು ಕುಟುಂಬ ಸದಸ್ಯರು ಇರುವ ಪಡಿತರ ಚೀಟಿಗೆ ಎಷ್ಟು ಪ್ರಮಾಣದ ತೊಗರಿ ಬೇಳೆ ನೀಡಬೇಕು ಎಂಬ ಕುರಿತು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.