ಕೇರಳ ಸರ್ಕಾರದ ಆರ್ಥಿಕ ನಿರ್ವಹಣೆ ಹಳಿ ತಪ್ಪಿದ ಕಾರಣ ನೀಡಿ, 2025-26ನೇ ಆರ್ಥಿಕ ವರ್ಷದ ಕೊನೆಯ 3 ತಿಂಗಳಲ್ಲಿ ರಾಜ್ಯ ಸಾಲ ಪಡೆಯಬಹುದಾದ ಮೊತ್ತದ ಮಿತಿಯಲ್ಲಿ ಕೇಂದ್ರ ಸರ್ಕಾರ ಸುಮಾರು 6,000 ಕೋಟಿ ರು.ಗಳಷ್ಟು ಕಡಿತ ಮಾಡಿದೆ. ಇದು ಕೇರಳ ಮತ್ತು ಕೇಂದ್ರದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ತಿರುವನಂತಪುರಂ: ಕೇರಳ ಸರ್ಕಾರದ ಆರ್ಥಿಕ ನಿರ್ವಹಣೆ ಹಳಿ ತಪ್ಪಿದ ಕಾರಣ ನೀಡಿ, 2025-26ನೇ ಆರ್ಥಿಕ ವರ್ಷದ ಕೊನೆಯ 3 ತಿಂಗಳಲ್ಲಿ (ಜನವರಿ, ಫೆಬ್ರವರಿ, ಮಾರ್ಚ್) ರಾಜ್ಯ ಸಾಲ ಪಡೆಯಬಹುದಾದ ಮೊತ್ತದ ಮಿತಿಯಲ್ಲಿ ಕೇಂದ್ರ ಸರ್ಕಾರ ಸುಮಾರು 6,000 ಕೋಟಿ ರು.ಗಳಷ್ಟು ಕಡಿತ ಮಾಡಿದೆ. ಇದು ಕೇರಳ ಮತ್ತು ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
12,500 ಕೋಟಿ ರು. ಸಾಲ ಮಾಡಿಕೊಳ್ಳಲು ಅನುಮತಿ
ಈ ಹಿಂದೆ ಕೇರಳಕ್ಕೆ ಈ ಅವಧಿಗೆ ಸುಮಾರು 12,500 ಕೋಟಿ ರು. ಸಾಲ ಮಾಡಿಕೊಳ್ಳಲು ಅನುಮತಿ ಇತ್ತು. ಆದರೆ ಈಗ ಕೇಂದ್ರದ ಹೊಸ ನಿರ್ಧಾರದಿಂದ ಆ ಮೊತ್ತ ಗಣನೀಯವಾಗಿ ಇಳಿದಿದೆ. ಇದರಿಂದ ಸರ್ಕಾರದ ಯೋಜನೆಗಳು, ಸಂಬಳ-ಪಿಂಚಣಿ ವೆಚ್ಚಗಳು ತೀವ್ರ ತೊಂದರೆಗೀಡಾಗಲಿವೆ.
ಸಚಿವ ಕೆ.ಎನ್. ಬಾಲಗೋಪಾಲ್ ಆಕ್ರೋಶ
‘ಕೇಂದ್ರ ಇದನ್ನು ಚುನಾವಣೆಗೆ ಮುಂಚಿತವಾಗಿ ಮಾಡುತ್ತಿದೆ. ಇದು ನಮ್ಮ ಸರ್ಕಾರದ ಕೊನೆಯ ಬಜೆಟ್ ಅವಧಿ. ಕಲ್ಯಾಣ ಯೋಜನೆಗಳನ್ನು ನಡೆಸಲು ಹಣವಿಲ್ಲದಂತೆ ಮಾಡುವ ಉದ್ದೇಶ ಇದರ ಹಿಂದಿದೆ’ ಎಂದು ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಕೇರಳದ ಕೇರಳ ಸೋಷಿಯಲ್ ಸೆಕ್ಯುರಿಟಿ ಪಿಂಚಣಿ ಕಂಪನಿಯಂತಹ ಸಂಸ್ಥೆಗಳು ಮಿತಿ ಮೀರಿ ಸಾಲ ಮಾಡಿಕೊಂಡಿವೆ. ಅದನ್ನು ರಾಜ್ಯದ ಒಟ್ಟು ಸಾಲದ ಜೊತೆ ಸೇರಿಸಿ ಲೆಕ್ಕ ಹಾಕಿ ಕೇಂದ್ರ ಈ ಕ್ರಮ ಕೈಗೊಂಡಿದೆ.