ಸಾರಾಂಶ
। ಬಾಗಲಕೋಟೆಯ 3 ತಾಲೂಕುಗಳಲ್ಲಿ ನಿಷೇಧಾಜ್ಞೆ30 ಕಬ್ಬಿನ ಟ್ರ್ಯಾಕ್ಟರ್‌ಗೆ ರೈತರಿಂದ ಬೆಂಕಿ- ಹೋರಾಟ ಮಧ್ಯೆಯೂ ಕಬ್ಬು ನುರಿಸುವಿಕೆ ಆರಂಭಿಸಿದ್ದಕ್ಕೆ ಸಿಟ್ಟು । ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನೆಲಕ್ಕುರುಳಿಸಿ ಪೆಟ್ರೋಲ್ ಸುರಿದು ಬೆಂಕಿ- ನೂರಾರು ಟನ್ ಕಬ್ಬು ನಾಶ । ಸಕ್ಕರೆ ಕಾರ್ಖಾನೆಗೆ ನುಗ್ಗಲು ರೈತರ ಯತ್ನ । ಕಲ್ಲು ತೂರಾಟ: ಪೊಲೀಸರು ಸೇರಿ ಹಲವು ಮಂದಿಗೆ ಗಾಯ- ಪ್ರತಿ ಟನ್ ಕಬ್ಬಿಗೆ 3500 ರು. ದರ ನಿಗದಿಗೆ ಆಗ್ರಹಿಸಿ ಬೆಳಗಾವಿಯ ಗುರ್ಲಾಪುರದಲ್ಲಿ ದೊಡ್ಡ ಹೋರಾಟ ನಡೆದಿತ್ತು- ಟನ್‌ಗೆ 3300 ರು. ನೀಡುವ ಸರ್ಕಾರದ ನಿರ್ಧಾರವನ್ನು ಒಪ್ಪಿ ಬೆಳಗಾವಿ ರೈತರು ಹೋರಾಟವನ್ನು ಹಿಂಪಡೆದಿದ್ದರು- ಆದರೆ ಟನ್‌ಗೆ 3500 ರು. ನೀಡಲೇಬೇಕು ಎಂದು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಹೋರಾಟ ತೀವ್ರವಾಗಿತ್ತು- ವಾರದಿಂದ ಧರಣಿ ನಡೆಸುತ್ತಿದ್ದ ರೈತರಿಗೆ ಬೆಂಬಲ ಸೂಚಿಸಲು ಗುರ್ಲಾಪುರದಿಂದ ರೈತರು ಆಗಮಿಸಿದ್ದರು- ಈ ನಡುವೆ ಸೋಮಯ್ಯ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರುಸುವಿಕೆಗೆ ಚಾಲನೆ ನೀಡಲಾಗಿದೆ ಎಂಬ ಸುದ್ದಿ ಹಬ್ಬಿತು- ಕಾರ್ಖಾನೆ ಬಳಿಗೆ ತೆರಳಿದ ರೈತ ಹೋರಾಟಗಾರರು ಅಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗಳನ್ನು ಉರುಳಿಸಿ ಬೆಂಕಿ ಹಚ್ಚಿದರು
--ಕನ್ನಡಪ್ರಭ ವಾರ್ತೆ ಮಹಾಲಿಂಗಪುರ (ಬಾಗಲಕೋಟೆ)
ಪ್ರತಿ ಟನ್ ಕಬ್ಬಿಗೆ ₹3,500 ದರ ಘೋಷಣೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರ ಮುಧೋಳ ತಾಲೂಕಿನ ಸಮೀರವಾಡಿ ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ಹೋರಾಟಗಾರರು ನೆಲಕ್ಕುರುಳಿಸಿ, ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದರಿಂದಾಗಿ ನೂರಾರು ಟನ್ ಕಬ್ಬು ಬೆಂಕಿಗಾಹುತಿಯಾಗಿದೆ.ಇದೇ ವೇಳೆ, ಕಾರ್ಖಾನೆಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು, ಕಾರ್ಖಾನೆಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಲ್ಲಿ ಕಾರ್ಖಾನೆಯ ಇಬ್ಬರು ಸಿಬ್ಬಂದಿ, ಎಸ್ಪಿ ಸೇರಿ ಹಲವು ಮಂದಿ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಆಗಿದ್ದೇನು?:ಪ್ರತಿ ಟನ್ ಕಬ್ಬಿಗೆ ₹3,500 ದರ ಘೋಷಣೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಳೆದೊಂದು ವಾರದಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಈ ಮಧ್ಯೆ, ಗುರುವಾರ ಬೆಳಗಾವಿ ಜಿಲ್ಲೆ ಗುರ್ಲಾಪುರದಲ್ಲಿ ಪ್ರತಿಭಟನೆ ನಡೆಸಿದ್ದ ರೈತರು ಕೂಡ ಇಲ್ಲಿಗೆ ಆಗಮಿಸಿ, ಇಲ್ಲಿನ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಮಧ್ಯೆ, ಗುರುವಾರ ಬೆಳಗ್ಗೆ ಮಹಾಲಿಂಗಪುರ ಬಳಿಯ ಸೋಮಯ್ಯ ಸಕ್ಕರೆ ಕಾರ್ಖಾನೆಯಲ್ಲಿ ಹೋಮ, ಹವನ ನಡೆಸಿ ಕೇನ್ ಕ್ಯಾರಿಯರ್ ಪೂಜೆಯೊಂದಿಗೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಲಾಗಿತ್ತು.
ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಮುಧೋಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಹಸ್ರಾರು ಹೋರಾಟಗಾರರು ಬಸ್‌ಗಳಲ್ಲಿ ಸಂಜೆ ಸಮೀರವಾಡಿಗೆ ಆಗಮಿಸಿ, ಕಾರ್ಖಾನೆಗೆ ತೆರಳುತ್ತಿದ್ದ 30ಕ್ಕೂ ಹೆಚ್ಚು ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳನ್ನು ಉರುಳಿಸಿ, ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದರು. ಸಕ್ಕರೆ ಕಾರ್ಖಾನೆಯ ಮಾಲೀಕರು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ, ಸಕ್ಕರೆ ಕಾರ್ಖಾನೆಗೆ ನುಗ್ಗಲು ಯತ್ನಿಸಿ, ಕಾರ್ಖಾನೆಯ ಮುಂದಿನ ಗೇಟ್ ಬಂದ್ ಮಾಡಿ, ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ವಿಷಯ ತಿಳಿದು, ಸ್ಥಳಕ್ಕಾಮಿಸಿದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು, ಹೆಚ್ಚಿನ ಅನಾಹುತ ತಪ್ಪಿಸಿದರು.ಕಲ್ಲು ತೂರಾಟದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ ಜಿಡ್ಡಿ, ಕಾರ್ಖಾನೆಯ ಇಬ್ಬರು ಸಿಬ್ಬಂದಿ, ಕೆಲ ರೈತರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಕಬ್ಬು ಹೊತ್ತಿ ಉರಿದಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಘಟನೆಯಲ್ಲಿ ನೂರಾರು ಟನ್ ಕಬ್ಬು, ಕೆಲ ಟ್ರ್ಯಾಕ್ಟರ್‌ಗಳು ಬೆಂಕಿಗಾಹುತಿಯಾಗಿವೆ.
ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಮಖಂಡಿ, ರಬಕವಿ-ಬನಹಟ್ಟಿ, ಮುಧೋಳ ತಾಲೂಕುಗಳ ವ್ಯಾಪ್ತಿಯಲ್ಲಿ ನ.16ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.ಈ ಮಧ್ಯೆ, ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಧ್ಯೆ ಸಮನ್ವಯತೆ ಸಾಧಿಸಲು ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಂಯಮ ಕಾಯ್ದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದ್ದಾರೆ.
)
)
;Resize=(128,128))
;Resize=(128,128))
;Resize=(128,128))
;Resize=(128,128))