ಸಿಂಧುದುರ್ಗ ಜಿಲ್ಲೆಯ ಶಿವಾಜಿ ಪ್ರತಿಮೆ ಕುಸಿತ: ಮೋದಿ ಕ್ಷಮೆ ತಿರಸ್ಕಾರ, ‘ಜೋಡೇ ಮಾರೋ’ ಪ್ರತಿಭಟನೆ

| Published : Sep 02 2024, 02:01 AM IST / Updated: Sep 02 2024, 05:25 AM IST

ಸಾರಾಂಶ

ಮಾಲ್ವಾನ್‌ನಲ್ಲಿ ಶಿವಾಜಿ ಪ್ರತಿಮೆ ಕುಸಿದ ಘಟನೆಗೆ ಸಂಬಂಧಿಸಿದಂತೆ ಮಹಾ ವಿಕಾಸ್‌ ಅಘಾಡಿ ‘ಜೋಡೇ ಮಾರೋ’ ಪ್ರತಿಭಟನೆ ನಡೆಸಿದ್ದು, ಪ್ರಧಾನಿ ಮೋದಿ ಕ್ಷಮೆಯನ್ನು ತಿರಸ್ಕರಿಸಿದೆ.  

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್‌ನಲ್ಲಿ ಛತ್ರಪತಿ ಶಿವಾಜಿಯವರ 35 ಅಡಿಯ ಪ್ರತಿಮೆ ಕುಸಿದುಬಿದ್ದ ಘಟನೆಯ ವಿರುದ್ಧ ರಾಜ್ಯದ ಪ್ರತಿಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ್‌ ಅಘಾಡಿಯು ಭಾನುವಾರ ಬೃಹತ್‌ ‘ಜೋಡೇ ಮಾರೋ’ (ಚಪ್ಪಲಿಯಿಂದ ಹೊಡೆಯಿರಿ) ಪ್ರತಿಭಟನೆ ನಡೆಸಿದೆ ಹಾಗೂ ‘ಪ್ರತಿಮೆ ಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿದ ‘ದುರಹಂಕಾರದ ಕ್ಷಮೆ’ಯನ್ನು ಮಹಾರಾಷ್ಟ್ರ ತಿರಸ್ಕರಿಸಿದೆ’ ಎಂದು ಗುಡುಗಿದೆ.

ಮುಂಬೈನಲ್ಲಿ ಶಿವಸೇನೆ (ಯುಬಿಟಿ)-ಕಾಂಗ್ರೆಸ್‌-ಎನ್‌ಸಿಪಿ (ಎಪಿ) ಪಕ್ಷಗಳು ಒಗ್ಗೂಡಿ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಕೂಟದ ಉನ್ನತ ನಾಯಕರಾದ ಶರದ್ ಪವಾರ್, ಉದ್ಧವ್ ಠಾಕ್ರೆ ಮತ್ತು ನಾನಾ ಪಟೋಲೆ ಪಾಲ್ಗೊಂಡಿದ್ದರು. ಈ ವೇಳೆ ಠಾಕ್ರೆ ಸೇರಿದಂತೆ ವಿಪಕ್ಷ ನಾಯಕರು ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್‌ ಹಾಘೂ ಅಜಿತ್ ಪವಾರ್‌ ಬ್ಯಾನರ್‌ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ದುರಹಂಕಾರಿ ಮೋದಿ- ಠಾಕ್ರೆ: ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮತ್ರಿ ಏಕನಾಥ್ ಶಿಂಧೆ ಸರ್ಕಾರದ ಮೇಲೆ ಪ್ರಹಾರ ನಡೆಸಿರುವ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ‘ಪ್ರತಿಮೆ ಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆಯಾಚನೆಯು ದುರಹಂಕಾರದಿಂದ ಕೂಡಿದೆ. ಮಹಾರಾಷ್ಟ್ರದ ಜನತೆ ಅದನ್ನು ತಿರಸ್ಕರಿಸಿದ್ದಾರೆ. ಶಿವಾಜಿ ಮಹಾರಾಜರನ್ನು ಅವಮಾನಿಸಿದ ಶಕ್ತಿಗಳನ್ನು ಸೋಲಿಸಲು ನಮ್ಮೆಲ್ಲ ಕಾರ್ಯಕರ್ತರು ಒಗ್ಗೂಡಿ ಶ್ರಮಿಸಬೇಕು. ಪ್ರತಿಮೆ ಕುಸಿತವು ಶಿವಾಜಿ ಮಹಾರಾಜರ ಆತ್ಮಕ್ಕೆ ಮಾಡಿದ ಅವಮಾನ. ನಾವಿಲ್ಲಿ ಸೇರಿದ್ದು ಬಿಜೆಪಿಯನ್ನು ಭಾರತದಿಂದಲೇ ಹೊರಹಾಕಬೇಕು ಎಂಬ ಕಾರಣಕ್ಕೆ’ ಎಂದು ಕರೆ ನೀಡಿದರು.

ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್‌ ಪವಾರ್ ಮಾತನಾಡಿ, ‘ಪ್ರತಿಮೆ ಕುಸಿತವು ಭಷ್ಟಾಚಾರದ ಸಂಕೇತ. ಶಿವಾಜಿ ಅನುಯಾಯಿಗಳಿಗೆ ಮಾಡಿದ ಅವಮಾನ’ ಎಂದರು. ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಅವರು, ‘ಇದು ಶಿವದ್ರೋಹಿ (ಶಿವಾಜಿ ದ್ರೋಹಿ) ಸರ್ಕಾರ’ ಎಂದು ಟೀಕಿಸಿದರು.

ಸಿಎಂ ತಿರುಗೇಟು:

ಈ ನಡುವೆ ಉದ್ಧವ್‌ ಠಾಕ್ರೆ ಅವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಶಿಂಧೆ, ‘ಉದ್ದವ್‌ ಅವರು ಶಿವಾಜಿ ಮಹಾರಾಜರ ಹೆಸರು ಹೇಳಿಕೊಂಡು ಔರಂಗಜೇಬ್‌ ಹಾಗೂ ಅಫ್ಜಲ್‌ ಖಾನ್‌ ಮಾಡಿದಂಥ ಕೃತ್ಯ ಎಸಗುತ್ತಾರೆ’ ಎಂದು ತಿರುಗೇಟು ನೀಡಿದ್ದಾರೆ.