ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ-ಭಾರೀ ಮಳೆಗೆ ಆಂಧ್ರ ತತ್ತರ : 7 ಸಾವು, ಒಡಿಶಾಗೂ ಮುನ್ನೆಚ್ಚರಿಕೆ

| Published : Sep 01 2024, 01:57 AM IST / Updated: Sep 01 2024, 04:38 AM IST

ಸಾರಾಂಶ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಸುರಿದು 7 ಜನರು ಸಾವನ್ನಪ್ಪಿದ್ದಾರೆ. ವಿಜಯವಾಡದಲ್ಲಿ ಭೂಕುಸಿತದಿಂದ 4 ಜನರು ಸಾವನ್ನಪ್ಪಿದ್ದರೆ,  ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆಯಿದೆ.

ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಅಗಿರುವ ಕಾರಣ ಆಂಧ್ರಪ್ರದೇಶದ ಹಲವು ಕಡೆಗಳಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ವಿಜಯವಾಡ ಸೇರಿ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 7 ಜನರು ಮಳೆ ಸಂಬಂಧಿ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ.

ವಿಜಯವಾಡದಲ್ಲಿ ಭೂಕುಸಿತದ ಕಾರಣ ನಾಲ್ವರು ಸಾವನ್ನಪ್ಪಿದ್ದಾರೆ. ಗುಂಟೂರಿನಲ್ಲಿ ತೊರೆ ಉಕ್ಕೇರಿ ಬಂದ ಕಾರಣ ನಡೆದು ಹೋಗುತ್ತಿದ್ದ 3 ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕ ಸಾವನ್ನಪ್ಪಿದ್ದಾರೆ.ವಾಯುಭಾರ ಕುಸಿತದಿಂದ ಅನೇಕ ಕಡೆ ಮಳೆ ಉಕ್ಕೇರಿದ್ದು, ಮಚಲಿಪಟ್ಟಣಂ, ಮಂಗಳಗಿರಿ, ಅಮರಾವತಿ ಸೇರಿ ಅನೇಕ ಕಡೆ 10ರಿಂದ 18 ಸೆಂ.ಮೀ. ಮಳೆ ಸುರಿದಿದೆ.

ಒಡಿಶಾ, ಆಂಧ್ರದಲ್ಲಿ ಮುನ್ನೆಚ್ಚರಿಕೆ:

ವಾಯುಭಾರ ಕುಸಿತದ ಕಾರಣ ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಮಳೆ 1-2 ದಿನ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಿಮಾಚಲ, ರಾಜಸ್ಥಾನದಲ್ಲಿ ಭಾರೀ ಮಳೆ: 72 ರಸ್ತೆ ಬಂದ್‌

ಶಿಮ್ಲಾ/ ಜೈಪುರ: ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಮಳೆ ಇನ್ನೂ ಕೂಡ ಮುಂದುವರೆಯಬಹುದು ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟದಿಂದಾಗಿ ಸುಮಾರು 72 ರಸ್ತೆಗಳು ಬಂದ್‌ ಆಗಿವೆ. ಶಿಮ್ಲಾ 35, ಮಂಡಿ 15, ಕಾಂಗ್ರಾದಲ್ಲಿ 10 ರಸ್ತೆಗಳು ಸೇರಿದಂತೆ ಹಲವೆಡೆ ಸಂಪರ್ಕ ಸ್ಥಗಿತಗೊಂಡಿದೆ. ಹಿಮಾಚಲ ಪ್ರದೇಶದಲ್ಲಿ ಇದುವರೆಗೆ ಮಳೆಯಿಂದಾಗಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 1,265 ಕೋಟಿ ರು. ಆಸ್ತಿ-ಪಾಸ್ತಿ ಹಾನಿಗೀಡಾಗಿವೆ. ಸೆ.2ರ ತನಕ ಇಲ್ಲಿ ಮಳೆ ಮುಂದುವರೆಯಬಹುದು ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾಜಸ್ಥಾನದಲ್ಲೂ ಅಬ್ಬರ: ರಾಜಸ್ಥಾನದಲ್ಲಿಯೂ ಮಳೆ ಅಬ್ಬರ ಮುಂದುವರೆದಿದೆ. 24 ಗಂಟೆಗಳಲ್ಲಿ ಭಾರೀ ವರ್ಷಧಾರೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇಲ್ಲಿನ ದೌಸಾ ಜಿಲ್ಲೆಯ ರಾಹುವಾಸ್‌ನಲ್ಲಿ 101ಮೀ.ಮೀ ಮಳೆಯಾಗಿದೆ. ಹಲವೆಡೆ ಮಳೆಯಿಂದಾಗಿ ಜನ ಜೀವನ ಅಸ್ತವ್ತಸ್ತಗೊಂಡಿದೆ.

ಸೆಪ್ಟೆಂಬರ್‌ನಲ್ಲಿ ಅಧಿಕ ಮಳೆ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ಈ ಬಾರಿ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದ್ದು, ದೇಶದ ವಾಯವ್ಯ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಭಾರತದ ಬಹುತೇಕ ಕಡೆಗಳಲ್ಲಿ, ವಿಶೇಷವಾಗಿ ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಕೆಲ ಭಾಗಗಳಲ್ಲಿ ವಾಡಿಕೆಯ 167.9 ಎಂಎಂಗಿಂತ ಶೇ.109ರಷ್ಟು ಅಧಿಕ ಮಳೆಯಾಗಲಿದೆ. ಪರಿಣಾಮವಾಗಿ ಪ್ರವಾಹ, ಭೂಕುಸಿತದಂತಹ ಘಟನೆಗಳು ಸಂಭವಿಸುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಅಂತೆಯೇ, ದಕ್ಷಿಣ ಭಾರತದ ರಾಜ್ಯಗಳು, ಉತ್ತರ ಬಿಹಾರ, ಉತ್ತರ ಪ್ರದೇಶದ ಈಶಾನ್ಯ ಭಾಗ ಹಾಗೂ ಕೆಲ ಈಶಾನ್ಯ ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ.

ಅಸ್ನಾ ಚಂಡಮಾರುತದ ಆತಂಕದಿಂದ ಗುಜರಾತ್‌ ಪಾರು

  ಅಹಮದಾಬಾದ್‌ : ಗುಜರಾತ್‌ನ ಕಛ್‌ ಕರಾವಳಿಯಲ್ಲಿ ರೂಪುಗೊಂಡು ರಾಜ್ಯಕ್ಕೆ ಆತಂಕ ಸೃಷ್ಟಿಸಿದ್ದ ‘ಅಸ್ನಾ ಚಂಡಮಾರುತ’ ಈಗ ಓಮಾನ್‌ ಕಡೆಗೆ ಚಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಈಗಾಗಲೇ ಮಳೆಯಿಂದ ತತ್ತರಿಸಿದ್ದ ಗುಜರಾತ್, ಚಂಡಮಾರುತದ ಆತಂಕದಿಂದ ದೂರವಾಗಿದೆ.

ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಆಡಳಿತವು ಸುಮಾರು 3,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಮತ್ತು ಗುಡಿಸಲುಗಳು ಮತ್ತು ಮಣ್ಣಿನ ಮನೆಗಳಲ್ಲಿ ವಾಸಿಸುವ ಜನರನ್ನು ಇತರ ಕಟ್ಟಡಗಳಲ್ಲಿ ಆಶ್ರಯ ಪಡೆಯಲು ಕೋರಿದೆ ಎಂದು ಕಚ್ ಜಿಲ್ಲಾಧಿಕಾರಿ ಅಮಿತ್ ಅರೋರಾ ಹೇಳಿದ್ದಾರೆ.‘

ಚಂಡಮಾರುತವು ಈಗಾಗಲೇ ಸಮುದ್ರವನ್ನು ಪ್ರವೇಶಿಸಿ ಒಮಾನ್ ಕಡೆಗೆ ಸಾಗುತ್ತಿರುವುದರಿಂದ, ಕರಾವಳಿಯ ಕೊಂಚ ಮೇಲೆ ಪರಿಣಾಮ ಬೀರಿದೆ. ಕೆಲ ಪ್ರಮಾಣದ ಮಳೆ ಮತ್ತು ಗಾಳಿ ಗಣನೀಯ ವೇಗದಲ್ಲಿ ಬೀಸುವುದನ್ನು ಹೊರತುಪಡಿಸಿ, ಇಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ’ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಆತಂಕ: ಚಂಡಮಾರುತ ಓಮಾನ್‌ನತ್ತ ಸಾಗಿರುವ ಕಾರಣ ಪಾಕಿಸ್ತಾನಕ್ಕೆ ಆತಂಕ ಉಂಟಾಗಿದೆ. ಕರಾಚಿ ಸೇರಿ ಕೆಲವು ಕಡೆ ಕಟ್ಟೆಚ್ಚರ ಸಾರಲಾಗಿದೆ.

ಅಸ್ನಾ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಆಗಸ್ಟ್‌ ತಿಂಗಳಿನಲ್ಲ ಎದ್ದ 46 ವರ್ಷ ನಂತರದ ಮೊದಲ ಚಂಡಮಾರುತವಾಗಿದೆ.