‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಸ್ಥಾಗಿತ್ಯಕ್ಕೆ ಭಾರತದ ಅಳಿಯನೂ ಆಗಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌, ಶ್ವೇತಭವನದ ಆರ್ಥಿಕ ಸಲಹೆಗಾರ ಪೀಟರ್‌ ನವಾರೋ ಮತ್ತು ಸ್ವತಃ   ಟ್ರಂಪ್‌ ಅವರೇ ಕಾರಣ’ ಎಂಬ ಆರೋಪ ರಿಪಬ್ಲಿಕನ್‌ ಪಕ್ಷದ ಪ್ರಭಾವಿ ಸಂಸದ ಟೆಡ್‌ ಕ್ರೂಜ್‌ ಆರೋಪಿಸಿದ್ದಾರೆ.

 ವಾಷಿಂಗ್ಟನ್‌: ‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಸ್ಥಾಗಿತ್ಯಕ್ಕೆ ಭಾರತದ ಅಳಿಯನೂ ಆಗಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌, ಶ್ವೇತಭವನದ ಆರ್ಥಿಕ ಸಲಹೆಗಾರ ಪೀಟರ್‌ ನವಾರೋ ಮತ್ತು ಸ್ವತಃ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೇ ಕಾರಣ’ ಎಂಬ ಆರೋಪ ರಿಪಬ್ಲಿಕನ್‌ ಪಕ್ಷದ ಪ್ರಭಾವಿ ಸಂಸದ ಟೆಡ್‌ ಕ್ರೂಜ್‌ ಆರೋಪಿಸಿದ್ದಾರೆ.

ಮುಂಬರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಟೆಡ್‌ ಕ್ರೂಜ್‌ ಅವರು ದಾನಿಗಳ ಜತೆಗೆ ಮಾತನಾಡಿರುವ 10 ನಿಮಿಷಗಳ ಆಡಿಯೋವೊಂದು ಇದೀಗ ಬಹಿರಂಗವಾಗಿದ್ದು, ತೀವ್ರ ಸಂಚಲನ ಮೂಡಿಸಿದೆ. ಇದು ಕಳೆದ ವರ್ಷದ ಮಧ್ಯಂತರದ ಅವಧಿ ಆಡಿಯೋ ಎಂದು ಹೇಳಲಾಗಿದೆ.

ತಮ್ಮನ್ನು ತಾವು ಸಾಂಪ್ರದಾಯಿಕ, ಮುಕ್ತ ವ್ಯಾಪಾರ ಮತ್ತು ಮಧ್ಯಸ್ಥಿಕೆಯನ್ನು ಬೆಂಬಲಿಸುವ ರಿಪಬ್ಲಿಕನ್‌ ಸದಸ್ಯ ಎಂದು ಹೇಳಿಕೊಂಡಿರುವ ಕ್ರೂಜ್‌ ಅವರು, ‘ಜೆ.ಡಿ.ವ್ಯಾನ್ಸ್‌ ಅವರನ್ನು ಪ್ರತ್ಯೇಕತಾ ನೀತಿ ಬೆಂಬಲಿಸುವವರು’ ಎಂದು ಹೇಳಿಕೊಂಡಿದ್ದಾರೆ. ಕ್ರೂಜ್‌ ಅವರ ಈ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.

‘ಟ್ರಂಪ್‌ ಅವರ ತೆರಿಗೆ ಕೇಂದ್ರಿತ ವ್ಯೂಹತಂತ್ರವು ಅಮೆರಿಕದ ಆರ್ಥಿಕತೆ ಮೇಲೆ ಭಾರೀ ಅಡ್ಡಪರಿಣಾಮ ಬೀರಲಿದೆ, ಅಧ್ಯಕ್ಷರಿಗೆ ವಾಗ್ದಂಡನೆಯ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ’ ಎಂದೂ ಅವರು ಎಚ್ಚರಿಸಿದ್ದಾರೆ.

‘2025ರ ಏಪ್ರಿಲ್‌ನ ಆರಂಭದಲ್ಲಿ ‘ತೆರಿಗೆ ಯುದ್ಧ’ ಘೋಷಣೆಯಾದಾಗ ನಾನು ಮತ್ತು ಸಂಸದರ ಗುಂಪೊಂದು ತಡರಾತ್ರಿ ಟ್ರಂಪ್‌ ಅವರಿಗೆ ಕರೆ ಮಾಡಿ ಈ ಕುರಿತು ಪುನರ್‌ ಪರಿಶೀಲಿಸುವಂತೆ ಮನವಿ ಮಾಡಿದ್ದೆವು. ಆದರೆ, ಟ್ರಂಪ್‌ ಅವರಿಗೆ ಅದು ಇಷ್ಟವಾಗಲಿಲ್ಲ. ಅವರು ನಮ್ಮ ವಿರುದ್ಧ ಕೂಗಾಡಿದರು, ಹಿಡಿ ಶಾಪ ಹಾಕಿದರು. ಟ್ರಂಪ್‌ ಅವರು ಕೆಟ್ಟ ಮೂಡ್‌ನಲ್ಲಿದ್ದರು’ ಎಂದು ಅವರು ಹೇಳಿದ್ದಾರೆ.

‘ಈ ವರ್ಷ ನವೆಂಬರ್‌ನಲ್ಲಿ ಸಂಸತ್ತಿಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆ ಹೊತ್ತಿಗೆ ಜನರ ನಿವೃತ್ತಿಯ ಉಳಿತಾಯ ಶೇ.30ರಷ್ಟು ಕುಸಿದರೆ ಮತ್ತು ದಿನಬಳಕೆ ವಸ್ತುಗಳ ಬೆಲೆ ಶೇ.10ರಿಂದ ಶೇ.20ರಷ್ಟು ಏರಿಕೆಯಾದರೆ ರಿಪಬ್ಲಿಕನ್‌ ಅಭ್ಯರ್ಥಿಗಳು ಭಾರೀ ಸೋಲು ಅನುಭವಿಸಬೇಕಾದೀತು’ ಎಂದು ಎಚ್ಚರಿಸಿದ್ದಾರೆ.‘ಈ ರೀತಿಯೇನಾದರೂ ಆದರೆ ಮುಂದಿನ ಎರಡು ವರ್ಷ ಪ್ರತಿ ವಾರ ಸರ್ಕಾರ ವಾಗ್ದಂಡನೆಗೆ ತುತ್ತಾಗಬೇಕಾದೀತು’ ಎಂದು ಅಧ್ಯಕ್ಷರಿಗೆ ಎಚ್ಚರಿಸಿದ್ದೇನೆ. ಆದರೆ, ಟ್ರಂಪ್‌ ಅವರು ಇದಕ್ಕೆ ಆಕ್ರೋಶಭರಿತವಾಗಿ ಕಿಡಿಕಾರಿದ್ದಾರೆ’ ಎಂದು ಕ್ರೂಜ್‌ ತಿಳಿಸಿದ್ದಾರೆ.

‘ವ್ಯಾಪಾರ ತೆರಿಗೆಯನ್ನು ‘ವಿಮೋಚನಾ ದಿನ’ ಎಂದು ಬ್ರ್ಯಾಂಡ್ ಮಾಡುತ್ತಿರುವ ಕುರಿತೂ ಅಸಮಾದಾನ ವ್ಯಕ್ತಪಡಿಸಿದ ಕ್ರೂಜ್‌, ಯಾರಾದರೂ ನನ್ನ ತಂಡದಲ್ಲಿ ಅಂಥ ಪದ ಬಳಸಿದ್ದೇ ಆದರೆ ತಕ್ಷಣ ಅವರನ್ನು ಕೆಲಸದಿಂದ ವಜಾ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಅಮೆರಿಕ ತೆರಿಗೆ ಏಟಿನ ಮಧ್ಯೆ ಮಾರ್ಚಲ್ಲಿ ಭಾರತಕ್ಕೆ ಕೆನಡಾ ಪ್ರಧಾನಿ ಭೇಟಿ?

ನವದೆಹಲಿ: ಅಮೆರಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಜತೆ ಭಾರತ ಹಾಗೂ ಕೆನಡಾ ತೆರಿಗೆ ಸಂಘರ್ಷ ನಡೆಸಿರುವ ನಡುವೆಯೇ ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಕಾರ್ನಿ ಅವರು ಮಾರ್ಚ್‌ ಮೊದಲ ವಾರದಲ್ಲಿ ಭಾರತಕ್ಕಾಗಮಿಸುವ ನಿರೀಕ್ಷೆಯಿದ್ದು, ಈ ವೇಳೆ ಅಣುಶಕ್ತಿ, ಕೃತಕ ಬುದ್ಧಿಮತ್ತೆ ಮತ್ತು ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ. 2023ರಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ ಬಳಿಕ ಹಳಸಿದ್ದ ಭಾರತ-ಕೆನಡಾ ಸಂಬಂಧ ವೃದ್ಧಿಗೂ ಇದು ಸಾಕ್ಷಿಯಾಗಲಿದೆ ಎನ್ನಲಾಗಿದೆ. ನಿಜ್ಜರ್‌ ಹತ್ಯೆ ವಿಚಾರವಾಗಿ ಭಾರತ ಮತ್ತು ಅಂದಿನ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ನಡುವೆ ವೈಮನಸ್ಯ ಜೋರಾಗಿ ಸಂಬಂಧ ಹಳಸಿತ್ತು.

ರಷ್ಯಾ ತೈಲ ಆಮದು ಸಂಪೂರ್ಣ ನಿಲ್ಲಿಸಿದ ರಿಲಯನ್ಸ್‌ ಇಂಡಸ್ಟ್ರೀಸ್‌

ಬೆತುಲ್‌(ಗೋವಾ): ಭಾರತದ ಅತಿ ದೊಡ್ಡ ಖಾಸಗಿ ತೈಲ ಸಂಸ್ಕರಣಾ ಸಂಸ್ಥೆ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಜನವರಿ ತಿಂಗಳಲ್ಲಿ ರಷ್ಯಾ ತೈಲ ಖರೀದಿ ಸಂಪೂರ್ಣ ಸ್ಥಗಿತಗೊಳಿಸಿದೆ. ಆದರೆ, ಸರ್ಕಾರಿಸ್ವಾಮ್ಯದ ತೈಲಕಂಪನಿಗಳು ಮಾತ್ರ ಪ್ರತಿ ಬ್ಯಾರೆಲ್‌ಗೆ 650 ರು.ನಷ್ಟು ಡಿಸ್ಕೌಂಟ್‌ ಸಿಗುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು ಮುಂದುವರಿಸಿವೆ.

2025ರಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ರಷ್ಯಾದಿಂದ ನಿತ್ಯ 6 ಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಜನವರಿ ಮೊದಲ ಮೂರು ವಾರಗಳಲ್ಲಿ ರಷ್ಯಾ ತೈಲದಿಂದ ದೂರವೇ ಉಳಿದಿದೆ. ಇನ್ನು ಎಚ್‌ಪಿಸಿಎಲ್‌-ಮಿತ್ತಲ್‌ ಎನರ್ಜಿ ಲಿ.(ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ-ಲಂಡನ್‌ ಮೂಲದ ಮಿತ್ತಲ್‌ ಗ್ರೂಪ್‌ ಪಾಲುದಾರಿಕೆ ಕಂಪನಿ) ಮತ್ತು ಎಂಆರ್‌ಪಿಎಲ್‌ ಮತ್ತು ಎಚ್‌ಪಿಸಿಎಲ್‌ ಕೂಡ ರಷ್ಯಾ ತೈಲ ಖರೀದಿಯಿಂದ ಅಂತರ ಕಾಯ್ದುಕೊಂಡಿದೆ. ಆದರೆ, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌(ಐಒಸಿ) ಮಾತ್ರ ಜನವರಿಯಲ್ಲಿ ನಿತ್ಯ 4.70 ಲಕ್ಷ ಬ್ಯಾರೆಲ್‌ನಷ್ಟು ತೈಲ ಆಮದು ಮಾಡಿಕೊಂಡಿದೆ. ಇನ್ನು ಭಾರತ್‌ ಪೆಟ್ರೋಲಿಯಂ ಲಿಮಿಟೆಡ್‌ ನಿತ್ಯ 1.64 ಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಆಮದು ಮಾಡಿಕೊಂಡಿದೆ. ಒಟ್ಟಾರೆ ಡಿಸೆಂಬರ್‌ನಲ್ಲಿ ಭಾರತ ನಿತ್ಯ 12 ಲಕ್ಷದಷ್ಟು ಬ್ಯಾರೆಲ್‌ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಜನವರಿಯಲ್ಲಿ ಇದು 11 ಲಕ್ಷ ಬ್ಯಾರೆಲ್‌ಗೆ ಇಳಿದಿದೆ.

ಪಾಕ್‌ಗೆ ಯುಎಇ ಶಾಕ್‌: ವಿಮಾನ ನಿಲ್ದಾಣ ನಿರ್ಮಾಣ ಒಪ್ಪಂದ ರದ್ದು

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ) ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರ ಇತ್ತೀಚೆಗಿನ ದಿಢೀರ್‌ ಭಾರತ ಭೇಟಿಯು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ಲೆಕ್ಕಾಚಾರ ತಲೆಕೆಳಗು ಮಾಡಿದೆ. ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆದ ಬೆನ್ನಲ್ಲೇ ಇಸ್ಲಾಮಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣಾ ಒಪ್ಪಂದದಿಂದ ಹೊರಗುಳಿಯಲು ಯುಎಇ ನಿರ್ಧರಿಸಿದೆ.ಇದರ ಜತೆಗೆ, ಯುಇಎ ಜೈಲಿನಲ್ಲಿರುವ 900 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲೂ ನಿರ್ಧರಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷ ಹಿನ್ನಡೆ ಆದಂತಾಗಿದೆ.

ಪಾಕಿಸ್ತಾನದ ಮಾಧ್ಯಮಗಳು, ಏರ್ಪೋರ್ಟ್‌ ನಿರ್ವಹಣಾ ಒಪ್ಪಂದದಿಂದ ಯುಎಇ ಹಿಂದೆ ಸರಿದಿರುವ ಕುರಿತು ವರದಿ ಮಾಡಿವೆ. ಇದಕ್ಕೆ ಸೂಕ್ತ ಕಾರಣಗಳನ್ನು ಸ್ಪಷ್ಟಪಡಿಸಿಲ್ಲ.ಪಾಕಿಸ್ತಾನವು ಸೌದಿ ಅರೇಬಿಯಾ ಜತೆಗೆ ಇತ್ತೀಚೆಗೆ ರಕ್ಷಣಾ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಆದರೆ, ಯುಎಇ ಮತ್ತು ಸೌದಿ ಅರೇಬಿಯಾಗೂ ವೈಮನಸ್ಯವಿದೆ. ಹೀಗಾಗಿ ಪಾಕ್‌ ಮೇಲೆ ಮುನಿದು ಯುಎಇ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.