ರಾಷ್ಟ್ರೀಯ ಭಾವೈಕ್ಯತೆ ಮತ್ತು ಸ್ಥಳೀಯ ಪರಂಪರೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವಿಂದು ಉತ್ತಮ ನಾಗರಿಕರಾಗಿ ಕರ್ತವ್ಯ ನಿಭಾಯಿಸಬೇಕಾಗಿದೆ ಎಂದು ತಹಸೀಲ್ದಾರ್‌ ಎಚ್.ಎ. ಕೊಚರಗಿ ಹೇಳಿದರು.

ಅಳ್ನಾವರ:

ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಪಣ ತೊಡುವ ಮೂಲಕ ಆತ್ಮ ನಿರ್ಭರ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ತಹಸೀಲ್ದಾರ್‌ ಎಚ್.ಎ. ಕೊಚರಗಿ ಹೇಳಿದರು.

ಅಳ್ನಾವರದ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾಲೂಕಾಡಳಿತದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸಹೋದರತೆ ಕಲ್ಪಿಸಿಕೊಟ್ಟ ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ವೈಶಿಷ್ಟ್ಯವಾಗಿದೆ ಎಂದರು.

ರಾಷ್ಟ್ರೀಯ ಭಾವೈಕ್ಯತೆ ಮತ್ತು ಸ್ಥಳೀಯ ಪರಂಪರೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವಿಂದು ಉತ್ತಮ ನಾಗರಿಕರಾಗಿ ಕರ್ತವ್ಯ ನಿಭಾಯಿಸಬೇಕಾಗಿದೆ. ಸ್ಥಳೀಯ ಉದ್ದಮೆಗಳನ್ನು ಬೆಂಬಲಿಸುವ ಮೂಲಕ ಪ್ಲಾಸ್ಟಿಕ್‌ ಮುಕ್ತ ಬದುಕು ಸಾಗಿಸುವ ಕಲೆಗಳನ್ನು ರೂಢಿಸಿಕೊಂಡು ತಾಲೂಕನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕಡೆಗೆ ಗಮನ ಹರಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ, ಸಾಧನೆ ಮಾಡಿದವರನ್ನು ತಾಲೂಕು ಆಡಳಿತದಿಂದ ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಧ್ವಜ ಕವಾಯಥ ಗಮನ ಸೆಳೆಯಿತು. ಪೊಲೀಸರಿಂದ ಧ್ವಜ ಗೌರವರಕ್ಷೆಯನ್ನು ತಹಸೀಲ್ದಾರ್‌ ಸ್ವೀಕರಿಸಿದರು.

ತಾಪಂ ಇಒ ಪ್ರಶಾಂತ ತುರಕಾಣಿ, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿನಾಯಕ ಕುರುಬರ, ವಲಯ ಅರಣ್ಯಾಧಿಕಾರಿ ಶಕುಂತಲಾ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗುರುರಾಜ ಸಬನೀಸ, ಪಶು ಸಂಗೋಪನಾ ಇಲಾಖೆಯ ಡಾ. ಸುನೀಲ ಬನ್ನಿಗೋಳ, ಹೆಸ್ಕಾಂ ಎಇಇ ಗುಲ್ಜಾರಅಹ್ಮದ, ಶಿರಸ್ತೆದಾರ ಎ.ಎಂ. ಮಂಗಳಗಟ್ಟಿ, ಎಂ.ಎಸ್. ಬಿರಾದಾರ, ಬಸವರಾಜ ಐನಾಪೂರ ಸೇರಿದಂತೆ ಇತರರು ಇದ್ದರು. ದೈಹಿಕ ಶಿಕ್ಷಕ ರವಿ ಅಳ್ನಾವರ ಪಥ ಸಂಚಲನ ಕಾರ್ಯಕ್ರಮ ನಡೆಸಿಕೊಟ್ಟರು. ಮಾಂತೇಶ ಬೆಂತೂರ ಸ್ವಾಗತಿಸಿದರು. ವೈ.ವ್ಹಿ. ಶಿಂಪಿ ನಿರೂಪಿಸಿದರು. ಎಂ.ಡಿ. ಹೊಸಮನಿ ವಂದಿಸಿದರು.

ಪಪಂ ಮತ್ತು ನಾಡಕಚೇರಿಗಳಲ್ಲಿ ತಹಸೀಲ್ದಾರ್‌ ಕೊಚರಗಿ, ಬೆಣಚಿ ಗ್ರಾಪಂನಲ್ಲಿ ಅಧ್ಯಕ್ಷೆ ಗಂಗವ್ವ ಮುಷ್ಟಗಿ ಧ್ವಜಾರೋಹಣ ನೆರವೇರಿಸಿದರು. ಪಿಡಿಒ ನಾಗರಾಜ ಪುಡಕಲಕಟ್ಟಿ, ಸಂದೀಪ ಪಾಟೀಲ, ಮಲ್ಲನಗೌಡ ಪಾಟೀಲ, ಅಲ್ಲಾಭಕ್ಷ ಬಡಗಿ, ಉಮೇಶ ಕದಂ ಇದ್ದರು.