ಸಾರಾಂಶ
19 ವರ್ಷದೊಳಗಿನ ಟಿ20 ಕ್ರಿಕೆಟ್ ಪಂದ್ಯಾಕೂಟದಲ್ಲಿ ವಿದ್ಯಾರ್ಥಿ ಸನಿತ್ ಒಡಿಶಾ ತಂಡವನ್ನು ಪ್ರತಿನಿಧಿಸಿ ತಂಡವು ಚಾಂಪಿಯನ್ ಪಟ್ಟ ಅಲಂಕಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಕುಂದಾಪುರ
ಇಂಡಿಯನ್ ಡೆಫ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಆಂಧ್ರಪ್ರದೇಶದ ಅನಂತಪುರದಲ್ಲಿ ನವೆಂಬರ್ 25 ರಿಂದ 28 ರವರೆಗೆ ನಡೆದ ರಾಷ್ಟ್ರೀಯ ಮಟ್ಟದ 19 ವರ್ಷದೊಳಗಿನ ಟಿ 20 ಕ್ರಿಕೆಟ್ ಪಂದ್ಯ ಕೂಟದಲ್ಲಿ ಇಲ್ಲಿನ ಐ. ಎಂ. ಜೆ. ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಸನಿತ್ ಶೆಟ್ಟಿ ಒಡಿಶಾ ತಂಡವನ್ನು ಪ್ರತಿನಿಧಿಸಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಪಂದ್ಯಕೂಟದ ಫೈನಲ್ ನಲ್ಲಿ ಒಡಿಶಾ ತಂಡವು ಹರಿಯಾಣ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ಸನಿತ್ ಶೆಟ್ಟಿ ‘ಸರಣಿ ಶ್ರೇಷ್ಠ’, ಫೈನಲ್ ನಲ್ಲಿ ‘ಪಂದ್ಯ ಶ್ರೇಷ್ಠ’ ಹಾಗೂ ‘ಉತ್ತಮ ದಾಂಡಿಗ’ ವೈಯುಕ್ತಿಕ ಪ್ರಶಸ್ತಿಗಳನ್ನು ಗಳಿಸಿದರು.
ಅವರು ಕಳೆದ ಬಾರಿಯೂ ರಾಷ್ಟ್ರೀಯ ಮಟ್ಟದ ‘ಟಿ - 20’ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ತೋರಿದ್ದರು.ತಮ್ಮ ಸಂಸ್ಥೆಯ ಈ ಹಮ್ಮೆಯ ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.