ಭಗವದ್ಗೀತೆ ಪಠಣ, ಅಧ್ಯಯನ ನಿರಂತರವಾಗಿರಲಿ

| Published : Dec 12 2024, 12:34 AM IST

ಸಾರಾಂಶ

ಭಗವಂತನ ನಾಮಸ್ಮರಣೆ ಪೂಜೆ, ಪುನಸ್ಕಾರ, ಹೋಮ, ಯಜ್ಞ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಂದ ನಾವು ದೇವರ ಅನುಗ್ರಹವನ್ನು ಪಡೆಯಬಹುದು. ಇಡೀ ವಿಶ್ವದಲ್ಲೇ ಹೆಚ್ಚು ಸಂಸ್ಕಾರ, ಸಂಸ್ಕೃತಿ ಹೊಂದಿದ ದೇಶ ಭಾರತ. ಭಾರತದಲ್ಲಿ ಮಾತ್ರ ನಾವು ಆಧ್ಯಾತ್ಮ ಬೋಧನೆ ಮತ್ತು ದೈವಶಕ್ತಿಯಿಂದ ದೇವರನ್ನು ಕಾಣುವ ಪ್ರಯತ್ನ ಮಾಡುತ್ತೇವೆ. ಈ ಸಾರ್ಥಕತೆಯನ್ನು ಪಡೆಯಲು ಭಗವದ್ಗೀತೆ ಪಠಣ ಮತ್ತು ಅದರ ಅಧ್ಯಯನ ನಿರಂತರವಾಗಿರಬೇಕೆಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಅನಂತರಾಮಗೌತಮ್ ತಿಳಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಅವರು, ಬುಧವಾರ ಹಳೇಟೌನ್‌ನ ಶ್ರೀರಾಮಮಂದಿರದಲ್ಲಿ ತಾಲೂಕು ಬ್ರಾಹ್ಮಣ ಸಂಘ, ವಿಶ್ವಗಾಯತ್ರಿ ಮಹಿಳಾ ಮಂಡಳಿ ಹಾಗೂ ಭಗವದ್ಗೀತೆ ಅಭಿಯಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗೀತಾಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀಕೃಷ್ಣಪರಮಾತ್ಮ ಭಗವಂತನ ಅವತಾರ. ಮಹಾಭಾರತ ಯುದ್ಧಲ್ಲಿ ಅರ್ಜುನನ ರಥದ ಸಾರಥಿಯಾಗಿದ್ದ ಶ್ರೀಕೃಷ್ಣ ಅವನು ಯುದ್ಧಮಾಡಲು ನಿರಾಕರಿಸಿದ ಸಂದರ್ಭದಲ್ಲಿ ಅವನಿಗೆ ವಿಶ್ವರೂಪ ತೋರಿಸಿ ಧಾರ್ಮಿಕ ಶ್ರದ್ದೆಯನ್ನು ಜಾಗೃತಗೊಳಿಸಿ ಯುದ್ಧವನ್ನು ಅವನಿಂದಲೇ ಮಾಡಿಸಿ ಧರ್ಮವನ್ನು ಸಂಕಕ್ಷಿಸಿದ. ಕೃಷ್ಣನ ವಿಶ್ವರೂಪ ಸಂದರ್ಭದಲ್ಲಿ ಅರ್ಜುನನಿಗೆ ಬೋಧಿಸಿದ ಹಲವಾರು ವೈವಿಧ್ಯಮಯ ವಿಚಾರಗಳು ಭಗವದ್ಗೀತೆಯಲ್ಲಿವೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ದತ್ತಪಾದುಕ ಔದುಂರ ಕ್ಷೇತ್ರದ ಧರ್ಮದರ್ಶಿ ದತ್ತರಾಜ್, ಭಗವದ್ಗೀತೆ ಇಂದು ವಿಶ್ವದ ಎಲ್ಲಾ ಭಾಷೆಗಳಲ್ಲಿ ಲಭ್ಯವಿದೆ. ಗೀತೆಯ ಜೊತೆಗೆ ಅದರ ಅರ್ಥವನ್ನು ಸಹ ಮುದ್ರಣದ ಮೂಲಕ ಎಲ್ಲರಿಗೂ ದೊರೆಯುತ್ತಿದೆ. ನಮಗೆ ಸಂಕಷ್ಟ ಒದಗಿಬಂದಾಗ ಮಾತ್ರ ನಾವು ಕೃಷ್ಣ ಮೊರೆಹೋಗುತ್ತೇವೆ. ಭಗವದ್ಗೀತೆಯ ಪ್ರತಿಯೊಂದು ಪದದಲ್ಲೂ ಮಾನವೀಯ ಬದುಕನ್ನು ಅರ್ಥಪೂರ್ಣಗೊಳಿಸುವ ವಾತಾವರಣವಿದೆ. ಭಗವದ್ಗೀತೆ ಪಠಣದಿಂದ ನಮ್ಮೆಲ್ಲರ ಬದುಕು ಸಾರ್ಥಕವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎಂ. ವಾಸುದೇವರಾವ್, ವಿಪ್ರಗಾಯಿತ್ರಿ ಮಹಿಳಾ ಮಂಡಳಿ ಗೌರವಾಧ್ಯಕ್ಷ ಜಯಲಕ್ಷ್ಮೀ, ಅಧ್ಯಕ್ಷೆ ಸೀತಾಲಕ್ಷ್ಮೀ ವಾದಿರಾಜ್, ಸಂಘದ ಕಾರ್ಯದರ್ಶಿ ಎಂ. ಸತ್ಯನಾರಾಯಣರಾವ್, ಖಜಾಂಚಿ ಜಿ. ಕೃಷ್ಣಮೂರ್ತಿ, ನಿರ್ದೇಶಕರಾದ ಸಿ.ಎಸ್. ಗೋಪಿನಾಥ, ಗಂಗಾಧರ, ಪ್ರದೀಪ್‌ಶರ್ಮ, ಜೆ.ಎಸ್. ಶ್ರೀನಾಥಶರ್ಮ, ಎಸ್.ವೈ. ಮುರುಳಿಕೃಷ್ಣ, ಶೈಲಜಾ ಸುಬ್ರಮಣ್ಯ, ಲಕ್ಷ್ಮೀಶ್ರೀವತ್ಸ, ಶಾಂತಮ್ಮಸುಬ್ಬರಾವ್, ಮಾಜಿ ಅಧ್ಯಕ್ಷ ಸಿ.ವೈ. ತ್ಯಾಗರಾಜ್, ಎಂ. ಸುಬ್ಬರಾವ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಭಗವಾನ್ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು.