ಬೇಡ ಜಂಗಮರ ಸಮಾಜ ಸೇವೆ ಶ್ಲಾಘನೀಯ

| Published : Jul 29 2024, 12:51 AM IST

ಸಾರಾಂಶ

ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಪ್ರತಿಭಾ ಪುರಸ್ಕಾರ ಮತ್ತು ಶಿಷ್ಯ ವೇತನ ವಿತರಣಾ ಸಮಾರಂಭವನ್ನು ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಿಕ್ಷೆ ಬೇಡಿ ಪ್ರತಿಭಾವಂತ ಮಕ್ಕಳಿಗೆ ಆಸರೆಯಾಗುವ ಬೇಡ ಜಂಗಮ ಸಮಾಜದ ಸೇವೆ ಶ್ಲಾಘನೀಯ ಎಂದು ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ಮತ್ತು ತಾಲೂಕು ಬೇಡ ಜಂಗಮ ಸಮಾಜಗಳು ಚಿತ್ರದುರ್ಗ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪ್ರತಿಭಾ ಪುರಸ್ಕಾರ ಮತ್ತು ಶಿಷ್ಯ ವೇತನ ವಿತರಣಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಪ್ರತಿಭಾ ಪುರಸ್ಕಾರ ಮಾಡುವವರೂ ಶ್ರೀಮಂತರಲ್ಲ, ತೆಗೆದುಕೊಳ್ಳುವವರೂ ಶ್ರೀಮಂತರಲ್ಲ. ಜಂಗಮತ್ವದ ಸಂಸ್ಕಾರದಿಂದ ಜಂಗಮರನ್ನು ಗುರುಸ್ಥಾನದಲ್ಲಿಟ್ಟ ಕೀರ್ತಿ ಸಮಸ್ತ ಸಮುದಾಯರಿಗೆ ಸಲ್ಲುತ್ತದೆ ಎಂದರು.

ಜಂಗಮರ ಸಂಸ್ಕಾರವನ್ನು ಗೌರವಿಸುವ ಪೂಜ್ಯಭಾವನೆ ಹೊಂದಬೇಕು. ಸಮಾಜದ ಋಣ ನಮ್ಮ ಮೇಲಿದೆ ಸಮಾಜದವರು ನಮ್ಮನ್ನು ಜೊತೆಮಾಡಿಕೊಂಡು ಮುಂದೆ ಸಾಗುತ್ತಾರೆ, ಗೌರವಿಸುತ್ತಾರೆ ಎಂಬ ಜಯದೇವ ಜಗದ್ಗುರುಗಳ ವಾಣಿಯಂತೆ ಸರ್ವರಿಗೂ ಸಮಪಾಲು ಸಮಬಾಳು ಎಂಬಂತೆ ಒಟ್ಟಾಗಿ ಕಾಯಕ ಮಾಡಿ ನೆಮ್ಮದಿಯಿಂದ ಆರೋಗ್ಯವಂತರಾಗಿ ಬಾಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಗುರುವಿನ ಸ್ಥಾನದಲ್ಲಿರುವ ಸಮಾಜ ಬೇಡ ಜಂಗಮ ಸಮಾಜ. ವಿದ್ಯೆ ಎಂಬ ಚೈತನ್ಯವನ್ನು ಹುಟ್ಟಿನಿಂದಲೇ ಬೆಳೆಸಿಕೊಂಡು ಬಂದಿದೆ. ಪ್ರತಿಯೊಬ್ಬರ ಸಾಧನೆಯ ಹಿಂದೆ ಜಂಗಮ ಸಮಾಜದ ಪರಿಶ್ರಮವಿದೆ. ಅಂಕಪಟ್ಟಿ ಪಡೆದ ನಂತರದ ಜೀವನದಲ್ಲಿ ಸಾಧಿಸುವುದು ನಿಜವಾದ ಅಂಕಪಟ್ಟಿಯಾಗಿದೆ. ಜೀವನದ ಅನುಭವದ ಅಂಕಪಟ್ಟಿಯ ಬಗ್ಗೆ ಉತ್ತಮ ನಿರೀಕ್ಷೆ ಕಾಣಬೇಕು ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಜಂಗಮ ಸಂಸ್ಕೃತಿಯನ್ನು ಗೌರವಿಸುವುದು ಕಡಿಮೆಯಾಗುತ್ತಿದೆ. ಸ್ವಾತಂತ್ರ್ಯಪೂರ್ವದಿಂದಲೂ ಮಠಮಾನ್ಯಗಳು ವಿದ್ಯಾದಾನ ಮಾಡುತ್ತಾ ಬಂದಿದೆ. ದೇಶ ವಿದೇಶಗಳಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಹಲವಾರು ಅನುದಾನ ಪ್ರೋತ್ಸಾಹದ ಮಾರ್ಗಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ತಂದೆ-ತಾಯಿಯರನ್ನು ಗೌರವಿಸುವ ಮತ್ತು ಪ್ರೀತಿಸುವ ಗುಣಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಜಂಗಮರು ನಿತ್ಯವೂ ಚಲನಶೀಲರು. ವಿದ್ಯೆ, ದಾಸೋಹದ ಪರಿಕಲ್ಪನೆಯನ್ನು ನಾಡಿಗೇ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಬೇಡ ಜಂಗಮ ಸಮಾಜದ ಜಿಲ್ಲಾದ್ಯಕ್ಷ ಸೋಮಶೇಖರ ಮಂಡಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬೇಡ ಜಂಗಮ ಸಮಾಜದ ಕಾರ್ಯಾಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಅಖಿಲ ಭಾರತ ಬೇಡ ಜಂಗಮ ಸಮಾಜದ ಕಾರ್ಯಧ್ಯಕ್ಷ ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್, ಖಜಾಂಚಿ ಕೆ.ಎಸ್.ಶಿವನಗೌಡ್ರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಜೆ.ಶಿವಪ್ರಕಾಶ್, ಹಿರಿಯರಾದ ಕರಿಸಿದ್ದಯ್ಯ, ಸೋಮಶೇಖರಯ್ಯ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ 21 ಎಸ್‌ಎಸ್‌ಎಲ್‌ಸಿ, 18 ಪಿಯುಸಿ, 03 ಪಿಎಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳಿಗೆ ಹಾಗೂ ಮೂವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.