ವಸ್ತುಗಳ ಗುಣಮಟ್ಟ ಪರಿಶೀಲಿಸಿ ಖರೀದಿಸಿ

| Published : Mar 23 2024, 01:05 AM IST / Updated: Mar 23 2024, 01:06 AM IST

ಸಾರಾಂಶ

ಡಿಜಿಟಲ್ ವ್ಯವಹಾರದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವಾಗ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಪಡೆಯುವಾಗ ಶೋಷಣೆ, ಅನ್ಯಾಯವಾದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ .

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಸ್ತುಗಳನ್ನು ಖರೀದಿಸುವಾಗ ಅವುಗಳ ಗುಣಮಟ್ಟ, ಪ್ರಮಾಣ, ಯೋಗ್ಯ ಬೆಲೆ ಇವುಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ, ಕಾನೂನು ಮಾಪನಶಾಸ್ತ್ರ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಹಕರ ಹಕ್ಕುಗಳ ಬಗ್ಗೆ ಮಹತ್ವವನ್ನು ಸಾರುವ ದಿನ ಇದಾಗಿದೆ. ಈ ವರ್ಷ ಗ್ರಾಹಕರಿಗೋಸ್ಕರ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ನಾವು ಕೊಟ್ಟ ಹಣಕ್ಕೆ ವಸ್ತು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ವ್ಯವಹಾರ, ಸೇವೆಯಲ್ಲಿ ಅನ್ಯಾಯವಾದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ. ಶಾಲಾ- ಕಾಲೇಜುಗಳಲ್ಲಿ ವಸ್ತುಗಳ ಗುಣಮಟ್ಟ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಜಾಗೃತಿಯ ಕರಪತ್ರಗಳನ್ನು ಬಿಡುಗಡಗೊಳಿಸಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಗ್ರಾಹಕ ವ್ಯವಹರಿಸುವಾಗ ಜಾಗೃತಿ ವಹಿಸುವುದು ಅಗತ್ಯವಾಗಿದೆ. ಡಿಜಿಟಲ್ ವ್ಯವಹಾರದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವಾಗ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಪಡೆಯುವಾಗ ಶೋಷಣೆ, ಅನ್ಯಾಯವಾದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ವೈ.ಬಸಾಪೂರ ಮಾತನಾಡಿ, ವ್ಯಾಪಾರ ಮತ್ತು ಗ್ರಾಹಕರ ನಡುವಿನ ಮಧ್ಯಸ್ಥಗಾರಿಕೆಯಾಗಿ ಗ್ರಾಹಕರ ವೇದಿಕೆ ಕೆಲಸ ಮಾಡುತ್ತಿದೆ. ವ್ಯಾಪಾರಸ್ಥ ಗ್ರಾಹಕರಿಗೆ ಮೋಸ ಮಾಡಿದಲ್ಲಿ ಅವರ ವಿರುದ್ಧ ದೂರು ನೀಡಲು ಮುಂದಾಗಬೇಕು. ಅಂದಾಗ ಮಾತ್ರ ಮೋಸ ಮಾಡುವುದನ್ನು ತಡೆಯಬಹುದಾಗಿದೆ. ಗ್ರಾಹಕರು ಆಯೋಗದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಪಿ.ಆರ್‌. ಬಡಿಗೇರ ಮತ್ತು ಪೊಲೀಸ್ ಇನ್ಸಪೆಕ್ಟರ್‌ ಎಂ.ನಾಗರಡ್ಡಿ ಮಾತನಾಡಿ, ಪ್ರತಿ ವ್ಯಕ್ತಿ ಗ್ರಾಹಕರಾಗಿರುತ್ತಾನೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಆನ್‌ಲೈನ್‌ ವ್ಯವಹಾರದಲ್ಲಿ ಮೋಸ ಹೆಚ್ಚುತ್ತಿದೆ. ಎಚ್ಚರಿಕೆಯಿಂದ ವ್ಯವಹಾರ ಮಾಡಲು ಜಾಗೃತಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಕಮಲ ಕಿಶೋರ ಜೋಶಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಡಿ.ಪೂಜಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಕ ರಾಜಶೇಖರ ಪಟ್ಟಣಶೆಟ್ಟಿ, ಆಹಾರ ಗುಣಮಟ್ಟದ ಇಲಾಖೆ ಅಧಿಕಾರಿ ಡಾ.ವಿಜಯ ಕಂಠಿ ಸೇರಿದಂತೆ ಇತರರು ಇದ್ದರು. ಪ್ರಾರಂಭದಲ್ಲಿ ವಿವಿಧ ಇಲಾಖೆ ಸಂಸ್ಥೆಗಳಿಂದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.