ಡಿಸಿಸಿ ಬ್ಯಾಂಕಿಗೆ ₹36.75 ಕೋಟಿ ಲಾಭ

| Published : Sep 09 2025, 01:00 AM IST

ಸಾರಾಂಶ

ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 2024-25ನೇ ಸಾಲಿನಲ್ಲಿ 36.75 ಕೋಟಿ ರು. ಲಾಭ ಗಳಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

ಶಿವಮೊಗ್ಗ: ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 2024-25ನೇ ಸಾಲಿನಲ್ಲಿ 36.75 ಕೋಟಿ ರು. ಲಾಭ ಗಳಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಸ್ಥಾಪನೆಗೊಂಡು 72 ವರ್ಷ ಕಳೆದಿದ್ದು, 73ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಬ್ಯಾಂಕಿನ ಇತಿಹಾಸದಲ್ಲಿಯೇ ಅತಿ ಹೆಚ್ಚು ಲಾಭ ಗಳಿಸಿದ ಕೀರ್ತಿ ನಮಗಿದೆ. ಇದನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಹೇಳಿದರು.

ಇದರ ಜೊತೆಗೆ ಅಪೆಕ್ಸ್ ಬ್ಯಾಂಕ್ ಪ್ರಧಾನ ಮಾಡುವ ಉತ್ತಮ ಡಿಸಿಸಿ ಬ್ಯಾಂಕ್ ಪ್ರಶಸ್ತಿಯನ್ನು ನಾವು ಪಡೆದುಕೊಂಡಿದ್ದೇವೆ. ಈಗಾಗಲೇ ಈ ಪ್ರಶಸ್ತಿಯನ್ನು ಆಗಸ್ಟ್ ತಿಂಗಳಲ್ಲಿಯೇ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೀಡಲಾಗಿದೆ. ಇದಕ್ಕೆ ಬ್ಯಾಂಕಿನ ಎಲ್ಲಾ ಸದಸ್ಯರ, ಗ್ರಾಹಕರೇ ಕಾರಣರಾಗಿದ್ದಾರೆ ಎಂದರು. ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 1690.17 ಕೋಟಿ ರು. ಠೇವಣಿ ಸಂಗ್ರಹಿಸಿದೆ. ಮುಂದಿನ ಸಾಲಿಗೆ 2000 ಕೋಟಿ ರು. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಒಟ್ಟಾರೆ 3521.08 ಕೋಟಿ ವಾರ್ಷಿಕ ವ್ಯವಹಾರ ನಡೆದಿದೆ. ಇದು ನಬಾರ್ಡಿನ ಪರಿವೀಕ್ಷಣಾ ವರದಿಯಲ್ಲಿಯೇ ‘ಎ’ದರ್ಜೆ ಪಡೆದಂತ್ತಾಗಿದೆ. ಒಟ್ಟು 2,67,156 ಗ್ರಾಹಕರಿದ್ದು 1,41,454 ಠೇವಣಿದಾರರಿದ್ದಾರೆ. ಅದರಲ್ಲಿ 1,25,702 ಜನ ಗ್ರಾಹಕರು ಸಾಲ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.ನಬಾರ್ಡಿನ ಪುನರ್ಧನ ಸೌಲಭ್ಯ ಈಗಾಗಲೇ ಸಾಕಷ್ಟು ಕಡಿತಗೊಂಡಿದೆ. ಕೇವಲ ಶೇ.10ರಷ್ಟು ಮಾತ್ರ ನೀಡಲಾಗುತ್ತಿದೆ. ಮುಂದಿನ ವರ್ಷ ನಿಲ್ಲಿಸುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲಾ ಬ್ಯಾಂಕುಗಳು ಸ್ವಾಯತ್ತತೆ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇದರ ಮಧ್ಯೆಯೂ ಕೂಡ 1,08,500 ರೈತರಿಗೆ 1206.60 ಕೋಟಿ ರು. ಬೆಳೆ ಸಾಲ ನೀಡಲಾಗಿದೆ. ರೈತರ ಸಾಲಕ್ಕೆ ಈಗ ಹೊಸದಾಗಿ ಯೋಜನೆಯೊಂದನ್ನು ರೂಪಿಸಿದ್ದು, 1 ಲಕ್ಷ ರು. ಸಾಲಕ್ಕೆ 720 ರು. ವಿಮೆ ಕಟ್ಟಬೇಕು. ಆಕಸ್ಮಾತ್ ಸಾಲ ಪಡೆದವರು ತೀರಿಹೋದರೆ ಈ ಸಾಲ ಕಟ್ಟುವ ಅವಶ್ಯಕತೆ ಇಲ್ಲ. ವಿಮೆ ಇಲ್ಲದಿದ್ದರೆ ಅವರ ಮನೆಯವರು ಕಟ್ಟಬೇಕಾಗುತ್ತಿತ್ತು. ಈ ವಿಮಾ ಯೋಜನೆ ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.ಕೃಷಿಯೇತರ ಸಾಲಗಳಿಂದ ಬ್ಯಾಂಕಿಗೆ ಹೆಚ್ಚು ಲಾಭವಾಗುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕಿನ ಶಾಖೆಗಳ ಮೂಲಕ 17,202 ವ್ಯಕ್ತಿಗಳಿಗೆ 771.12 ಕೋಟಿ ರು. ಸಾಲ ನೀಡಲಾಗಿದೆ. ಜಿಲ್ಲೆಯ ಒಟ್ಟು 542 ಹಾಲು ಉತ್ಪಾದಕರ ಸಂಘಗಳ ಖಾತೆಯನ್ನು ಬ್ಯಾಂಕಿನಲ್ಲಿ ತೆರೆಯಲಾಗಿದೆ. ಪಶುಸಂಗೋಪನೆಯ ಉದ್ದೇಶಕ್ಕಾಗಿ ಹಸು, ಎಮ್ಮೆಯನ್ನು ಕೊಳ್ಳಲು 80 ಸಾವಿರದಂತೆ ಎರಡು ಕಂತುಗಳಲ್ಲಿ 1.60 ಲಕ್ಷ ರು. ಸಾಲವನ್ನು ನೀಡಲಾಗುವುದು. ಇದು ಶೇ.3ರಷ್ಟು ಬಡ್ಡಿ ಇರುತ್ತದೆ ಎಂದರು.ಆಧುನಿಕತೆಗೆ ತಕ್ಕಂತೆ ಬ್ಯಾಂಕಿನ ವ್ಯವಹಾರಗಳು ಕೂಡ ಬದಲಾವಣೆಯಾಗುತ್ತಿದ್ದು, ಇದೀಗ ರೈತರ ಹಾಗೂ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಯೋಜನೆಯನ್ನು ಮುಟ್ಟಿಸಲಾಗುವುದು. ಇದಕ್ಕಾಗಿ ಮೊಬೈಲ್ ವ್ಯಾನ್‌ನಲ್ಲಿ ಎಟಿಎಂ ಬಳಸಲಾಗಿದೆ. ಈ ವ್ಯಾನ್ ಹಳ್ಳಿಗಳಲ್ಲಿ ಸಂಚರಿಸುತ್ತದೆ. ಒಂದು ವ್ಯಾನಿನ ಜೊತೆಗೆ ಈಗ ಮತ್ತೊಂದು ವ್ಯಾನನ್ನು ನೀಡಲಾಗುವುದು. ಇದರ ಜೊತೆಗೆ ಬ್ಯಾಂಕಿಂಗ್ ಮೊಬೈಲ್ ಆ್ಯಪನ್ನು ಬಿಡುಗಡೆ ಮಾಡಲಾಗುವುದು. ಇದರಿಂದ ಗ್ರಾಹಕರು ತಮ್ಮ ವ್ಯವಹಾರಗಳನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಮಾಡಬಹುದಾಗಿದೆ. ಇದರ ಜೊತೆಗೆ ನೆಫ್ಟ್ ಮತ್ತು ಆರ್‌ಟಿಜಿಎಸ್ ವ್ಯವಹಾರಗಳನ್ನು ಕೂಡ ಮಾಡಬಹುದಾಗಿದೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕಿನಲ್ಲಿ ಪ್ರಸ್ತುತ 31 ಶಾಖೆಗಳಿವೆ. ಅದನ್ನು ಬರುವ ದಸರಾದಲ್ಲಿ 5 ಹೊಸ ಶಾಖೆಗಳನ್ನು ಬಾರಂದೂರು, ನಗರ, ತ್ಯಾಗರ್ತಿ, ತೀರ್ಥಹಳ್ಳಿ, ಗಾಜನೂರಿನಲ್ಲಿ ಆರಂಭಿಸಲಾಗುವುದು. ಒಟ್ಟು 50 ಶಾಖೆಗಳನ್ನು ವಿಸ್ತರಿಸಲಾಗುವುದು. ಈಗಾಗಲೇ 36 ಇದ್ದು ಇನ್ನೂ 14 ಶಾಖೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.ಸರ್ಕಾರದ ಏಳನೇ ವೇತನ ಆಯೋಗವನ್ನು ಮೊದಲ ಬಾರಿಗೆ ಡಿಸಿಸಿ ಬ್ಯಾಂಕಿನ ನೌಕರರಿಗೆ ಜಾರಿ ಮಾಡಲಾಗಿದೆ. ಹಾಗಾಗಿ ಸರ್ಕಾರದ ಉದ್ದೇಶವನ್ನು ಕೂಡ ನಾವು ಈಡೇರಿಸುತ್ತಿದ್ದೇವೆ. ಇದರ ಜೊತೆಗೆ ಸರ್ಕಾರದ ಷೇರುಗಳನ್ನು ಕೂಡ ವಾಪಾಸ್ಸು ಮಾಡಲಾಗುವುದು. ಸರ್ಕಾರದ ಹಸ್ತಕ್ಷೇಪ ಸಹಕಾರಿ ಕ್ಷೇತ್ರಕ್ಕೆ ಇರಬಾರದು ಎಂಬ ಉದ್ದೇಶ ನಮ್ಮದು ಎಂದರು.ಬ್ಯಾಂಕಿನ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ಸೆ.10ರಂದು ಬಂಜಾರ ಭವನದಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಉತ್ತಮ ಸಹಕಾರ ಸಂಘಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಮಹಾಲಿಂಗಶಾಸ್ತ್ರೀ, ಜಿ.ಎನ್.ಸುಧೀರ್, ಬಸವರಾಜ್, ಕೆ.ಪಿ.ದುಗ್ಗಪ್ಪಗೌಡರು, ಚಂದ್ರಶೇಖರ್, ಪರಮೇಶ್ವರ್, ಎಚ್.ಎಸ್.ರವೀಂದ್ರ, ಕೆ.ಪಿ.ರುದ್ರೇಗೌಡ, ಎಂ.ಡಿ.ರಾಜಣ್ಣರೆಡ್ಡಿ ಉಪಸ್ಥಿತರಿದ್ದರು.