ಶಿಕಾರಿಪುರ: ಪಟ್ಟಣದ ಪಿಜಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಬಾಲಕಿಯ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸಿ ನ್ಯಾಯ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಬುಧವಾರ ಬಣಜಾರ ಸಮಾಜದ ನೂರಾರು ಜನತೆ ತಾಲೂಕು ಕಚೇರಿ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿದರು.ಈ ಸಂದರ್ಭ ಮಾತನಾಡಿದ ಸಮುದಾಯದ ಮುಖಂಡರು ಸಂಗೀತಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ದಿಟ್ಟ ನಿರ್ಧಾರ ಹೊಂದಿರುವ ಬಾಲಕಿಯಲ್ಲ, ಆಕೆ ತನ್ನ ಕುಟುಂಬದ ನಿರ್ವಹಣೆಗಾಗಿ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ. ಆದರೆ ಪೊಲೀಸ್ ಠಾಣೆಯಲ್ಲಿ ಬಂಧಿತ ಆರೋಪಿಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದಾಗಿ ಮಾಹಿತಿ ನೀಡಿ ತನಿಖೆಯ ಹಾದಿ ತಪ್ಪಿಸುವ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು. ಬಾಲಕಿಯ ಮೃತ ದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿಕೊಂಡು ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಮಾವಿನ ಗುಂಡಿಯಲ್ಲಿ ಎಸೆಯಲಾಗಿದೆ ಎಂಬ ಮಾಹಿತಿಯನ್ನು ಆರೋಪಿಗಳು ಒಪ್ಪಿಕೊಂಡಿದ್ದು ,ಈ ತನಿಖೆ ಎಸ್.ಐ.ಟಿ ಗೆ ವಹಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ತರಲಘಟ್ಟ ತಾಂಡಾದಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ ಅಪ್ರಾಪ್ತ ಬಾಲಕಿ ಸಂಗೀತ (16) ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಅನಾರೋಗ್ಯ ಪೀಡಿತ ತಂದೆ ಪರಮೇಶ್ ನಾಯ್ಕ್ ಯೋಗ ಕ್ಷೇಮಕ್ಕಾಗಿ ಹಾಗೂ ಕುಟುಂಬದ ನಿರ್ವಹಣೆಗಾಗಿ ಪಟ್ಟಣದ ಪಿಜಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಕೆಲಸಕ್ಕಿದ್ದ ಬಾಲಕಿಯು ಇದ್ದಕ್ಕಿದ್ದಂತೆ ಕಳೆದ ವರ್ಷ ನಾಪತ್ತೆಯಾಗಿದ್ದು ಪೋಷಕರು ಕಳೆದ ಶುಕ್ರವಾರ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಹೊಸ ತಿರುವು ಕಂಡಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ? ಎಂಬ ದಟ್ಟ ಅನುಮಾನದ ಹಿನ್ನೆಲೆಯಲ್ಲಿ ಬಂಜಾರ ಸಮಾಜದ ಮುಖಂಡರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತನಿಖೆ ಚುರುಕುಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡ ರಮೇಶ್ ನಾಯ್ಕ, ಬಂಗಾರಿನಾಯ್ಕ,ರಾಘವೇಂದ್ರನಾಯ್ಕ, ಜಯಾನಾಯ್ಕ ಸಹಿತ ಹಲವರು ಹಾಜರಿದ್ದರು.
ಪಿಜಿ ಖಾಲಿ ಮಾಡಿದ ಹೆಣ್ಣುಮಕ್ಕಳುಘಟನೆಯ ಹಿನ್ನೆಲೆಯಲ್ಲಿ ಪಿಜಿಗೆ ಬಾಗಿಲು ಹಾಕಿದ ವಿಷಯ ತಿಳಿದ ಮಹಿಳೆಯರು ಪೊಲೀಸ್ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಬೀಗ ಒಡೆದು ಪಿಜಿಯಲಿದ್ದ ಹೆಣ್ಣು ಮಕ್ಕಳನ್ನು ಅವರ ಸ್ವಂತ ಊರುಗಳಿಗೆ ಕಳಿಸಿದ್ದಾರೆ. ಇನ್ನು ಕೆಲವರು ಪಟ್ಟಣದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಫೋಟೋ ಕಾಪ್ಟನ್--
ಶಿಕಾರಿಪುರ ಪಟ್ಟಣದ ಪಿಜಿಯಲ್ಲಿ ನಡೆದ ಬಾಲಕಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಎಸ್ ಐ ಟಿ ಗೆ ಒಪ್ಪಿಸಬೇಕೆಂದು ಆಗ್ರಹಿಸಿ ಬುಧವಾರ ಬಂಜಾರ ಸಮಾಜದ ಹಲವು ಮುಖಂಡರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.[ಫೋಟೋ ಫೈಲ್ ನಂ.8 ಕೆ.ಎಸ್.ಕೆ.ಪಿ 3]