ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಕಾಯ್ದೆ ಬಂದಿದ್ದರೂ ಕೂಡ ಮಲತಾಯಿ ಧೋರಣೆ ಮಾಡಿ ನಮಗೆ ಕೊಡುವಂತಹ ಸೌಲಭ್ಯಗಳು ಇದುವರೆಗೂ ಕೂಡ ಸಿಗುತ್ತಿಲ್ಲ. ಕೂಡಲೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಕೆ.ಆರ್. ಪುರಂ ಬಳಿ ಇರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಶುಕ್ರವಾರ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಬ್ಯಾಂಕ್ ಮುಂದೆ ಪ್ರತಿಭಟಿಸಿದರು.ಇದೇ ವೇಳೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಪ್ರಭು ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಅಧಿಕಾರಿಗಳ ಸಂಘ ಮತ್ತು ನಿವೃತ್ತಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಂಟಿ ಕ್ರಿಯಾ ಸಮಿತಿ ಹಾಸನ ವಲಯದಿಂದ ಶುಕ್ರವಾರದಂದು ಪ್ರತಿಭಟನೆ ನಡೆಸಲಾಗುತ್ತಿದ್ದು, ಕಾವೇರಿ ಗ್ರಾಮೀಣ ಬ್ಯಾಂಕ್ ಸ್ಥಾಪನೆಯಾದ ದಿನದಿಂದಲೂ ನಮ್ಮ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡಿಕೊಂಡು ಬರುವ ಮೂಲಕ ಸೌಲಭ್ಯ ಪಡೆದುಕೊಂಡು ಬರಲಾಗುತ್ತಿದೆ. ಕಳೆದ ೨೦ ವರ್ಷಗಳ ಹಿಂದೆಯೇ ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ಕಾಯಿದೆ ಬಂದಿದ್ದರೂ ಕೂಡ ಮಲತಾಯಿ ಧೋರಣೆ ಮಾಡಿ ನಮಗೆ ಕೊಡುವಂತಹ ಸೌಲಭ್ಯಗಳು ಇದುವರೆಗೂ ಕೂಡ ಸಿಗುತ್ತಿಲ್ಲ. ಒಂದು ಕಡೆ ಸರಕಾರದ ವಿರುದ್ಧ ಹೋರಾಟವಾದರೇ ಇನ್ನೊಂದು ಕಡೆ ಮ್ಯಾನೇಜ್ಮೆಂಟ್ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸುಮಾರು ೪೦ ದಶಕಗಳ ನಂತರ ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಲು ಜಂಟಿ ಕ್ರಿಯಾ ಸಮಿತಿ ಆದೇಶ ಕೊಟ್ಟರೂ ನಮಗೆ ಬೆನಿಫಿಟ್ ಕೊಡುತ್ತಿಲ್ಲ ಎಂದು ದೂರಿದರು. ನೂರಕ್ಕೆ ೯೦ ಭಾಗ ಗ್ರಾಮೀಣ ಪ್ರದೇಶಗಳಿಗೆ ನಾವುಗಳು ಸೇವೆಯನ್ನು ಕೊಡುತ್ತಾ ಜನರ ಸೇವೆಯನ್ನು ಮಾಡುತ್ತಿದೆ. ಆದರೂ ಕೂಡ ನಮ್ಮನ್ನು ಯಾವುದಕ್ಕೂ ಪರಿಗಣನೆಗೆ ತೆಗೆದುಕೊಳ್ಳದೇ ಸಾಮಾನ್ಯ ಕೆಲಸಗಾರರಾಗಿ ನಮ್ಮನ್ನು ಉಪಚರಿಸುತ್ತಾ ಅಧಿಕಾರ ದಬ್ಬಾಳಿಕೆ ಮಾಡಿಕೊಂಡು ಬರಲಾಗುತ್ತಿದೆ ಎಂದರು. ಪ್ರಮುಖ ಬೇಡಿಕೆಗಳೆಂದರೇ ಸಿಬಿಎಸ್‌ನಲ್ಲಿ ಇಒಡಿ ಪ್ರಮಾಣೀಕರಣಗಳನ್ನು ತಕ್ಷಣದಿಂದ ನಿಲ್ಲಿಸಬೇಕು. ೧೨ನೇ ದ್ವಿಪಕ್ಷೀಯ ಒಪ್ಪಂದ ಮತ್ತು ೯ನೇ ಜಂಟಿ ಮಸೂದೆಯ ಪ್ರಕಾರ ೨೦೨೪ ಜುಲೈ ೮ರಂದು ಹೊರಡಿಸಿದ ಆದೇಶವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು. ಒಪ್ಪಂದಗಳ ಪ್ರಕಾರ ಎಲ್ಲಾ ಅರ್ಹ ನೌಕರರಿಗೆ ಹೆಚ್ಚುವರಿ ಸಮಯ ಭತ್ಯೆಯನ್ನು ಪಾವತಿಸಬೇಕು. ಮಾನವ ಸಂಪನ್ಮೂಲದ ಸಮಗ್ರ ಮೌಲ್ಯಮಾಪನ ಮತ್ತು ಮಿತ್ರ ಸಮಿತಿಯ ಶಿಫಾರಸುಗಳಂತೆ ಸರಿಯಾದ ಹಾಗೂ ತ್ವರಿತ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದರು.
೨೦೧೯ರಂದು ಹೊರಡಿಸಿದ ಸಿಜಿಐಟಿ ಅವಾರ್ಡ್ ಅನ್ನು ಪ್ರಶ್ನಿಸಿ ನೀಡಿದ ಮೇಲ್ಮನವಿಯನ್ನು ತಕ್ಷಣ ಹಿಂಪಡೆಯಬೇಕು ಮತ್ತು ಕ್ಯಾಶುಯಲ್ ನೌಕರರ ಖಾಯಂ ಮಾಡುವ ಪ್ರಕ್ರಿಯೆ ಪ್ರಾರಂಭಿಸಬೇಕು. ಆರ್.ಎಲ್.ಸಿ. ಎದುರು ಸಭೆಯಲ್ಲಿ ಪ್ರಗತಿಯಲ್ಲಿರುವ ಸಂದರ್ಭದಲ್ಲಿ, ಮಾರ್ಚ್ ೨೦೨೪ರಲ್ಲಿ ಕಡಿತ ಮಾಡಿದ ಸಂರಕ್ಷಿತ ನೌಕರರು ಮತ್ತು ಆಫೀಸ್ ಬೆಯರರ್ಸ್ ಗಳ ವೇತನ ಮರುಪಾವತಿಸಿ. ಕ್ಯಾಶುಯಲ್ ಮತ್ತು ಹೊರಗುತ್ತಿಗೆ ನೌಕರರಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ತಕ್ಷಣ ನೀಡಬೇಕು ಹಾಗೂ ಸಂರಕ್ಷಿತ ನೌಕರರನ್ನು ಮುಖ್ಯ ಕಚೇರಿಗೆ ಅಥವಾ ಸಂಘದ ಆಯ್ಕೆಯ ಸ್ಥಳಕ್ಕೆ ನೇಮಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಯೋಗೀಶ್, ತೇಜಸ್ವಿ, ಸೆಂಟ್ರಲ್ ಕಮಿಟಿ ಜಂಟಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.-----
13ಎಚ್ಎಸ್ಎನ್12 : ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಬ್ನೌಕರರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.