ಚನ್ನಪಟ್ಟಣ: ಹಸಿರಿದ್ದರೆ ಉಸಿರು ಅಭಿಯಾನದಡಿ ಪರಿಸರ ಸಂರಕ್ಷಣೆಗಾಗಿ ಜುಲೈ ೨೧ರಂದು ಮನೆಗೊಂದು ಮರ ದೇಶಕ್ಕೆ ವರ ಘೋಷಣೆಯೊಂದಿಗೆ ಪಟ್ಟಣದಲ್ಲಿ ೨ ಕಿಮೀ ಮ್ಯಾರಾಥಾನ್ ಆಯೋಜಿಸಲಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ತಿಳಿಸಿದರು.

ರೇಷ್ಮೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಟಸ್ಟ್ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರೇಷ್ಮೆಸೀಮೆ ಹಾಗೂ ಚನ್ನಪಟ್ಟಣ ಸಾಮಾಜಿಕ ವಲಯ ಅರಣ್ಯ ಇಲಾಖೆ ಸಹಯೋಗದಲ್ಲಿ ಹಸಿರಿದ್ದರೆ ಉಸಿರು ಅಭಿಯಾನದಡಿ ೧ ಲಕ್ಷ ಗಿಡನೆಟ್ಟು ಪೋಷಿಸುವ ಕಾರ್ಯಕ್ರಮದಡಿ ಪಟ್ಟಣದ ತಟ್ಟೆಕೆರೆಯಲ್ಲಿನ ದಿ ಆಪಲ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಅವರು ಮಾತನಾಡಿದರು.

ಇಂದು ಗಿಡಮರಗಳ ನಾಶವಾಗಿ ಬಿಸಿಲಿನ ತಾಪಮಾನ ಹೆಚ್ಚಾಗಿ ಕೃತಕ ಆಮ್ಲಜನಕ ಸೇವಿಸಿ ಜೀವಿಸುವಂತಾಗಿದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ದೇವಸ್ಥಾನಗಳು, ಸರ್ಕಾರಿ ಜಮೀನು, ಸ್ಮಶಾನ, ರಸ್ತೆ ಬದಿ, ಮನೆ ಮುಂದೆ ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ. ಈ ನಿಟ್ಟಿನಲ್ಲಿ ಜುಲೈ ೨೧ರಂದು ಪಟ್ಟಣದ ಕೋರ್ಟ್‌ನಿಂದ ಶೇರುವಾ ಹೋಟೆಲ್‌ವರೆಗೆ ಹಾಗೂ ಶೇರುವಾ ಹೋಟೆಲ್‌ನಿಂದ ಖಾಸಗಿ ಬಸ್ ನಿಲ್ದಾಣದವರೆಗೆ ೨ ಕಿಮೀ ವ್ಯಾಪ್ತಿಯಲ್ಲಿ ಮನೆಗೊಂದು ಮರ-ದೇಶಕ್ಕೆ ವರ ಘೋಷಣೆಯೊಂದಿಗೆ ತಾಲೂಕಿನ ೫ ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿಗಳಿಂದ ಮ್ಯಾರಾಥಾನ್ ಆಯೋಜಿಸಲಾಗಿದೆ. ನಿಮಗೆ ನೀಡುವ ಗಿಡ ನೆಟ್ಟು ಒಂದು ವರ್ಷ ಪೋಷಿಸಿ, ಮುಂದಿನ ವರ್ಷ ವಿದ್ಯಾರ್ಥಿಗಳನ್ನು ಆ ಮರದ ಮುಂದೆ ಫೋಟೋ ತೆಗೆದು ಅವರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ತಾಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿಜಯರಾಜ್‌ಸಿಂಗ್ ಮಾತನಾಡಿ, ಸರ್ಕಾರ ಪ್ರತಿ ವರ್ಷ ಅರಣ್ಯ ಇಲಾಖೆ ಮೂಲಕ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಅಭಿಯಾನ ಮಾಡುತ್ತಾ ಬಂದಿದೆ. ಆದರೆ ಇಲ್ಲಿ ಶೇ. ೨೫ ರಷ್ಟು ಗಿಡಗಳನ್ನು ಮಾತ್ರ ಉಳಿಸಿಕೊಳ್ಳಲಾಗುತ್ತಿದ್ದು ಉಳಿದ ಗಡಿಗಳು ಜಾನುವಾರುಗಳ ಪಾಲಾಗುತ್ತಿದೆ. ಆದರೆ ಇಂದು ರಮೇಶ್‌ಗೌಡರು ಆರಂಭಿಸಿರುವ ಹಸಿರಿದ್ದರೆ-ಉಸಿರು ಅಭಿಯಾನಕ್ಕೆ ನಮ್ಮ ಇಲಾಖೆ ಸಹಕಾರ ನೀಡುತ್ತಾ ಬೆಂಬಲವಾಗಿ ನಿಲ್ಲುತ್ತದೆ ಎಂದರು ಭರವಸೆ ನೀಡಿದರು.

ದಿ ಆಪಲ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ರೆಹಮತ್ ಉಲ್ಲಾ ಷರೀಫ್ ಮಾತನಾಡಿ, ಗಿಡ ಪಡೆದಿರುವ ವಿದ್ಯಾರ್ಥಿಗಳು ಗಿಡವನ್ನು ಸೂಕ್ತ ಜಾಗದಲ್ಲಿ ನೆಟ್ಟು ಮಕ್ಕಳನ್ನು ಪೋಷಣೆ ಮಾಡುವಂತೆ ಪೋಷಣೆ ಮಾಡಬೇಕು, ಗಿಡದ ಪೋಷಣೆಗೆ ಕೊಂಚ ಸಮಯ ನೀಡಿದರೆ ಅದು ದೊಡ್ಡ ಹೆಮ್ಮರವಾಗಿ ಬೆಳೆದು ನಿಮ್ಮ ಕುಟುಂಬಕ್ಕೆ ನೆರಳು, ಶುದ್ಧಗಾಳಿ ನೀಡುತ್ತದೆ ಎಂದರು.


ಸಾಹಿತಿ ವಿಜಯ ರಾಂಪುರ ಮಾತನಾಡಿ, ನಮ್ಮ ಪೂರ್ವಜರು ೧೦ ವರ್ಷ ಪೋಷಣೆ ಮಾಡಿದ ಮರಗಳು ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ನೆರಳು, ಗಾಳಿ, ಹಣ್ಣು ನೀಡುತ್ತಿವೆ. ಇದೇ ನಿಟ್ಟಿನಲ್ಲಿ ನೀವು ಇಂದು ನೆಟ್ಟು ಪೋಷಣೆ ಮಾಡುವ ಮರಗಳು ಮುಂದಿನ ಪೀಳಿಗೆಗೆ ಶುದ್ಧಗಾಳಿ ನೀಡಿ ಪರಿಸರಕ್ಕೆ ಸುಂದರ ವಾತಾವರಣ ನಿರ್ಮಾಣ ಮಾಡಲಿದೆ. ಈ ನಿಟ್ಟಿನಲ್ಲಿ ನಿಮಗೆ ಕೊಟ್ಟಿರುವ ಗಿಡಗಳನ್ನು ನೆಟ್ಟು ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಿ ಸಮಾಜಕ್ಕೆ ಕೊಡುಗೆ ನೀಡಿ ಎಂದು ಕಿವಿಮಾತು ಹೇಳಿದರು.

ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೀವಾಮೃತ ರಕ್ತನಿಧಿಯ ಲ್ಯಾಬ್ ಚಂದ್ರು ಕುಕ್ಕುಟ ಮಹಾಮಂಡಳಿ ರಾಜ್ಯ ನಿರ್ದೇಶಕ ಡಿ.ಕೆ.ಕಾಂತರಾಜು, ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ಸಮಾಜ ಸೇವಕ ಸಯ್ಯದ್ ಇಕ್ಬಾಲ್, ಸಮಾಜಸೇವಕ ರಘು, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ನಗರಸಭಾ ಸದಸ್ಯ ಮತಿನ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಅರುಣ್‌ಕುಮಾರ್, ಹಾಪ್‌ಕಾಮ್ಸ್ ನಿರ್ದೇಶಕ ಮಳೂರುಪಟ್ಟಣ ರವಿ, ನಗರಸಭಾ ಸದಸ್ಯ ವಾಸೀಲ್‌ಅಲಿಖಾನ್, ಮಾಜಿ ಸದಸ್ಯ ಜೆಸಿಬಿ ಲೋಕೇಶ್ ಇತರರಿದ್ದರು.

ಪೊಟೋ೧೭ಸಿಪಿಟಿ೨: ಚನ್ನಪಟ್ಟಣದ ದಿ ಆಪಲ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಸಿರಿದ್ದರೆ ಉಸಿರು ಅಭಿಯಾನದಡಿ ಸಸಿ ವಿತರಿಸಲಾಯಿತು.