ರಾಮನಗರ: ಕಲ್ಲು ಗಣಿಗಾರಿಕೆ ಟಿಪ್ಪರ್ ಲಾರಿಗಳ ಸಂಚಾರದಿಂದ ವಿಪರೀತ ಧೂಳಿನ ಸಮಸ್ಯೆಯಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಹೆಗ್ಗಡಗೆರೆ ಗ್ರಾಮದ ನಿವಾಸಿಗಳು ಕಳೆದೊಂದು ವಾರದಿಂದ ಲಾರಿಗಳನ್ನು ಅಡ್ಡಗಟ್ಟಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ತಾರಕಕ್ಕೇರಿದ್ದು, ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಡದಿ ಪುರಸಭೆ ವ್ಯಾಪ್ತಿಯ ಹೆಗ್ಗಡಗೆರೆ ಗ್ರಾಮದಲ್ಲಿ ವಿಪರೀತ ಲಾರಿಗಳ ಓಡಾಟದಿಂದ ವಿಪರೀತ ಧೂಳಿನ ಸಮಸ್ಯೆ ಉಂಟಾಗಿದ್ದು, ಸಮಸ್ಯೆಗೆ ನಿಯಂತ್ರಣಕ್ಕೆ ಪರಿಹಾರ ಮಾರ್ಗೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಷರ್ ಮಾಲೀಕರು ಹಾಗೂ ಗ್ರಾಮಸ್ಥರ ನಡುವೆ ನಡೆದ ಸಂಧಾನ ಸಭೆ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಪೊಲೀಸರ ನೆರವು ಪಡೆದ ಕ್ರಷರ್ ಮತ್ತು ಲಾರಿ ಮಾಲೀಕರು ಲಾರಿಗಳನ್ನು ರಸ್ತೆಗಿಳಿಸಿದ ಕಾರಣ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಾಳೆಯಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.
ಹೋರಾಟದ ಹಿನ್ನೆಲೆ ಏನು?ಬಿಡದಿ-ಮುದವಾಡಿ ಮುಖ್ಯರಸ್ತೆಯಲ್ಲಿರುವ ಹೆಗ್ಗಡಗೆರೆ ಗ್ರಾಮದಲ್ಲಿ ಪ್ರತಿದಿನ ಜಲ್ಲಿಕಲ್ಲು ಮತ್ತು ಎಂ-ಸ್ಯಾಂಡ್ ಸಾಗಿಸುವ ಟಿಪ್ಪರ್ ಲಾರಿಗಳು ಎಡೆಬಿಡದೆ ಓಡಾಡುತ್ತಿದ್ದು, ಇದರಿಂದ ಮನೆಗಳಿಗೆ ಯಥೇಚ್ಚವಾಗಿ ಧೂಳು ಹರಡುತ್ತಿದೆ. ಅಲ್ಲದೆ ಹಗಲು-ರಾತ್ರಿ ಬಿಡುವಿಲ್ಲದೆ ಸಂಚರಿಸುವ ಸಾವಿರಾರು ಟಿಪ್ಪರ್ ಲಾರಿಗಳ ಶಬ್ದದಿಂದ ನಿದ್ರಾಭಂಗವಾಗುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ರಸ್ತೆಗಿಳಿದು ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದರು.
ಪ್ರತಿಭಟನೆ ತೀವ್ರಗೊಳ್ಳುವ ಸೂಚನೆ ಅರಿತ ಕ್ರಷರ್ ಹಾಗೂ ಲಾರಿ ಮಾಲಿಕರು ಗ್ರಾಮದ ಕೆಲ ಮುಖ್ಯಸ್ಥರ ಸಮ್ಮುಖದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಗ್ರಾಮಸ್ಥರ ಜತೆಗೆ ಶುಕ್ರವಾರ ಸಂಧಾನ ಸಭೆ ನಡೆಸಿದರು. ಈ ವೇಳೆ ಪ್ರತಿದಿನ ಲಾರಿಗಳ ಮಿತಿಮೀರಿದ ಓಡಾಟದಿಂದ ಹಾಗೂ ಕಲ್ಲು ಗಣಿಗಾರಿಕೆ ಸ್ಫೋಟಕ(ಬ್ಲಾಸ್ಟಿಂಗ್)ಗಳಿಂದ ಗ್ರಾಮದಲ್ಲಿ ಉಂಟಾಗುತ್ತಿರುವ ಧೂಳಿನ ಸಮಸ್ಯೆಗೆ ನಿಯಂತ್ರಣ ತರುವುದು ಹಾಗೂ ರಾತ್ರಿವೇಳೆ ಲಾರಿಗಳ ಸಂಚಾರ ನಿಷೇಧಿಸುವುದು ಸೇರಿದಂತೆ ಕೆಲವು ಷರತ್ತುಗಳನ್ನು ಪಾಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.ಗ್ರಾಮಸ್ಥರ ಷರತ್ತುಗಳೇನು?:
ಪ್ರತಿದಿನ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೯.೩೦ರವರೆಗೆ ಲಾರಿಗಳ ಸಂಚಾರ ಬಂದ್ ಮಾಡಬೇಕು. ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಸಂಜೆ ೩ರಿಂದ ೪.೩೦ವರೆಗೆ ಲಾರಿಗಳ ಓಡಾಟಕ್ಕೆ ಬಿಡವು ಕೊಡಬೇಕು. ೧೦, ೧೨ ಚಕ್ರದ ಟಿಪ್ಪರ್ ಲಾರಿಗಳಿಗೆ ನಿಯಮಿತ ಲೋಡ್ ಕಡ್ಡಾಯಗೊಳಿಸಬೇಕು. ಕಲ್ಲುಗಣಿಗಾರಿಕೆ ಬ್ಲಾಸ್ಟಿಂಗ್ ಶಬ್ದರಹಿತವಾಗಿ ಮಾಡಬೇಕು. ಭರ್ತಿ ಲಾರಿಗಳಿಗೆ ಟಾರ್ಪಲ್ ಅಳವಡಿಕೆ ಕಡ್ಡಾಯಗೊಳಿಸಬೇಕು. ಆರೋಗ್ಯ ತಪಾಸಣೆಗಾಗಿ ಗ್ರಾಮದ ಪ್ರತಿ ಕುಟುಂಬಕ್ಕೂ ವಾರ್ಷಿಕ ಇಂತಿಷ್ಟು ಸಹಾಯಧನ ನೀಡಬೇಕು ಎಂಬ ಷರತ್ತುಗಳನ್ನು ಗ್ರಾಮಸ್ಥರು ಕ್ರಷರ್ ಮಾಲೀಕರ ಮುಂದಿಟ್ಟರು.
ಮಾದಾಪಟ್ಟಣದ ಬಳಿ ಕ್ವಾರಿಯಲ್ಲಿ ಇತ್ತೀಚೆಗೆ ನಡೆದ ಬಂಡೆ ಕುಸಿತ ದುರಂತದ ಹಿನ್ನೆಲೆಯಲ್ಲಿ ಆ ಭಾಗದ ಕ್ರಷರ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವ ಕಾರಣದಿಂದ ಎಂಸ್ಯಾಂಡ್ ಮತ್ತು ಜಲ್ಲಿಕಲ್ಲು ಸಾಗಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಪ್ಪರ್ ಲಾರಿಗಳು ಬಿಡದಿ ಭಾಗಕ್ಕೆ ಬರುತ್ತಿವೆ. ಹಾಗಾಗಿ ಗ್ರಾಮದಲ್ಲಿ ಲಾರಿಗಳ ಓಡಾಟ ಹೆಚ್ಚಾಗಿದ್ದು ಧೂಳಿನ ಸಮಸ್ಯೆಯೂ ಅಧಿಕವಾಗಿದೆ. ಮಾದಾಪಟ್ಟಣದ ಭಾಗದಲ್ಲಿ ಕ್ರಷರ್‌ಗಳು ಪುನಾರಂಭವಾಗುವವರೆಗೆ ಷರತ್ತುಗಳಿಗೆ ಬದ್ಧವಾಗಿರುವುದಾಗಿ ಕ್ರಷರ್ ಮತ್ತು ಲಾರಿಗಳ ಮಾಲೀಕರು ಒಪ್ಪಿಗೆ ಸೂಚಿಸಿದರು.
ಯುಟರ್ನ್ ಹೊಡೆದ ಕ್ರಷರ್ ಮಾಲೀಕರು:ಕ್ರಷರ್ ಮತ್ತು ಲಾರಿ ಮಾಲೀಕರು ಗ್ರಾಮಸ್ಥರ ಬಹುತೇಕ ಷರತ್ತುಗಳನ್ನು ಒಪ್ಪಿಕೊಂಡರಾದರೂ ಗ್ರಾಮದ ಎಲ್ಲಾ ಕುಟುಂಬಕ್ಕೂ ವಾರ್ಷಿಕ ಸಹಾಯಧನ ನೀಡುವ ವಿಚಾರದಲ್ಲಿ ಒಮ್ಮತ ಮೂಡದ ಕಾರಣ ಸಂಧಾನ ವಿಫಲವಾಯಿತು. ಮರುಘಳಿಗೆಯಲ್ಲೇ ಯುಟರ್ನ್ ಹೊಡೆದ ಕ್ರಷರ್ ಮಾಲೀಕರು ಪೊಲೀಸರ ನೆರವಿನಿಂದ ಲಾರಿಗಳ ಸಂಚಾರ ಆರಂಭಿಸಿದರು.
ಲಾರಿಗಳನ್ನು ತಡೆಯಲು ಹೋದ ಗ್ರಾಮಸ್ಥರಿಗೆ ಪೊಲೀಸರು ಅವಕಾಶ ನೀಡದ ಕಾರಣ ಪೊಲೀಸರು ಮತ್ತು ಹೆಗ್ಗಡಗೆರೆ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಗ್ರಾಮಸ್ಥರು ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದರು.ಕೋಟ್............
ಕ್ರಷರ್ ಲಾರಿಗಳ ಓಡಾಟದಿಂದ ಹೆಗ್ಗಡಗೆರೆ ಗ್ರಾಮದಲ್ಲಿ ವಿಪರೀತ ಧೂಳಿನ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿ ಶುಕ್ರವಾರ ಕ್ರಷರ್ ಮತ್ತು ಲಾರಿ ಮಾಲೀಕರ ಸಮ್ಮುಖದಲ್ಲಿ ಸಂಧಾನ ಸಭೆ ಕರೆಯಲಾಗಿತ್ತು. ಷರತ್ತುಗಳನ್ನು ಒಪ್ಪಿಕೊಂಡು ಹೋದ ಸ್ವಲ್ಪ ಹೊತ್ತಿನಲ್ಲೆ ಕ್ರಷರ್ ಮಾಲೀಕರು ಪೊಲೀಸರ ಪವರ್ ಬಳಿಸಿಕೊಂಡು ಉಲ್ಟಾ ಹೊಡೆದಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ.-ಎಚ್.ನಾಗರಾಜು, ಪುರಸಭೆ ಸದಸ್ಯರು, ಹೆಗ್ಗಡಗೆರೆ
ಪೊಟೋ೧೭ಸಿಪಿಟ೪: ಹೆಗ್ಗಡಗೆರೆ ಗ್ರಾಮದಲ್ಲಿ ಟಿಪ್ಪರ್ ಲಾರಿಗಳನ್ನು ತಡೆದು ಪ್ರತಿಭಟಿಸುತ್ತಿರುವ ಗ್ರಾಮಸ್ಥರು.ಪೊಟೋ೧೭ಸಿಪಿಟಿ೫: ಕ್ರಷರ್ ಮಾಲೀಕರು ಮತ್ತು ಗ್ರಾಮಸ್ಥರ ನಡುವೆ ನಡೆದ ಸಂಧಾನ ಸಭೆಯ ದೃಶ್ಯ.