ನೇಹಾ ಹತ್ಯೆ ಹಿಂದೂಗಳಿಗೆ ಪಾಠ

| Published : Apr 24 2024, 02:20 AM IST

ಸಾರಾಂಶ

ಅಮಾನುಷವಾಗಿ ನೇಹಾಳನ್ನು ಹತ್ಯೆ ಮಾಡಿದ ದುರುಳನಿಗೆ ನೇರವಾಗಿ ಎನ್‌ಕೌಂಟರ್‌ ಮಾಡಿ ಇಲ್ಲವೇ ತ್ವರಿತ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸುವ ತಾಕತ್ತು ರಾಜ್ಯ ಸರ್ಕಾರ ತೋರಲಿಲ್ಲ.

ಕನ್ನಡಪ್ರಭ ವಾರ್ತೆ ರಬಕವಿ - ಬನಹಟ್ಟಿ

ಹುಬ್ಬಳ್ಳಿಯ ಹಿಂದು ವಿದ್ಯಾರ್ಥಿನಿ ನೇಹಾ ಹಿರೇಮಠ ಅಮಾನುಷ ಹತ್ಯೆ ಹಿಂದೂಗಳ ಜಾಗೃತಿಗೆ ನೀಡಿದ ಪಾಠವಾಗಿದೆ ಎಂದು ಹಿಂದೂ ಸಂಘಟನೆಗಳ ಮುಖಂಡ ಶಿವಾನಂದ ಗಾಯಕವಾಡ ಹೇಳಿದರು.

ಮಂಗಳವಾರ ರಬಕವಿಯ ಜಂಗಮ ದೈವಮಂಡಳ ಮತ್ತು ಸಮಸ್ತ ಲಿಂಗಾಯತ ಸಮಾಜಗಳ ಮುಖಂಡರು ನೇಹಾ ಹಿರೇಮಠ ಹತ್ಯೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಮಾನುಷವಾಗಿ ನೇಹಾಳನ್ನು ಹತ್ಯೆ ಮಾಡಿದ ದುರುಳನಿಗೆ ನೇರವಾಗಿ ಎನ್‌ಕೌಂಟರ್‌ ಮಾಡಿ ಇಲ್ಲವೇ ತ್ವರಿತ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸುವ ತಾಕತ್ತು ರಾಜ್ಯ ಸರ್ಕಾರ ತೋರಲಿಲ್ಲ. ಸಿಎಂ ಮತ್ತು ಗೃಹಸಚಿವರು ಮೃತಳ ಹೆಸರಿಗೆ ಕಳಂಕ ಹಚ್ಚುವಂತೆ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಈ ಮೂಲಕ ನಿರ್ದಿಷ್ಟ ಕೋಮಿನ ಜನತೆಯ ಓಲೈಸುವ ಕೆಲಸ ಮಾಡಿರುವುದು ನಾಚಿಕೆಗೇಡಿತನದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದರು.

ಹಿಂದೂ ಸಹೋದರಿಯರು ಜಾಗೃತರಾಗಬೇಕು. ಯಾರೊಂದಿಗೂ ಸಲುಗೆ ಬೆಳೆಸದೇ ತಮ್ಮ ವಿದ್ಯಾಭ್ಯಾಸದತ್ತ ಚಿತ್ತ ಹರಿಸಬೇಕು. ಅನ್ಯ ಧರ್ಮಿಯರಿಂದ ಯಾವುದೇ ಬೆದರಿಕೆಗಳು ಬಂದಲ್ಲಿ ಪಾಲಕರಿಗೆ ಮತ್ತು ಯುವ ಹಿಂದೂ ಸಂಘಟನೆಗಳಿಗೆ ತಿಳಿಸಬೇಕು. ಪಾಲಕರು ನಮ್ಮ ಸಂಸ್ಕೃತಿ ಮತ್ತು ಆಚರಣೆಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಇದರಿಂದ ಲವ್‌ ಜಿಹಾದ್‌ನಂಥ ಕ್ರೂರ ಷಡ್ಯಂತ್ರಗಳನ್ನು ಬೇರುಮಟ್ಟದಲ್ಲೇ ತುಂಡರಿಸಲು ಸಾಧ್ಯ. ಸರ್ಕಾರ ಷಂಡವಾದಲ್ಲಿ ನಮ್ಮ ಮಹಿಳೆಯರನ್ನು ಕಾಪಾಡಿಕೊಳ್ಳುವ ವಿಧಾನ ನಾವೂ ಅನುಸರಿಸಬೇಕಾಗುತ್ತದೆ. ಅಂಥ ಅವಘಡಕ್ಕೆ ಸರ್ಕಾರ ಅವಕಾಶ ನೀಡದೇ ತಮ್ಮ ಹೊಣೆಗಾರಿಕೆಯನ್ನು ತಾರತಮ್ಯವಿಲ್ಲದೇ ನಿಭಾಯಿಸಬೇಕು ಎಂದು ಎಚ್ಚರಿಕೆ ನೀಡಿದರು.

ಜಂಗಮ ಸಮಾಜದ ಅಧ್ಯಕ್ಷ ಜಿ.ಎಸ್.ಅಮ್ಮಣಗಿಮಠ ಮಾತನಾಡಿ, ಪಾಲಕರು ನಮ್ಮತನ ಮರೆತಾಗ ಇಂಥ ಪ್ರಸಂಗಳನ್ನು ನಮ್ಮ ಹಿಂದೂ ಯುವತಿಯರು ಎದುರಿಸುವಂತಾಗಿದೆ. ರಾಜ್ಯದಲ್ಲಿ ಸಾಕಷ್ಟು ಪ್ರಕರಣಗಳು ನಡೆದಾಗಲೂ ಸರ್ಕಾರಗಳು ಮತಬ್ಯಾಂಕ್ ಕಾರಣಕ್ಕೆ ನಿಷ್ಕ್ರಿಯಗೊಳ್ಳುವುದು, ಹಿಂದೂಗಳ ಸಂಯಮ ಕೆಣಕುವಂತಾಗಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೇ ಹಿಂದೂ ಯುವತಿಯರು ದುರ್ಗೇಯರಾಗಬೇಕು ಎಂದರು.

ಮಾಜಿ ನಗರಾಧ್ಯಕ್ಷ ಸಂಜಯ ತೆಗ್ಗಿ, ಎಂ.ಎಸ್.ಬದಾಮಿ, ಶಿವಾನಂದ ಬಾಗಲಕೋಟಮಠ ಮಾತನಾಡಿ ನೇಹಾ ಸಾವಿಗೆ ತ್ವರಿತ ನ್ಯಾಯ ಕೊಡಿಸುವತ್ತ ಸರ್ಕಾರ ಮುಂದಾಗಬೇಕು ಎಂದರು.

ವಿ.ಹಿಂ.ಪ. ತಾಲೂಕಾಧ್ಯಕ್ಷ ವಿರುಪಾಕ್ಷಯ್ಯ ಮಠದ, ಮಲ್ಲಿಕಾರ್ಜುನ ಹೊಸಮನಿ, ದಯಾನಂದ ಬಾಗಲಕೋಟಮಠ, ಶಿವಾನಂದ ಮಠದ, ಮಲ್ಲಿಕಾರ್ಜುನ ನಾಶಿ, ಶಿವಜಾತ ಉಮದಿ, ಗಿರೀಶ ಮುತ್ತೂರ, ಧರೆಪ್ಪ ಉಳ್ಳಾಗಡ್ಡಿ, ಸೋಮಶೇಖರ ಕೊಟ್ರಶೆಟ್ಟಿ, ಶ್ರೀಶೈಲ ದಲಾಲ, ಮಹಾದೇವ ದುಪದಾಳ, ಈಶ್ವರ ನಾಗರಾಳ, ಈರಣ್ಣಾ ಗುಣಕಿ, ಶಿವಾನಂದ ಗಿಡವೀರ, ರವಿ ಮುತ್ತೂರ, ವಿಜಯಕುಮಾರ ಹಲಕುರ್ಕಿ ಮುಂತಾದವರಿದ್ದರು.