ಸಾರಾಂಶ
ಜಿಲ್ಲೆಯಾದ್ಯಂತ ನ.19ರಿಂದ ಡಿ.5ರ ವರೆಗೆ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಆಂದೋಲನ ನಡೆಯಲಿದೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಾದ್ಯಂತ ನ.19ರಿಂದ ಡಿ.5ರ ವರೆಗೆ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಆಂದೋಲನ ನಡೆಯಲಿದೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ತಿಳಿಸಿದ್ದಾರೆ.ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಈ ಆಂದೋಲನ ಜಿಲ್ಲೆಯಾದ್ಯಂತ ನಡೆಯಲಿದೆ ಎಂದರು.
ಪ್ರತಿ ನಾಗರಿಕರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ದೈನಂದಿನ ಜೀವನದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಶೌಚಾಲಯ ರಹಿತ ಕುಟುಂಬಗಳಿದ್ದರೆ ಅವರನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಿಕೊಡಬೇಕು. ಪ್ರವಾಸಿ ತಾಣಗಳಲ್ಲಿರುವ ಶೌಚಾಲಯಗಳು ಹಾಗೂ ಇತರೆ ಸಾರ್ವಜನಿಕ ಶೌಚಾಲಯಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದು ಆನಂದ್ ಪ್ರಕಾಶ್ ಮೀನಾ ಹೇಳಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಮಾಲೋಚಕ ಹರ್ಷಿತ ಪ್ರತಿಜ್ಞಾವಿಧಿ ಬೋಧಿಸಿದರು. ಈ ಕಾರ್ಯಕ್ರಮದ ಜೊತೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಅಭಿಯಾನದ ರೂಪುರೇಷೆ ಕುರಿತು ಚರ್ಚಿಸಲಾಯಿತು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಿ.ಧನರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್, ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಮಾಲೋಚಕರು ಇತರರು ಇದ್ದರು.