ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳು ಮಂಗಳೂರು ಮಹಾನಗರದ ಎಲ್ಲೆಡೆ ಸಿಗುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಕೈಗಾರಿಕೆಗಳ ಮೇಲೆ ದಾಳಿ ಮಾಡುವ ಬದಲು ಅಂಗಡಿಗಳಿಗೆ ಯಾಕೆ ರೈಡ್ ಮಾಡ್ತಿದ್ದೀರಿ? ಉತ್ಪಾದನೆ ಹಂತದಲ್ಲೇ ಏಕೆ ಇದನ್ನು ತಡೆಗಟ್ಟಲು ಆಗಿಲ್ಲ..?ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕೋಡಿಕಲ್ ಅವರ ಪ್ರಥಮ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಪರಿ ಇದು.
ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆಯೇ ಆಗದಿದ್ದರೆ ಅದು ಅಂಗಡಿಗಳಿಗೆ ಹೇಗೆ ಬರುತ್ತದೆ? ಮೂಲದಲ್ಲೇ ತಡೆಗಟ್ಟುವುದು ಬಿಟ್ಟು ಕೇವಲ ಅಂಗಡಿಗಳಿಗೆ ದಾಳಿ ನಡೆಸೋದು ಸರಿಯಲ್ಲ. ಜಾಗೃತಿ ಕಾರ್ಯಕ್ರಮಗಳಿಂದಲೂ ಏನೂ ಪ್ರಯೋಜನವಿಲ್ಲ ಎಂದು ಅಶೋಕನಗರದ ಸರಿತಾ ಲೋಬೊ ಸಲಹೆ ನೀಡಿದರು.ಎಕ್ಕೂರಿನ ಜಯಪ್ರಕಾಶ್ ಎಂಬವರು ಕರೆ ಮಾಡಿ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಿ ಅಂತ 7ನೇ ಮೇಯರ್ ಬಳಿ ಕೇಳುತ್ತಿದ್ದೇನೆ, ಇನ್ನೂ ಆಗಿಲ್ಲ. ಮೊದಲು ಈ ಪ್ಲಾಸ್ಟಿಕ್ ತಯಾರಿಕೆಯನ್ನು ಬಂದ್ ಮಾಡಿ ಎಂದು ಆಗ್ರಹಿಸಿದರು.
ಕೈಗಾರಿಕೆಗಳಿಗೆ ಅನಿರೀಕ್ಷಿತ ಭೇಟಿ- ಮೇಯರ್: ನಾಗರಿಕರ ಅಹವಾಲುಗಳಿಗೆ ಸ್ಪಂದಿಸಿದ ಮೇಯರ್ ಮನೋಜ್ ಕೋಡಿಕಲ್, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ಲಾಸ್ಟಿಕ್ ಉತ್ಪಾದನಾ ಘಟಕಗಳಿಗೆ ಅನಿರೀಕ್ಷಿತ ಭೇಟಿ ಮಾಡಿ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಪ್ಲಾಸ್ಟಿಕ್ ಬಳಕೆದಾರ ಎಲ್ಲ ಮಧ್ಯಸ್ಥದಾರರನ್ನು ಕರೆಸಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.ಬೀದಿ ಬದಿ ವ್ಯಾಪಾರಿ ಐಡಿ ಸಿಕ್ಕಿಲ್ಲ:
ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ ತಳ್ಳುಗಾಡಿಯಲ್ಲಿ ತಿಂಡಿ ಮಾರಾಟ ಮಾಡುವ ಹೇಮಲತಾ ಎಂಬವರು ಕರೆ ಮಾಡಿ, ಐದು ವರ್ಷದಿಂದ ಪ್ರಯತ್ನಿಸಿದರೂ ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಗುರುತಿನ ಚೀಟಿ ತನಗೆ ಸಿಕ್ಕಿಲ್ಲ ಎಂದು ಅಲವತ್ತುಕೊಂಡರು.ಗುಜ್ಜರಕೆರೆಗೆ ಕಲುಷಿತ ಒಳಚರಂಡಿ ನೀರು ಹರಿಯುತ್ತಿರುವುದನ್ನು ತಡೆಗಟ್ಟಬೇಕು ಹಾಗೂ ಗುಜ್ಜರಕೆರೆ ಮಧ್ಯದಲ್ಲಿ ತೀರ್ಥಕೆರೆ ನಿರ್ಮಿಸುವಂತೆ ಸ್ಥಳೀಯ ಮುಖಂಡ ನೇಮು ಕೊಟ್ಟಾರಿ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಮೇಯರ್, ಕಲುಷಿತ ನೀರು ಸೋರಿಕೆಯ ಮೂಲವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ದಂಬೆಲ್ ಸೇತುವೆ ಶಿಥಿಲ:ಮಾಲಾಡಿ ಪ್ರದೇಶದಲ್ಲಿ ಚರಂಡಿ ನೀರು ನಿಂತು ಇಡೀ ಪ್ರದೇಶದಲ್ಲಿ ಅಸಹ್ಯ ವಾಸನೆ ಹಬ್ಬಿದೆ ಎಂದು ಸ್ಥಳೀಯರಾದ ಭಗೀರಥ ದೂರಿದರೆ, ಬಂಗ್ರಕುಳೂರಿನ ದಂಬೆಲ್ ಸೇತುವೆ ಹಳೆಯದಾಗಿದ್ದು ದುರ್ಬಲವಾಗಿದೆ. ಸೇತುವೆ ಬೀಳುವ ಮೊದಲು ದುರಸ್ತಿ ಕಾಮಗಾರಿ ನಡೆಸುವಂತೆ ನಿಶಾನ್ ಡಿಸೋಜ ಒತ್ತಾಯಿಸಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮೇಯರ್ ನೀಡಿದರು.
ನಾಲ್ಕು ದಿನಕ್ಕೊಮ್ಮೆ ನೀರು!:ಕಾಟಿಪಳ್ಳ ಮೂರನೇ ಕ್ರಾಸ್ ಪ್ರದೇಶದ ಜನರಿಗೆ ಕಳೆದೆರಡು ತಿಂಗಳಿನಿಂದ ನಾಲ್ಕು ದಿನಗಳಿಗೊಮ್ಮೆ ನೀರು ಬರುತ್ತಿದೆ. ಪಕ್ಕದ ಕೃಷ್ಣಾಪುರ ಮತ್ತಿತರ ಕಡೆ ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ನೀರು ಬರುತ್ತಿದ್ದರೆ ನಮಗೆ ಮಾತ್ರ ಸಮಸ್ಯೆಯಾಗಿದೆ. 900 ರು. ಕೊಟ್ಟು ವಾರದಲ್ಲಿ ಎರಡು ಬಾರಿಯಾದರೂ ನೀರಿನ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯುವ ಪರಿಸ್ಥಿತಿ ಇದೆ ಎಂದು ರೀಟಾ ಕಾಟಿಪಳ್ಳ ಅಳಲು ತೋಡಿಕೊಂಡರು. ಇಲ್ಲಿ ನೀರು ಪೂರೈಕೆ ವ್ಯವಸ್ಥೆ ಸುಸ್ಥಿತಿಗೆ ತರಲು ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.
ಪಣಂಬೂರು ಬೀಚ್ ರಸ್ತೆಯಲ್ಲಿ ಧೂಳಿನ ಹಾವಳಿಯಿಂದ ಸ್ಥಳೀಯ ನಿವಾಸಿಗಳಿಗೆ ತೀರ ಸಮಸ್ಯೆಯಾಗಿದೆ. ಅನೇಕರು ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎಂದು ಯಶ್‌ಪಾಲ್ ಬೈಕಂಪಾಡಿ ತಿಳಿಸಿದರು. ಜಲ್ಲಿಗುಡ್ಡೆಯ ಜಯನಗರ ನಿವಾಸಿಯೊಬ್ಬರು ಮನೆಯ ತ್ಯಾಜ್ಯ ನೀರನ್ನು ರಸ್ತೆಗೆ ಬಿಡುತ್ತಿರುವ ಕುರಿತು ಮಹಿಳೆಯೊಬ್ಬರು ದೂರು ಹೇಳಿಕೊಂಡರು.ಉಪಮೇಯರ್ ಭಾನುಮತಿ ಇದ್ದರು.
15 ದಿನದೊಳಗೆ ರಸ್ತೆ ತೇಪೆ ಆರಂಭ: ಮೇಯರ್ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುಂಡಿಯೆದ್ದಿರುವ ರಸ್ತೆಗಳ ತೇಪೆ ಕಾರ್ಯವನ್ನು 15 ದಿನದೊಳಗೆ ಆರಂಭಿಸಲಾಗುವುದು ಎಂದು ಮೇಯರ್ ಮನೋಜ್ ಕೋಡಿಕಲ್ ತಿಳಿಸಿದ್ದಾರೆ.
ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಅವರು, ಕಾಮಗಾರಿ ಕೈಗೆತ್ತಿಕೊಳ್ಳಲು ಶಾರ್ಟ್ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಎಲ್ಲ 60 ವಾರ್ಡ್‌ಗಳ ತೇಪೆ ಕಾಮಗಾರಿಗೆ ಅಂದಾಜುಪಟ್ಟಿ ಸಿದ್ಧಗೊಳಿಸಲಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಿ ಎರಡು ವಾರದೊಳಗೆ ತೇಪೆ ಕಾರ್ಯ ಶುರು ಮಾಡುವುದಾಗಿ ಹೇಳಿದರು.